ಸಾರಾಂಶ
ಚನ್ನಗಿರಿ: ಜೀವನದಲ್ಲಿ ಎಂತಹ ಸವಾಲುಗಳೇ ಬಂದರೂ ಅದನ್ನು ಸಮರ್ಥವಾಗಿ ಎದುರಿಸುವ ಆತ್ಮಬಲ ಇರಬೇಕಾಗಿದೆ, ಸುಂದರವಾದ ಮನೆ ಕಟ್ಟಿದ ಮನುಷ್ಯ ಆ ಮನೆಯಲ್ಲಿ ಹೇಗೆ ಬಾಳಬೇಕು ಎಂಬುದನ್ನು ಮರೆಯುತ್ತಾನೆ, ಒಳ್ಳೆಯದಕ್ಕೂ, ಕೆಟ್ಟದಕ್ಕೂ ಮನುಷ್ಯನ ಮನಸ್ಸೇ ಕಾರಣವಾಗಿರುತ್ತದೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಗುರುವಾರ ತಾಲೂಕಿನ ತಾವರೆಕೆರೆ ಶಿಲಾಮಠದಲ್ಲಿ ಸಿದ್ದಿಪುರುಷ ಲಿಂಗೈಕ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯರ 54ನೇ ವರ್ಷದ ಮತ್ತು ಲಿಂಗೈಕ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯರ 72ನೇ ವರ್ಷದ ಪುಣ್ಯ ಸ್ಮರಣೋತ್ಸವ ಮತ್ತು ಧಾರ್ಮಿಕ ಸಮಾರಂಭದ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.ಮನುಷ್ಯರಾದವರು ಜೀವನದಲ್ಲಿ ಕಲಿಯಬೇಕಾದದ್ದು ಬಹಳಷ್ಟಿದೆ. ದೃಢ ಸಂಕಲ್ಫ, ಶಕ್ತಿ ಇಲ್ಲದೆ ಮಾಡುವ ಕೆಲಸಗಳು ಕೈ ಗೂಡುವುದಿಲ್ಲ. ಜೀವನದಲ್ಲಿ ನಂಬಿಕೆ ಮತ್ತು ವಿಶ್ವಾಸ ಮುಖ್ಯವಾಗಿದ್ದು, ಭವ ಬಂಧನದಿಂದ ಮುಕ್ತಗೊಳ್ಳಲು ಗುರುತೋರಿದ ದಾರಿಯಲ್ಲಿ ಸಾಗಬೇಕಾಗುತ್ತದೆ ಎಂದರು.
ಲಿಂಗೈಕ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯರು ವಾಕ್ ಸಿದ್ಧಿ ಪುರುಷರಾಗಿ ಸಮಾಜಮುಖಿ ಸತ್ಕಾರ್ಯಗಳನ್ನು ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಲಿಂಗೈಕ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯರು ಸತ್ಕರ್ಮನುಷ್ಠಾನದಿಂದ ಭಕ್ತರ ಬಾಳಿನಲ್ಲಿ ಬೆಳಕು ತೋರಿದವರು. ಈ ಉಭಯ ಶ್ರೀಗಳವರ ಸ್ಮರಣೋತ್ಸವವನ್ನು ಆಚರಣೆ ಮಾಡುತ್ತೀರುವುದು ಸಂತೋಷದ ಸಂಗತಿಯಾಗಿದೆ ಎಂದು ನುಡಿದರು.ಸಂಪತ್ತಿನ ಬದುಕಿನಲ್ಲಿ ಬಾಳುವ ಮನುಷ್ಯನಿಗೆ ಗುಣವಂತರ ಗುಣಾದರ್ಶಗಳು ಕಾಣಲಾರವು. ಬದುಕಿನ ಉನ್ನತಿ ಮತ್ತು ಶ್ರೇಯಸ್ಸಿಗೆ ಶ್ರೀಗುರು ಮುಖ್ಯ ಎಂದು ಅವರು, ಪರಿವರ್ತನಾಶೀಲ ಸಮಾಜ ನಿರ್ಮಾಣಕ್ಕೆ ಗುರುಬೋಧಾಮೃತ ಅವಶ್ಯಕ ಎಂದರು.
ಸಮಾರಂಭದ ನೇತೃತ್ವ ವಹಿಸಿದ್ದ ಎಡೆಯೂರು ಕ್ಷೇತ್ರದ ಮಠಾಧ್ಯಕ್ಷ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲರೂ ಎಲ್ಲಾ ಸಂದರ್ಭಗಳಲ್ಲಿಯೋ ಎಲ್ಲರ ಮೆಚ್ಚುಗೆ ಗಳಿಸಲು ಸಾಧ್ಯವಾಗುವುದಿಲ್ಲ. ಮನುಷ್ಯ ತನ್ನ ಅಂತರಂಗ ಒಪ್ಪುವ ಹಾಗೆ ಉತ್ತಮ ಕೆಲಸ ಮಾಡಬೇಕು ಎಂದ ಅವರು, ಮರೆವು ಬಂದಾಗ ಅರಿವು ದೂರವಾಗುತ್ತದೆ. ಅಜ್ಞಾನ ಸರಿಸಿ ಜ್ಞಾನ ಕೊಡುವ ಶಕ್ತಿ ಶ್ರೀ ಗುರುವಿಗೆ ಇದೆ ಎಂದು ತಿಳಿಸಿದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಬಸವರಾಜ ವಿ.ಶಿವಗಂಗಾ, ಮನುಷ್ಯನ ಮನದಂಗಳದಲ್ಲಿ ಸತ್ಯ ಶಾಂತಿಗಳಂತಹ ದೈವಿ ಗುಣಗಳನ್ನು ಸಂಪಾದಿಸಿಕೊಂಡು ಬಾಳಬೇಕು. ನೀತಿ, ಧರ್ಮ, ಗುರು ಮತ್ತು ದೇಶದ ಬಗ್ಗೆ ಉದಾತ್ತವಾದ ಭಾವನೆಗಳಿರಬೇಕು ಎಂದರು.
ವಿವಿಧ ಮಠಗಳ ಮಠಾಧೀಶರಾದ ವಿರೂಪಾಕ್ಷ ಲಿಂಗ ಶಿವಾಚಾರ್ಯ ಸ್ವಾಮೀಜಿ, ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಗಂಗಾಧರ ಶಿವಾಚಾರರ್ಯ ಸ್ವಾಮೀಜಿ, ರುದ್ರಮುನಿ ಶಿವಾಚಾರ್ಯ ಶ್ರೀ, ಕಲ್ಯಾಣ ಸ್ವಾಮೀಜಿ, ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಬಸವ ಜಯಚಂದ್ರ ಸ್ವಾಮೀಜಿ, ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಅಭಿನವ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಭಕ್ತ ಸಮೂಹ ಹಾಜರಿದ್ದರು.