ಸಾರಾಂಶ
ರಟ್ಟೀಹಳ್ಳಿ: ಈ ಬಾರಿಯ ಲೋಕಸಭಾ ಚುನಾವಣೆ ಸರ್ವಾಧಿಕಾರ ವರ್ಸಸ್ ಸಮಾನತೆಯ ಮೇಲೆ ನಡೆಯುತ್ತಿದೆ. ದೀನ ದಲಿತರ, ಬಡವರ, ಶೋಷಿತರ ಅಭಿವೃದ್ಧಿಗೆ ಸದಾ ಶ್ರಮಿಸುವ ಕಾಂಗ್ರೆಸ್ ಆಯ್ಕೆ ನಿಮ್ಮದಾಗಲಿ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮತದಾರರಿಗೆ ಮನವಿ ಮಾಡಿದರು.
ಪಟ್ಟಣದ ವೀರಭದ್ರೇಶ್ವರ ಕಲ್ಯಾಣಮಂಟಪದ ಆವರಣದಲ್ಲಿ ನಡೆದ ಹಾವೇರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಬಿಜೆಪಿ ನೇತೃತ್ವದ ನರೇಂದ್ರ ಮೋದಿಯವರು ಸರ್ವಾಧಿಕಾರಿಯಂತೆ ವರ್ತಿಸಿ ಹತ್ತು ವರ್ಷದ ಆಡಳಿತಾವಧಿಯಲ್ಲಿ ರಾಜ್ಯಕ್ಕೆ ಬರಬೇಕಾರ ಅನೇಕ ಅನುದಾನಗಳನ್ನು ಮೊಟಕುಗೊಳಿಸಿ ಕರ್ನಾಟಕಕ್ಕೆ ಸದಾ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ರಾಜ್ಯದ ಬರ ಪರಿಹಾರಕ್ಕಾಗಿ ಸಿದ್ದರಾಮಯ್ಯನವರು 18 ಸಾವಿರ ಕೋಟಿ ಪರಿಹಾರ ಕೇಳಿದರೆ ಕೊಟ್ಟಿದ್ದು ಮಾತ್ರ ಬಿಡಿಗಾಸು. ಆದ್ದರಿಂದ ಇಂತಹ ಪಕ್ಷಕ್ಕೆ ಮತದಾರರು ಈ ಬಾರಿ ತಕ್ಕ ಉತ್ತರ ನೀಡುತ್ತಾರೆ ಎಂದು ಕಿಡಿಕಾರಿದರು.
ರಾಣಿಬೆನ್ನೂರ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಶೂನ್ಯ. ಹಾಗಾಗಿ ಮೇ 7ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಶಾಸಕ ಯು.ಬಿ. ಬಣಕಾರ, ಮಾಜಿ ಸಚಿವ ಆರ್. ಶಂಕರ, ರಟ್ಟೀಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ವಸಂತ ದ್ಯಾವಕ್ಕಳವರ, ನಿಂಗಪ್ಪ ಚಳಗೇರಿ, ಹನುಮಂತಗೌಡ ಭರಮಣ್ಣನವರ, ಸುನಿತಾ ದ್ಯಾವಕ್ಕಳವರ, ವಿಜಯ ಅಂಗಡಿ, ಪರಮೇಶಪ್ಪ ಕಟ್ಟೇಕಾರ, ರಮೇಶ ಮಡಿವಾಳರ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.