ಸಾರಾಂಶ
ದೇವಸ್ಥಾನ, ಮಠಗಳಿಗೆ ಅನುದಾನ ಕೊಡಲು ಸಾಧ್ಯ ಎಂಬುದನ್ನು ರಾಜ್ಯಕ್ಕೆ ತೋರಿಸಿಕೊಟ್ಟ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 80 ವರ್ಷ ಪೂರೈಸಿ, ೮೧ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ.
ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ
ದೇವಸ್ಥಾನ, ಮಠಗಳಿಗೆ ಅನುದಾನ ಕೊಡಲು ಸಾಧ್ಯ ಎಂಬುದನ್ನು ರಾಜ್ಯಕ್ಕೆ ತೋರಿಸಿಕೊಟ್ಟ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 80 ವರ್ಷ ಪೂರೈಸಿ, ೮೧ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ.
ಅವರು ಇಳಿವಯಸ್ಸಿನಲ್ಲೂ ೧೮ ವರ್ಷದ ಯುವಕನಂತೆ ಕೆಲಸ ಮಾಡುತ್ತಿದ್ದಾರೆ. ಅವರು ಶತಾಯುಷಿ ಆಗಲಿ. ಮುಂಬರುವ ದಿನಗಳಲ್ಲಿ ಅವರ ಜನ್ಮ ಶತಮಾನೋತ್ಸವ ಆಚರಣೆ ಮಾಡುವಂತಾಗಲಿ ಎಂದು ಶ್ರೀಶೈಲ ಜಗದ್ಗುರು ಡಾ.ಚೆನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.
ಶಿರಾಳಕೊಪ್ಪದಲ್ಲಿ ಎಸ್‌ಜೆಪಿ ಐಟಿಐ ಸಂಸ್ಥೆ ಯಿಂದ ನಿರ್ಮಿಸಿದ ನೂತನ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಇಷ್ಠಲಿಂಗ ಮಹಾಪೂಜೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮದಿನಾಚರಣೆ, ಎಸ್‌ಜೆಪಿ ಐಟಿಐ ಸಂಸ್ಥೆ ಉಪಾಧ್ಯಕ್ಷ ಹಾಗೂ ತೊಗರ್ಸಿ ಮಳೇ ಹಿರೇಮಠದ ಸ್ವಾಮೀಜಿಗಳ ೭೫ನೇ ವರ್ಷದ ಹುಟ್ಟುಹಬ್ಬ, ಸಂಸ್ಥೆ ಕಾಯರ್ದರ್ಶಿ ಡಾ. ಮುರಘರಾಜ್ ಅವರ ೮೦ನೇ ವರ್ಷದ ಹುಟ್ಟುಹಬ್ಬ, ಧರ್ಮ ಜಾಗೃತಿ ಸಮಾರಂಭ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಳೆದ ವರ್ಷ ವಿಮಾನ ನಿಲ್ದಾಣ ಉದ್ಘಾಟನೆ ಸಮಯದಲ್ಲಿ ಪ್ರಧಾನಿ ಸಮ್ಮುಖ ಯಡಿಯೂರಪ್ಪನವರ ಹುಟ್ಟುಹಬ್ಬ ಆಚರಣೆ ನಡೆದಿತ್ತು. ಈ ಬಾರಿ ₹೬ ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣ ಮಾಡಿಸಿಕೊಟ್ಟ ಸಮುದಾಯ ಭವನದಲ್ಲಿ ಜಗದ್ಗುರು ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಇದೊಂದು ಸೇವೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ಕೆ ಉಪಯೋಗ ಆಗಲಿದ್ದು, ಹತ್ತಾರು ಜನರಿಗೆ ಉದ್ಯೋಗ ಕಲ್ಪಿಸಿದ ಕಾರ್ಯವೂ ಆಗಿದೆ ಎಂದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದಕ್ಕೂ ಮೊದಲು ಏನೇ ಅನುದಾನ ಕೊಟ್ಟರೂ ೨ ಲಕ್ಷ, ೫ ಲಕ್ಷ ಬಹಳವೆಂದರೆ ೧೦ ಲಕ್ಷ ಅನುದಾನ ಕೊಡಲಾಗುತ್ತಿತ್ತು. ಆದರೆ, ಮಠಗಳ ಮೂಲಕವೂ ಜನಸೇವೆಗೆ ಕೋಟಿ ಕೋಟಿ ಅನುದಾನ ಕೊಡಲು ಸಾಧ್ಯ ಎಂಬುದನ್ನು ಯಡಿಯೂರಪ್ಪ ತೋರಿಸಿಕೊಟ್ಟರು.
ಅನುದಾನ ಕೊಟ್ಟಾಗ ಟೀಕೆ ಮಾಡಿದವರಿಗೆ ಯಡಿಯೂರಪ್ಪ ಸರ್ಕಾರ ಮಾಡದ ಕೆಲಸವನ್ನು ಮಠ- ಮಾನ್ಯಗಳು ಮಾಡುತ್ತಿವೆ. ಮಠಗಳಿಗೆ ಅನುದಾನ ಕೊಟ್ಟರೆ ತಪ್ಪೇನು ಎಂದು ವಿರೋಧಿಗಳಿಗೆ ಅವರು ತಿರುಗೇಟು ನೀಡಿದ್ದರು ಎಂದು ಸ್ಮರಿಸಿದರು.
ಈ ಹಿಂದೆ ಎರಡು ಮಕ್ಕಳು ಇದ್ದರೆ ಒಬ್ಬ ದೇಶಕಾಯಲು, ಇನ್ನೊಬ್ಬ ಮನೆ ನೋಡಲು ಎಂದು ಭಾವಿಸುತ್ತಿದ್ದರು. ಇಂದು ಯಡಿಯೂರಪ್ಪ ಅವರು ಒಬ್ಬ ಮಗನನ್ನು ರಾಜ್ಯ ನೋಡಲು, ಮತ್ತೊಬ್ಬನನ್ನು ಜಿಲ್ಲೆಯ ಅಭಿವೃದ್ಧಿ ಮಾಡಲೆಂದು ಬಿಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಾಡುವಂತಹ ಅಭಿವೃದ್ಧಿಗಳ ಎಲ್ಲ ಕೆಲಸಗಳು ಮುಗಿದಿವೆ ಎಂಬಂತಿದೆ.
ದೇಶದಲ್ಲಿ ಅಭಿವೃದ್ಧಿ ಕೆಲಸ ಮಾಡುವಲ್ಲಿ ಬಿ.ವೈ. ರಾಘವೇಂದ್ರ ಮೊದಲಿಗರು ಎಂಬ ಮಾತಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಇಂತಹ ವ್ಯಕ್ತಿಯನ್ನು ನೀವೆಲ್ಲರೂ ಬೆಂಬಲಿಸಬೇಕು ಎಂದು ತಿಳಿಸಿದರು.
ಆನಂದಪುರ ಮಠದ ಸ್ವಾಮಿಗಳು ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯ ಅಲ್ಲಮ ಹಾಗೂ ಉಡತಡಿಯ ಅಕ್ಕನ ಕ್ಷೇತ್ರದಿಂದ ಪ್ರಾರಂಭವಾದ ಯಾತ್ರೆ ಕೂಡಲ ಸಂಗಮಕ್ಕೆ ಹೋಗಿ ಸೇರಿ ಶರಣರ ಸಮಾಗಮವಾಗಿದೆ. ಇಂದು ಶಿಕಾರಿಪುರಕ್ಕೆ ಬಂದಾಕ್ಷಣ ನಮಗೆ ಶರಣರ ನಾಡಿಗೆ ಸ್ವಾಗತ ಎಂಬ ಬೋರ್ಡ್ ನೋಡುತ್ತೇವೆ. ರಾಜ್ಯದಲ್ಲಿ ಶಿಕಾರಿಪುರ ತಾಲೂಕು ಶರಣರ ಬೀಡು ಎಂದು ಕಂಡುಬರುತ್ತದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶರಣರ ನಾಡು ಶಿಕಾರಿಪುರ ತಾಲೂಕಿಗೆ ಹಾಗೂ ಶ್ರೀಶೈಲಕ್ಕೂ ಅವಿನಾಭಾವ ಸಂಬಂಧವಿದೆ. ಗುರುಗಳು ಹೇಳಿದ ಕೆಲಸವನ್ನು ಮಾಡಲಾಗುತ್ತಿದೆ. ಶಿವಶಕ್ತಿ ಸಮುದಾಯ ಭವನ ನಿರ್ಮಿಸಲಾಗಿದೆ.
ಅಲ್ಲಮ ಪ್ರಭುಗಳ ಜನ್ಮಸ್ಥಳ ಬಳ್ಳಿಗಾವಿಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಇರುವಂತಹ ತೊಂದರೆಗಳನ್ನು ನಿವಾರಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಶಿರಾಳಕೊಪ್ಪ ವಿರಕ್ತ ಮಠದ ಸಿದ್ದೇಶ್ವರ ಶ್ರೀ ಮಾತನಾಡಿದರು. ಎಸ್.ಜೆ.ಪಿ. ಐಟಿಐ ಉಪಾಧ್ಯಕ್ಷರಾದ ತೊಗರ್ಸಿ ಮಹಂತ ಸ್ವಾಮೀಜಿ ಸಂಸ್ಥೆ ನಡೆದು ಬಂದ ಬಗ್ಗೆ ತಿಳಿಸಿದರು.
ವೀರಾಪುರದ ಡಾ.ಮರಳಸಿದ್ದ ಪಂಡಿತಾರಾಧ್ಯ ಸ್ವಾಮೀಜಿ, ಕೆಳದಿ ಸಂಸ್ಥಾನ ಮಠದ ಡಾ.ಮಹೇಶ್ವರ ಶ್ರೀ, ತೊಗರ್ಸಿ ಚೆನ್ನವೀರ ದೇಶೀಕೇಂದ್ರ ಶ್ರೀ, ತೊಗರ್ಸಿ ಮಳೇ ಹಿರೇಮಠದ ಕಿರಿಯ ಶ್ರೀ, ಸಾಲೂರು ಗುರುಲಿಂಗ ಜಂಗಮ ಶಿವಾಚಾರ್ಯರು, ದಿಂಡದ ಹಳ್ಳಿ ಪಶುಪತಿ ಶಿವಾನಂದ ಸ್ವಾಮೀಜಿ, ಡಾ.ಮುರಘರಾಜ, ಕೆ.ರೇವಣಪ್ಪ, ಸಣ್ಣ ಹನುಮಂತಪ್ಪ ಇನ್ನಿತರ ಮಠಗಳ ಸ್ವಾಮಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ ಸಂಪೂರ್ಣ ಅಭಿವೃದ್ಧಿ: ಯಡಿಯೂರಪ್ಪ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನಾವು ಮಾಡುವ ಕೆಲಸಗಳು ಮಾತನಾಡಬೇಕು, ಮಾತನಾಡುವುದೇ ಕೆಲಸ ಆಗಬಾರದು.
ಶಿವಮೊಗ್ಗ ಜಿಲ್ಲೆಯನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗಿದೆ. ವಿಶೇಷವಾಗಿ ಸಂಸದ ಬಿ.ವೈ. ರಾಘವೇಂದ್ರ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಶಿಕಾರಿಪುರ ತಾಲೂಕು ಪುಣ್ಯಭೂಮಿ, ಕಮರ್ಭೂಮಿಯಾಗಿದೆ.
ಇಲ್ಲಿ ಶ್ರೀಶೈಲ ಜಗದ್ಗುರುಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಎಲ್ಲರ ಸೌಭಾಗ್ಯ. ಜಿಲ್ಲೆ ಹಾಗೂ ತಾಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ನನಗೆ ಅನ್ನಿಸಿದಂತೆ ಯಾವುದೇ ಕಾರ್ಯ ಬಾಕಿ ಉಳಿದಿಲ್ಲ. ಅಕ್ಕಮಹಾದೇವಿ ಹಾಗೂ ನಾಟ್ಯರಾಣಿ ಶಾಕುಂತಲೆ ಅಂಥವರು ಜನ್ಮತಾಳಿದ ನಾಡಿನಲ್ಲಿ ಹುಟ್ಟಿರುವುದೇ ಭಾಗ್ಯ ಎಂದರು.