ಫೆಬ್ರವರಿ 2ರಂದು ‘ಮೇಯರ್‌ ಕಪ್‌’ ರಾಜ್ಯ ಮಟ್ಟದ ಈಜು ಸ್ಪರ್ಧೆ

| Published : Jan 30 2025, 12:30 AM IST

ಫೆಬ್ರವರಿ 2ರಂದು ‘ಮೇಯರ್‌ ಕಪ್‌’ ರಾಜ್ಯ ಮಟ್ಟದ ಈಜು ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲಕ- ಬಾಲಕಿಯರ ಒಟ್ಟು 14 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ರಾಜ್ಯದ ಹೊಸ ಪ್ರತಿಭೆಗಳಿಗೆ ವೇದಿಕೆ ನೀಡುವ ಉದ್ದೇಶದಿಂದ ನಾನ್‌ ಮೆಡ್ಲಿಸ್ಟ್‌ ವಿಭಾಗದಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 70 ವೈಯಕ್ತಿಕ ವಿಭಾಗ ಹಾಗೂ ಆರು ರಿಲೇ ವಿಭಾಗದಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ವಿವರಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆ ಹಾಗೂ ವಿ ಒನ್‌ ಅಕ್ವಾಟಿಕ್‌ ಕ್ಲಬ್‌ ಸಹಯೋಗದಲ್ಲಿ ರಾಜ್ಯಮಟ್ಟದ ಈಜು ಸ್ಪರ್ಧೆ ‘ಮೇಯರ್‌ ಕಪ್‌’ ಫೆ.2ರಂದು ಎಮ್ಮೆಕೆರೆ ಈಜುಕೊಳದಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 9 ಗಂಟೆಗೆ ಈಜು ಸ್ಪರ್ಧೆಯನ್ನು ಮೇಯರ್‌ ಮನೋಜ್‌ ಕುಮಾರ್‌ ಉದ್ಘಾಟಿಸಲಿದ್ದಾರೆ. ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌, ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಶಾಸಕರಾದ ವೇದವ್ಯಾಸ ಕಾಮತ್‌, ಡಾ.ವೈ. ಭರತ್‌ ಶೆಟ್ಟಿ, ಉಪಮೇಯರ್‌ ಭಾನುಮತಿ, ವಿಧಾನ ಪರಿಷತ್‌ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್‌ ಡಿಸೋಜ, ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಪ್ರತಿಪಕ್ಷ ನಾಯಕ ಅನಿಲ್‌ ಕುಮಾರ್‌, ಆಯುಕ್ತ ರವಿಚಂದ್ರ ನಾಯಕ್‌, ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗ್ರವಾಲ್‌, ಮಂಗಳೂರು ಸ್ಮಾರ್ಟ್‌ ಸಿಟಿ ಜಿಎಂ ಅರುಣ್‌ ಪ್ರಭಾ, ಡಿವೈಎಸ್‌ಇ ಉಪ ಆಯುಕ್ತ ಪ್ರದೀಪ್‌ ಡಿಸೋಜ, ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಸ್ಥಳೀಯ ಕಾರ್ಪೊರೇಟರ್‌ ರೇವತಿ ಭಾಗವಹಿಸಲಿದ್ದಾರೆ. ಸಂಜೆ 5ಕ್ಕೆ ಸಮಾರೋಪ ನಡೆಯಲಿದೆ ಎಂದು ಮೇಯರ್‌ ಮನೋಜ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಾಲಕ- ಬಾಲಕಿಯರ ಒಟ್ಟು 14 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ರಾಜ್ಯದ ಹೊಸ ಪ್ರತಿಭೆಗಳಿಗೆ ವೇದಿಕೆ ನೀಡುವ ಉದ್ದೇಶದಿಂದ ನಾನ್‌ ಮೆಡ್ಲಿಸ್ಟ್‌ ವಿಭಾಗದಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 70 ವೈಯಕ್ತಿಕ ವಿಭಾಗ ಹಾಗೂ ಆರು ರಿಲೇ ವಿಭಾಗದಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ವಿವರಿಸಿದರು.ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿ ವಿಜೇತರಾದ ಈಜು ಪಟುಗಳಿಗೆ ಪದಕ ಹಾಗೂ ಪ್ರಮಾಣಪತ್ರ ನೀಡಲಾಗುವುದು. ಬಾಲಕ ಹಾಗೂ ಬಾಲಕಿಯರ ಪ್ರತಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಈಜುಪಟುವಿಗೆ ವೈಯಕ್ತಿಕ ಚಾಂಪಿಯನ್‌ಶಿಪ್‌ ಪ್ರಶಸ್ತಿ ನೀಡಲಾಗುವುದು. ಸ್ಪರ್ಧಾಕೂಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೂರು ತಂಡಕ್ಕೆ ಮೇಯರ್‌ ಕಪ್‌ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮೇಯರ್‌ ಮನೋಜ್‌ ಕುಮಾರ್‌ ಹೇಳಿದರು.ವಿ ಒನ್‌ ಅಕ್ವಾಟಿಕ್‌ ಕ್ಲಬ್‌ ಅಧ್ಯಕ್ಷ ಮಧುರಾಜ್‌, ನಿರ್ದೇಶಕರಾದ ನವೀನ್‌, ರೂಪಾ, ಈಜು ತರಬೇತುದಾರ ಲೋಕರಾಜ ವಿ.ಎಸ್‌. ಇದ್ದರು.

9 ವರ್ಷಕ್ಕೆ ಈಜುಕೊಳ ನಿರ್ವಹಣೆ ಟೆಂಡರ್‌

ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ನಿರ್ಮಿಸಿರುವ ಎಮ್ಮೆಕೆರೆ ಈಜುಕೊಳ ಉದ್ಘಾಟನೆಯಾದ ಬಳಿಕ ಸುಮಾರು 6 ತಿಂಗಳ ಕಾಲ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರಲಿಲ್ಲ. ಈಜು ಕ್ರೀಡಾಪಟುಗಳ ಜತೆಗೆ ಸಾರ್ವಜನಿಕರಿಗೂ ನಿರ್ದಿಷ್ಟ ದರ ಪಾವತಿಯೊಂದಿಗೆ ಈಜುಕೊಳ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕ್ಲಬ್‌ನ ನಿರ್ದೇಶಕ ನವೀನ್‌ ತಿಳಿಸಿದರು.

ಒಟ್ಟು 9 ವರ್ಷಗಳ ಕಾಲ ವಿ ಒನ್‌ ಅಕ್ವಾಟಿಕ್‌ ಈಜುಕೊಳ ನಿರ್ವಹಣೆಯ ಟೆಂಡರ್ ವಹಿಸಿಕೊಂಡಿದ್ದು, ಟೆಂಡರ್‌ ನಿಯಮದಂತೆ ವರ್ಷಕ್ಕೆ 2.60 ಲಕ್ಷ ರು.ಗಳನ್ನು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ಗೆ ಪಾವತಿ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಈಜುಕೊಳಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಳವಾದರೆ ಈಜುಕೊಳ ಬಳಕೆಯ ಶುಲ್ಕ ಪರಿಷ್ಕರಣೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದರು.