ಹಿರಿಯ ಮದ್ದಲೆವಾದಕ ಶಂಕರ ಭಾಗ್ವತ ಯಲ್ಲಾಪುರ ಮಾತನಾಡಿ, ಯಕ್ಷಗಾನ ಸಾಹಿತ್ಯದ ಅರಿವೂ ಇಲ್ಲದ ಕೆಲವರು ಪ್ರಸಂಗಗಳನ್ನು ಬರೆದು, ಪ್ರಸಂಗಕರ್ತರೆನಿಸಿಕೊಳ್ಳುತ್ತಿದ್ದಾರೆ. ಇದು ಯಕ್ಷಗಾನ ಕ್ಷೇತ್ರದ ದುರಂತ ಎಂದರು.
ಯಲ್ಲಾಪುರ: ಹಿರಿಯ ಭಾಗವತ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ ಅವರು ರಚಿಸಿದ ಸೌಭಾಗ್ಯ ಸುಂದರಿ ಯಕ್ಷಗಾನ ಪ್ರಸಂಗ ಲೋಕಾರ್ಪಣೆ ಹಾಗೂ ಪ್ರಥಮ ಪ್ರದರ್ಶನ ತಾಲೂಕಿನ ಹಲಸನಬೀಳು ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನಡೆಯಿತು.ಟೀಂ ಸುಧಾರ್ಣವ ಸಂಯೋಜನೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ, ಪ್ರಸಂಗವನ್ನು ದೇವಸ್ಥಾನದ ಅಧ್ಯಕ್ಷ ಹಾಗೂ ಸೀಮಾ ಪರಿಷತ್ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಲೋಕಾರ್ಪಣೆಗೊಳಿಸಿದರು.ಹಿರಿಯ ಮದ್ದಲೆವಾದಕ ಶಂಕರ ಭಾಗ್ವತ ಯಲ್ಲಾಪುರ ಮಾತನಾಡಿ, ಯಕ್ಷಗಾನ ಸಾಹಿತ್ಯದ ಅರಿವೂ ಇಲ್ಲದ ಕೆಲವರು ಪ್ರಸಂಗಗಳನ್ನು ಬರೆದು, ಪ್ರಸಂಗಕರ್ತರೆನಿಸಿಕೊಳ್ಳುತ್ತಿದ್ದಾರೆ. ಇದು ಯಕ್ಷಗಾನ ಕ್ಷೇತ್ರದ ದುರಂತ. ಆದರೆ ಗಣಪತಿ ಭಟ್ಟ ಅವರಂಥ ಅಪಾರ ಅನುಭವ, ಸಾಹಿತ್ಯ, ಸಂಗೀತ, ಛಂದಸ್ಸು ಎಲ್ಲವನ್ನೂ ಅರಿತ ಯೋಗ್ಯರು ಪ್ರಸಂಗಗಳನ್ನು ರಚಿಸುತ್ತಿರುವುದು ಉತ್ತಮ ಬೆಳವಣಿಗೆ. ಇಂಥವರಿಂದ ಶ್ರೇಷ್ಠ ಪ್ರಸಂಗಗಳು ಯಕ್ಷಗಾನಕ್ಕೆ ಸಿಗುತ್ತದೆ. ಹೆಚ್ಚಿನ ಪ್ರಸಂಗಗಳು ಅವರಿಂದ ರಚಿತವಾಗಿ ಯಕ್ಷಗಾನ ಸಾಹಿತ್ಯ ಇನ್ನಷ್ಟು ಶ್ರೀಮಂತಗೊಳ್ಳುವಂತಾಗಲಿ ಎಂದರು.ಪ್ರಸಂಗದ ಕವಿ ವಿದ್ವಾನ್ ಗಣಪತಿ ಭಟ್ಟ ಮಾತನಾಡಿ, ದೇವಿ ಭಾಗವತದಲ್ಲಿನ ಕಥಾಭಾಗವನ್ನು ಆಯ್ದು ಸೌಭಾಗ್ಯ ಸುಂದರಿ ಪ್ರಸಂಗ ರಚಿಸಲಾಗಿದೆ. ಈವರೆಗೆ 12 ಪ್ರಸಂಗಗಳನ್ನು ರಚಿಸಿದ್ದೇನೆ. ಯಕ್ಷಗಾನ ಸಾಹಿತ್ಯದಲ್ಲಿ ಇನ್ನೂ ತೊಡಗಿಸಿಕೊಳ್ಳುವ ಇಚ್ಛೆಯಿದೆ ಎಂದರು.ಪ್ರಸಂಗ ಪ್ರಥಮ ಪ್ರದರ್ಶನ ಕಾಣುತ್ತಿರುವುದು ಸಂತಸದ ಸಂಗತಿ. ಸುಧಾರ್ಣವ ತಂಡದ ಯುವ ಸಂಘಟಕರು, ಕಲಾವಿದರು, ಕಲಾಸಕ್ತರ ಉತ್ಸಾಹದಿಂದ ಈ ಕಾರ್ಯಕ್ರಮ ಸಂಘಟಿತವಾಗಿದೆ ಎಂದರು.ವೇ. ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ಅರ್ಥಧಾರಿ ಡಾ.ಮಹೇಶ ಭಟ್ಟ ಇಡಗುಂದಿ, ಅರ್ಚಕ ಸೂರ್ಯನಾರಾಯಣ ಭಟ್ಟ, ಸುಧಾರ್ಣವ ತಂಡದ ಗುರುಪ್ರಸನ್ನ ಭಟ್ಟ, ಶ್ರೀಧರ ಭಟ್ಟ, ವಿನಾಯಕ ಗುಮ್ಮಾನಿ, ವಿನಾಯಕ ಭಾಗ್ವತ ಇತರರಿದ್ದರು. ಶ್ರೀನಿವಾಸ ಭಟ್ಟ ಸ್ವಾಗತಿಸಿದರು. ಎಂ.ಎನ್. ಭಟ್ಟ ನಂದೊಳ್ಳಿ ನಿರ್ವಹಿಸಿದರು. ಮಹಾಬಲೇಶ್ವರ ಭಟ್ಟ ಬೆಳಶೇರ ವಂದಿಸಿದರು. ನಂತರ ಯುವ ಕಲಾವಿದರಿಂದ ನಡೆದ ಸೌಭಾಗ್ಯ ಸುಂದರಿ ಯಕ್ಷಗಾನದ ಪ್ರಥಮ ಪ್ರದರ್ಶನ ಕಲಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ, ಮದ್ದಲೆ ವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ, ಚಂಡೆವಾದಕರಾಗಿ ಗಣೇಶ ಗಾಂವ್ಕರ ಕನಕನಹಳ್ಳಿ ಭಾಗವಹಿಸಿದ್ದರು. ಸೌಭಾಗ್ಯ ಸುಂದರಿಯಾಗಿ ನಾಗರಾಜ ಭಟ್ಟ ಕುಂಕಿಪಾಲ, ರುದ್ರವರ್ಮನಾಗಿ ನಿರಂಜನ ಜಾಗನಳ್ಳಿ, ತಾಲಧ್ವಜನಾಗಿ ಸನ್ಮಯ ಭಟ್ಟ ಮಲವಳ್ಳಿ, ವಿಷ್ಣುವಾಗಿ ಪ್ರವೀಣ ಹೆಗಡೆ ತಟ್ಟೀಸರ, ನಾರದನಾಗಿ ಮಂಜುನಾಥ ಹೆಗಡೆ ಹಿಲ್ಲೂರು, ಲಕ್ಷ್ಮಿಯಾಗಿ ದೀಪಕ ಭಟ್ಟ ಕುಂಕಿ, ಭದ್ರಾಶ್ವ ಹಾಗೂ ಬ್ರಾಹ್ಮಣನಾಗಿ ಶ್ರೀಧರ ಅಣಲಗಾರ, ವೀರವರ್ಮನಾಗಿ ಆದರ್ಶ ಭಟ್ಟ ಈರಾಪುರ, ಸುಧನ್ವನಾಗಿ ಆತ್ರೇಯ ಗಾಂವ್ಕರ, ದೂತನಾಗಿ ಗುರು ಭಟ್ಟ ಜಂಬೇಸಾಲ ಪಾತ್ರ ನಿರ್ವಹಿಸಿದರು.