ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಮಹಾನಗರ ಪಾಲಿಕೆಯ ತುರ್ತು ನಿಧಿಯನ್ನು ಮೇಯರ್ ದುರ್ಬಳಕೆ ಮಾಡಿದ್ದಾರೆ ಎಂದು ಪ್ರತಿಪಕ್ಷ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.ಮೇಯರ್ ಶೋಭಾ ಸೋಮನಾಚೆ ಅಧ್ಯಕ್ಷತೆಯಲ್ಲಿ ಬುಧವಾರ ಪಾಲಿಕೆ ಸಭಾಭವನದಲ್ಲಿ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮೇಯರ್ ವಿರುದ್ಧ ಸದಸ್ಯರು ಕಿಡಿಕಾರಿದರು. ಮೇಯರ್ ₹ 1 ಕೋಟಿ, ಉಪಮೇಯರ್ ₹ 50 ಲಕ್ಷ ತುರ್ತು ನಿಧಿಯನ್ನು ಸಮುದಾಯ ಭವನಕ್ಕೆ ವೆಚ್ಚ ಮಾಡಿದ್ದಾರೆ. ಬಿಜೆಪಿ ಸದಸ್ಯರಿಗೆ ಮಾತ್ರ ಅನುದಾನ ಬಿಡುಗಡೆ ಮಾಡಿದ್ದು, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಮುಜ್ಮುಲ್ ಡೋಣಿ ಆರೋಪಿಸಿದರು. ಇತರೆ ಸದಸ್ಯರು ಕೂಡ ಇದಕ್ಕೆ ದನಿ ಗೂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಶೋಭಾ ಸೋಮನಾಚೆ, ತುರ್ತು ನಿಧಿಯನ್ನು ಎಲ್ಲ ವಾರ್ಡಗಳಿಗೂ ಹಂಚಿಕೆ ಮಾಡಲಾಗಿದೆ. ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಅಸ್ತು:
ಅನಗೋಳದಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಶ್ರೀಶೈಲ ಕಾಂಬಳೆ ಈ ಸಂಬಂಧ ಸಲ್ಲಿಸಿದ್ದರು. ಜಕ್ಕೇರಿ ಹೊಂಡದಲ್ಲಿ ವಾಟರ್ ಪಾರ್ಕ ಸ್ಥಾಪಿಸಿದರೆ,ಶಾಲಾ ಮಕ್ಕಳಿಗೆ ತುಂಬಾ ಅನುಕೂಲವಾಗುತ್ತದೆ. ಪಾಲಿಕೆಗೂ ಆದಾಯವಾಗುತ್ತದೆ. ಹಾಗಾಗಿ, ಈ ವಾಟರ್ ಪಾರ್ಕಸ್ಥಾಪೆಗೆ ಮಂಜೂರಾತಿ ನೀಡುವಂತೆ ನಿತೀನ ಜಾಧವ ಸಭೆ ಗಮನ ಸೆಳೆದಿದರು. ವಾಟರ್ ಪಾರ್ಕ್ ಸ್ಥಾಪನೆ ಪ್ರಸ್ತಾವನೆಗೆ ಮಂಜೂರಾತಿ ನೀಡಲಾಯಿತು.ಮಠಾಠಿ, ಹಿಂದಿ ಮಯವಾದ ಪಾಲಿಕೆ ಸಭೆ:
ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯಸಭೆ ಸಂಪೂರ್ಣವಾಗಿ ಮರಾಠಿ, ಹಿಂದಿ ಮಯವಾಗಿತ್ತು. ಆಡಳಿತ ಕನ್ನಡ ಭಾಷೆ ಕಡೆಗಣಿಸಲಾಯಿತು. ಸಭೆಯಲ್ಲಿ ಸದಸ್ಯರು ಮರಾಠಿ, ಹಿಂದಿ ಭಾಷೆ ಬಿಟ್ಟು ಕನ್ನಡ ಮಾತನಾಡಲಿಲ್ಲ. ಮರಾಠಿ, ಹಿಂದಿ ಭಾಷೆಯಲ್ಲೇ ಚರ್ಚೆಗಳು ನಡೆದವು.ಎಲ್ ಆ್ಯಂಡ್ ಟಿ ಕಂಪನಿ ವಿರುದ್ಧ ಕಿಡಿ:
ರಾಮತೀರ್ಥ ನಗರ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಎಲ್ ಆ್ಯಂಡ್ ಟಿ ಕಂಪನಿ ಕೈಗೊಂಡಿರುವ ಕಾಮಗಾರಿ 6-7 ತಿಂಗಳಿಂದ ಸ್ಥಗಿತಗೊಂಡಿವೆ.ರಸ್ತೆಗಳನ್ನು ಅಗೆದಿರುವುದರಿಂದ ಜನರಿಗೆ ತೀವ್ರ ಸಮಸ್ಯೆ ಎದುರಾಗಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪಾಲಿಕೆ ದಂಡ ವಿಧಿಸಿದರೂ ಕಂಪನಿ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಸದಸ್ಯರು ದೂರಿದರು.ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳಿಗೆ ಯಾವುದೇ ಭಯವಿಲ್ಲ. ಎಷ್ಟೇ ಮನವಿ ಮಾಡಿದರೂ ಏನೂ ಪ್ರಯೋಜವಾಗುತ್ತಿಲ್ಲ. ನಗರದಲ್ಲಿ ಅಭಿವೃದ್ಧಿ ಕಾರ್ಯಕುಂಠಿತಗೊಂಡಿವೆ. ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಸದಸ್ಯ ಹನುಮಂತ ಕೊಂಗಾಲಿ ಆಗ್ರಹಿಸಿದರು.ಅರ್ಧಕ್ಕೆ ಸ್ಥಗಿಗೊಂಡಿರುವ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸಲು ಮೇಯರ್ ನಿರ್ದೇಶನ ನೀಡಬೇಕೆಂದು ಸದಸ್ಯರು ಆಗ್ರಹಿಸಿದರು.
ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮಾತನಾಡಿ, ರಸ್ತೆ ಕಾಮಗಾರಿ ಟೆಂಡರ್ ಪಡೆದಿರುವ ಗುತ್ತಿಗೆದಾರರು ಹಾಗೂ ಎಲ್ ಆ್ಯಂಡ್ ಟಿ ಕಂಪನಿ ಜೆಸಿಬಿ ಯಂತ್ರಗಳಿಂದ ರಸ್ತೆಗಳನ್ನು ಅಗೆದು ರಸ್ತೆ ಹಾಳು ಮಾಡಿದ್ದಾರೆ. ಈವರೆಗೆ ಕೇವಲ ಶೇ.20ರಷ್ಟು ಕಾಮಗಾರಿ ಮಾಡಿದ್ದಾರೆ. ಮಹಾಂತೇಶ ನಗರ ಮತ್ತ ರಾಮತೀರ್ಥ ನಗರದಲ್ಲಿ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ಮಾಡಿದ್ದೇವೆ ಎಂದರು.