ಸಾರಾಂಶ
ಕುದ್ರೋಳಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಕಸಾಯಿಖಾನೆಯನ್ನು ಸ್ಥಗಿತಗೊಳಿಸಲಾಗಿದ್ದರೂ ಪಕ್ಕದ ಖಾಸಗಿ ಜಾಗದಲ್ಲಿ ಅನಧಿಕೃತವಾಗಿ ಕಸಾಯಿಖಾನೆ ಕಾರ್ಯಾಚರಿಸುತ್ತಿದ್ದುದು ಶುಕ್ರವಾರ ಪತ್ತೆಯಾಗಿದೆ. ಈ ಬಗ್ಗೆ ದೂರಿನ ಮೇರೆಗೆ ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ವಧೆಗಾಗಿ ಕಟ್ಟಿಹಾಕಿದ್ದ ಆಡು, ಕುರಿಗಳು ಪತ್ತೆಯಾಗಿದೆ. ಅಲ್ಲದೆ ಅಲ್ಲಲ್ಲಿ ದನ, ಆಡು, ಕುರಿಗಳ ತಲೆಗಳ ರಾಶಿ, ತ್ಯಾಜ್ಯ ರಾಶಿ ಇದ್ದುದು ಕಂಡುಬಂದಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಕುದ್ರೋಳಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಕಸಾಯಿಖಾನೆಯನ್ನು ಸ್ಥಗಿತಗೊಳಿಸಲಾಗಿದ್ದರೂ ಪಕ್ಕದ ಖಾಸಗಿ ಜಾಗದಲ್ಲಿ ಅನಧಿಕೃತವಾಗಿ ಕಸಾಯಿಖಾನೆ ಕಾರ್ಯಾಚರಿಸುತ್ತಿದ್ದುದು ಶುಕ್ರವಾರ ಪತ್ತೆಯಾಗಿದೆ. ಈ ಬಗ್ಗೆ ದೂರಿನ ಮೇರೆಗೆ ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ವಧೆಗಾಗಿ ಕಟ್ಟಿಹಾಕಿದ್ದ ಆಡು, ಕುರಿಗಳು ಪತ್ತೆಯಾಗಿದೆ. ಅಲ್ಲದೆ ಅಲ್ಲಲ್ಲಿ ದನ, ಆಡು, ಕುರಿಗಳ ತಲೆಗಳ ರಾಶಿ, ತ್ಯಾಜ್ಯ ರಾಶಿ ಇದ್ದುದು ಕಂಡುಬಂದಿದೆ.ಕುದ್ರೋಳಿಯಲ್ಲಿರುವ ಕಸಾಯಿ ಖಾನೆ ಕಳೆದ ನಾಲ್ಕು ವರ್ಷಗಳ ಹಿಂದೆ ಸ್ಥಗಿತಗೊಂಡಿತ್ತು. ಹಸಿರು ಪೀಠ ಆದೇಶ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ ಈ ಕಸಾಯಿಖಾನೆಯ ಪಕ್ಕದ ಖಾಸಗಿ ಜಾಗದಲ್ಲಿ ಮಾತ್ರ ಅಕ್ರಮವಾಗಿ ಕಸಾಯಿಖಾನೆ ವ್ಯವಹಾರ ನಡೆಯುತ್ತಲೇ ಇತ್ತು. ಅಧಿಕಾರಿ ವರ್ಗಕ್ಕೆ ಈ ಮಾಹಿತಿ ಇದ್ದರೂ ನಿಲ್ಲಿಸುವ ಗೋಜಿಗೆ ಹೋಗಿರಲಿಲ್ಲ. ನಿರಂತರವಾಗಿ ಗೋ ವಧೆಯಾಗುತ್ತಿದೆ, ಸೂಕ್ತ ಕ್ರಮವಹಿಸಬೇಕು ಎಂದು ಸಾರ್ವಜನಿಕರ ದೂರಿನ ಮೇರೆಗೆ ಮೇಯರ್ ದಾಳಿ ನಡೆಸಿದ್ದಾರೆ.
ಪ್ರಾಣಿ ವಧೆ ನಡೆಯುತ್ತಿದ್ದ ಕಟ್ಟಡವನ್ನು ಪರಿಶೀಲಿಸಿದ ಮೇಯರ್ ತಂಡಕ್ಕೆ ಶಾಕ್ ಕಾದಿತ್ತು. ಅಲ್ಲಲ್ಲಿ ದನ, ಆಡು, ಕುರಿಗಳ ರುಂಡಗಳು, ದೇಹದ ಭಾಗಗಳು ಒಂದು ಕೊಣೆಯಿಡೀ ರಾಶಿ ಬಿದ್ದಿರುವುದು ಲೀಲಾಜಾಲವಾಗಿ ಗೋ ವಧೆ ನಡೆಯುತ್ತಿದ್ದುದ್ದಕ್ಕೆ ಸಾಕ್ಷಿ ಒದಗಿಸಿತ್ತು. ಇದನ್ನು ಕಂಡು ಸಿಟ್ಟಾದ ಮೇಯರ್ ಅವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೂಡಲೇ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.ಈ ವೇಳೆ ಉಪಮೇಯರ್ ಭಾನುಮತಿ, ಪಟ್ಟಣ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಮಂಗಳಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಮಿತ್ರಾ ಕರಿಯಾ, ಕಾರ್ಪೊರೇಟರ್‌ಗಳಾದ ಮನೋಹರ್ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ ಇದ್ದರು.
--------------ಬೀಗ ಒಡೆದು ಒಳಪ್ರವೇಶಿಸಿದ ಮೇಯರ್!ಅಕ್ರಮವಾಗಿ ಪ್ರಾಣಿ ವಧೆ ನಡೆಯುತ್ತಿದ್ದ ಕಟ್ಟಡ ಮುಂಭಾಗ ತೆರೆದೇ ಇದ್ದರೂ, ಒಳಗಿನ ಕೋಣೆಗಳಿಗೆ ಬೀಗ ಜಡಿಯಲಾಗಿತ್ತು. ಸಂಶಯಗೊಂಡ ಮೇಯರ್ ಅವರು ಕೊಠಡಿಯ ಕೀ ಕೇಳಿದಾಗ ಯಾರಲ್ಲೂ ಉತ್ತರವಿರಲಿಲ್ಲ. ಬಳಿಕ ಬೀಗ ಒಡೆದು ಒಳ ಪ್ರವೇಶಿಸಿದ ಮೇಯರ್‌ಗೆ ಒಳಗಿನ ಕರಾಳ ದೃಶ್ಯಗಳು ಕಣ್ಣಿಗೆ ರಾಚಿದವು. ಅಲ್ಲಿ ಅದು ಜಾನುವಾರು ವಧೆ ಮಾಡುವ ಸ್ಥಳವಾಗಿತ್ತು. ಅಲ್ಲಿ, ತೂಕಮಾಪನ, ಮಾಂಸ ಎಲ್ಲವೂ ರಾಶಿಬಿದ್ದಿತ್ತು.