ಸಾರಾಂಶ
- ಶಾಸಕನಾಗಿದ್ದಾಗ ₹700 ಕೋಟಿ ತಂದಿದ್ದೆ: ಮಾಜಿ ಶಾಸಕ ಬಸವರಾಜ ನಾಯ್ಕ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ನಾನು ಶಾಸಕನಾದ ಅವಧಿಯಲ್ಲಿ ಸುಮಾರು ₹700 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಮಾಯಕೊಂಡ ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸಿದ್ದೆ. ಆದರೆ ಪ್ರಸ್ತುತ ಕಾಂಗ್ರೆಸ್ ಶಾಸಕರು ಗ್ಯಾರಂಟಿ ಹೆಸರಲ್ಲಿ ಕ್ಷೇತ್ರಕ್ಕೆ ನಯಾಪೈಸೆ ತಂದು ಅಭಿವೃದ್ಧಿಪಡಿಸಿಲ್ಲ. ತಾಂಡಾಭಿವೃದ್ಧಿ ನಿಗಮ ಅಧ್ಯಕ್ಷನಾದಾಗ ರಸ್ತೆಗಳೇ ಇಲ್ಲದ ಹಲವಾರು ತಾಂಡಾಗಳು, ಹಳ್ಳಿಗಳಿಗೆ ರಸ್ತೆ ಮಾಡಿಸಿದ್ದೀನಿ. 15 ವರ್ಷಗಳ ಹಿಂದೆ ನಿರ್ಮಿಸಿದ ರಸ್ತೆಗಳು ಈಗಲೂ ಸುಸ್ಥಿತಿಯಲ್ಲಿವೆ ಎಂದು ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಹೇಳಿದರು.
ಸೋಮವಾರ ಮಾಯಕೊಂಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ಮಾಯಕೊಂಡ ಸೇರಿದಂತೆ ಹಲವಾರು ಹಳ್ಳಿಗಳನ್ನು ಅಭಿವೃದ್ಧಿಪಡಿಸಿದ್ದೇನೆ. ಕ್ಷೇತ್ರದ ಹೆಮ್ಮೆನಬೇತೂರು ಹಳ್ಳಿಯಿಂದ ಹಿಡಿದು ಕಂಚುಗಾರನಹಳ್ಳಿಯ 110 ಗ್ರಾಮಗಳಲ್ಲಿಯೂ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಈ ಹಿಂದೆ ಬಿಜೆಪಿ ಅವಧಿಯಲ್ಲಿ ಮಾಯಕೊಂಡಕ್ಕೆ ಮಂಜೂರಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವು ನನೆಗುದಿಗೆ ಬಿದ್ದಿದೆ. ಬಿಜೆಪಿ ಅವಧಿಯಲ್ಲಿ ಜಾಗವನ್ನು ಗುರುತಿಸಿ ಮಂಜೂರು ಮಾಡಿಸಲಾಗಿತ್ತು ಎಂದು ತಿಳಿಸಿದರು.ಕೇಂದ್ರ ಸರ್ಕಾರ ಮುಂದಿನ ಚುನಾವಣೆ ವೇಳೆಗೆ ಸಂಪೂರ್ಣ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಪಕ್ಷದ ಕಾರ್ಯಕರ್ತರನ್ನು ಹುರಿಗೊಳಿಸಲು ಕ್ಷೇತ್ರದ ಎಲ್ಲ 252 ಬೂತ್‌ಗಳಿಗೂ ಅಧ್ಯಕ್ಷರನ್ನು, ಸದಸ್ಯರನ್ನು ನೇಮಕ ಮಾಡಿ ಬಿಜೆಪಿ ಮುಂದಿನ ಚುನಾವಣೆಗೆ ತಯಾರಿ ನಡೆಸಿದೆ ಎಂದರು.
ಮಾಯಕೊಂಡ ಮಂಡಲದ ಅಧ್ಯಕ್ಷ ಬಿ.ಜಿ. ಸಚಿನ್ ಮಾತನಾಡಿ, ಪ್ರಸ್ತುತ ದಾವಣಗೆರೆ ಲೋಕಸಭಾ ಸಂಸದರು ಕೇವಲ ನಗರಕ್ಕೆ ಮಾತ್ರ ಸೀಮಿತ ಚುನಾವಣೆಯಲ್ಲಿ ಗೆದ್ದಾಗಿನಿಂದ ಇವತ್ತಿನವರೆಗೂ ಮಾಯಕೊಂಡಕ್ಕೆ ಬಂದಿಲ್ಲ. ಕೋವಿಡ್ ಸಮಯದಲ್ಲಿ ನಿಂತಂತಹ ಹಲವು ರೈಲುಗಳು ಪುನಃ ಓಡಾಡಲೇ ಇಲ್ಲ. ರಾಜ್ಯ ಸರ್ಕಾರ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಬ್ಯಾಲೆಟ್ ಅನ್ನು ತರಲು ಯೋಚಿಸಿದೆ. ಆದಕಾರಣ ಸರ್ಕಾರದಲ್ಲಿ ಈವಿಎಂ ಕೊಳ್ಳಲು ದುಡ್ಡಿಲ್ಲ ಎಂದು ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ರಾಜಶೇಖರ, ಪೂಜಾರ್ ಅಶೋಕ್, ಗುರುನಾಥ್, ಮಾದಪ್ಪ, ಶಿವಮೂರ್ತಿ. ರಂಗಸ್ವಾಮಿ ಉಪಸ್ಥಿತರಿದ್ದರು.
- - --20ಕೆಡಿವಿಜಿ31:
ಮಾಯಕೊಂಡದಲ್ಲಿ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.