ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪರವೂರ ತ್ಯಾಜ್ಯ!

| Published : Feb 19 2024, 01:30 AM IST

ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪರವೂರ ತ್ಯಾಜ್ಯ!
Share this Article
  • FB
  • TW
  • Linkdin
  • Email

ಸಾರಾಂಶ

ಬೇರೆ ಊರುಗಳಿಂದ ತಂದ ರಾಶಿ ರಾಶಿ ಕಸವನ್ನು ರಸ್ತೆ ಬದಿಯಲ್ಲಿ ಸುರಿದು ಹೋಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿದಕ್ಷಿಣ ಕೊಡಗಿನ ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೊರಗಿನವರಿಂದ ಕಸದ ಸಮಸ್ಯೆ ಸೃಷ್ಟಿಯಾಗಿದೆ. ಬೇರೆ ಊರುಗಳಿಂದ ತಂದ ರಾಶಿ ರಾಶಿ ಕಸವನ್ನು ರಸ್ತೆ ಬದಿಯಲ್ಲಿ ಸುರಿದು ಹೋಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾ.ಪಂ. 10 ಸಾವಿರ ರು. ದಂಡ ವಿಧಿಸುವ ಎಚ್ಚರಿಕೆ ನೀಡಿದೆ.

ಕಸ ಸುರಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಗ್ರಾ.ಪಂ. ಅಧ್ಯಕ್ಷ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ, ಮಾಯಮುಡಿ ಇಲ್ಲಿಯವರೆಗೆ ಸ್ವಚ್ಛ ಗ್ರಾಮವಾಗಿತ್ತು. ಆದರೆ ಇತ್ತೀಚೆಗೆ ಬೇರೆ ಊರುಗಳಿಂದ ಕಸದ ರಾಶಿಯನ್ನು ತಂದು ಇಲ್ಲಿ ಸುರಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವಿದೆ. ಬೇರೆ ಊರಿನಿಂದ ಕಸವನ್ನು ತಂದು ಎಲ್ಲೆಂದರಲ್ಲಿ ಹಾಕುತ್ತಿರುವ ಕಿಡಿಗೇಡಿಗಳು ಅಶುಚಿತ್ವದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಇದನ್ನು ಗ್ರಾ.ಪಂ. ಗಂಭೀರವಾಗಿ ಪರಿಗಣಿಸಿದ್ದು, ಯಾರೇ ಕಸ ಹಾಕಿದರೂ 10 ಸಾವಿರ ರು. ದಂಡ ವಿಧಿಸಲಾಗುವುದು ಮತ್ತು ಕಸ ಹಾಕುವವರ ಮೇಲೆ ನಿಗಾ ವಹಿಸಲು ನಾಲ್ಕು ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದರು.

ಹಸಿರ ಪರಿಸರದಿಂದ ಕೂಡಿರುವ ಕೊಡಗು ಅತ್ಯಂತ ಸುಂದರವಾದ ಜಿಲ್ಲೆಯಾಗಿದೆ. ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಈ ಜಿಲ್ಲೆಯ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಪ್ರತಿಯೊಂದು ಗ್ರಾಮ ಸ್ವಚ್ಛವಾಗಿದ್ದರೆ ಇಡೀ ಕೊಡಗು ಸ್ವಚ್ಛವಾಗಿರುತ್ತದೆ, ಆದ್ದರಿಂದ ಸ್ವಚ್ಛ ಪರಿಸರಕ್ಕಾಗಿ ಸಾರ್ವಜನಿಕರು ಗ್ರಾ.ಪಂ.ನೊಂದಿಗೆ ಕೈಜೋಡಿಸಬೇಕು ಎಂದು ಟಾಟು ಮೊಣ್ಣಪ್ಪ ಮನವಿ ಮಾಡಿದರು.

ಶ್ರಮದಾನ : ಚನ್ನಂಗೊಲ್ಲಿಯಿಂದ ಕೋಣನ ಕಟ್ಟೆ ರಸ್ತೆಯ ಎರಡೂ ಬದಿಗಳಲ್ಲಿ ಬಿದ್ದಿದ್ದ ಪರ ಊರಿನ ಕಸದ ರಾಶಿ ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮಾಯಮುಡಿ ಗ್ರಾಮ ಪಂಚಾಯಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶೌರ್ಯ ಹಾಗೂ ವಿಪತ್ತು ತಂಡದ ಸಹಯೋಗದಲ್ಲಿ ಶ್ರಮದಾನದ ಮೂಲಕ ತೆರವುಗೊಳಿಸಲಾಯಿತು.

ಪಂಚಾಯಿತಿ ಅಧ್ಯಕ್ಷ ಟಾಟು ಮೊಣ್ಣಪ್ಪ, ಅಭಿವೃದ್ಧಿ ಅಧಿಕಾರಿ ರವಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಯಮುಡಿ ವಲಯದ ಮೇಲ್ವಿಚಾರಕ ದಾನೇಶ್ ಕುಮಾರ್, ಗ್ರಾ.ಪಂ. ಸದಸ್ಯ ಕೆ.ಕೆ.ಶಬರೀಶ್, ಸಿಬ್ಬಂದಿಯಾದ ಬಾನಂಡ ಆಶಾ ಸೂದನ್, ಟಿ.ಜಿ.ಸಚಿತಾ, ಎನ್.ಆರ್.ಗುರು, ಉಮ್ಮೇರ, ಗ್ರಾಮದ ಪ್ರಮುಖರಾದ ಸಣ್ಣುವಂಡ ಪ್ರಸಾದ್ ಅಚ್ಚಯ್ಯ, ಚಿಮ್ಮಿಣಮಾಡ ರಾಜ ಪೊನ್ನಪ್ಪ ಸೇರಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶೌರ್ಯ ಮತ್ತು ವಿಪತ್ತು ತಂಡದ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.