ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಸಿದ್ದರಾಮಯ್ಯನವರ ಸರ್ಕಾರದ ಸಂಪುಟದಲ್ಲಿ ಮೊದಲ ಬಾರಿಗೆ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲರು ಆ ಅವಧಿಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡಿ ಬರದ ನಾಡನ್ನೆಲ್ಲ ನೀರಾವರಿಗೆ ಶ್ರಮಿಸಿದರು. ಅದರಿಂದ ಆಗಿರುವ ಹಸಿರು ಕ್ರಾಂತಿಯಿಂದ ಜಿಲ್ಲೆಯ ರೈತರ ಬದುಕು ಹಸನಾಗಿದೆ. ಅದರಂತೆ ಇದೀಗ ಕ್ಷೀರಕ್ರಾಂತಿ ಮಾಡುವ ಕನಸು ಹೊಂದಿರುವ ಸಚಿವ ಎಂ.ಬಿ.ಪಾಟೀಲರು ಅಕ್ಷಯಕಲ್ಪ, ಕೃಷಿಕಲ್ಪ ಹಾಗೂ ಬಿಎಲ್‌ಡಿಇ ಸಂಸ್ಥೆಯ ಸಹಯೋಗದಲ್ಲಿ ಕಳೆದ ಆರು ತಿಂಗಳ ಹಿಂದೆ ರೈತರಿಗಾಗಿ ಪೈಲಟ್ ಪ್ರಾಜೆಕ್ಟ್ ಆರಂಭಿಸಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ತರಬೇತಿ ಪಡೆದ 150 ರೈತರು ಹೈನುಗಾರಿಕೆಯಲ್ಲಿ ತಮ್ಮ ಆದಾಯವನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಕ್ಷೀರಕ್ರಾಂತಿ ಯಶಸ್ವಿ:ಸಾಂಪ್ರದಾಯಿಕ ಕೃಷಿ ಮಾಡುವ ಅನ್ನದಾತರ ಆದಾಯವನ್ನು ಹೆಚ್ಚಿಸಬೇಕು, ಅವರ ಬದುಕು ಹಸನಾಗಿಸಬೇಕು ಎಂಬ ಉದ್ದೇಶದಿಂದ ಸಚಿವ ಎಂ.ಬಿ.ಪಾಟೀಲ ಹಾಗೂ ಅವರ ಪುತ್ರ ಬಿ.ಎಂ.ಪಾಟೀಲರು 2022ರಲ್ಲಿಯೇ ಅಕ್ಷಯಕಲ್ಪ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಅದರ ಫಲವಾಗಿ ಕೃಷಿಕಲ್ಪ ಹಾಗೂ ಬಿಎಲ್‌ಡಿಇ ಸಹಯೋಗದೊಂದಿಗೆ ಕಳೆದ ಆರು ತಿಂಗಳಿನಿಂದ ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳ 150 ರೈತರಿಗೆ ಜರ್ಸಿ ಆಕಳು ಸಾಕಾಣಿಕೆ ಬಗ್ಗೆ ತರಬೇತಿ ನೀಡಿ ಕ್ಷೀರಕ್ರಾಂತಿ ಮಾಡಿದ್ದಾರೆ. ಮೊದಲಿಗೆ ಒಂದು ಆಕಳಿನಿಂದ ಬೆಳಗ್ಗೆ ಸಂಜೆ ಸೇರಿ 3.5 ಫ್ಯಾಟ್ ಹೊಂದಿದ್ದ 10 ಲೀಟರ್ ಹಾಲು ಮಾತ್ರ ಉತ್ಪಾದನೆಯಾಗುತ್ತಿತ್ತು. ಆದರೆ, ಇದೀಗ ದಿನಕ್ಕೆ ಒಂದು ಹಸುವಿನಿಂದ 20 ಲೀಟರ್ ಹಾಲು 3.8 ಫ್ಯಾಟ್‌ನೊಂದಿಗೆ ಸಿಗುತ್ತಿದೆ. ಪ್ರತಿ ಲೀಟರ್ ಹಾಲಿಗೆ ₹40 ಸಿಗುವುದರಿಂದ ನಿತ್ಯ ಪ್ರತಿ ಹೈನೋದ್ಯಮಿಗೂ ₹ 4 ರಿಂದ ₹6 ಸಾವಿರ ಆದಾಯ ಕೈಗೆ ಸಿಗುತ್ತಿದೆ. ಹೀಗಾಗಿ, ಕಡಿಮೆ ಖರ್ಚಿನಲ್ಲಿ ದ್ವಿಗುಣ ಲಾಭವನ್ನು ರೈತರು ಪಡೆಯುತ್ತಿದ್ದಾರೆ.
ತಂದೆಯಂತೆಯೇ ಪುತ್ರನ ಶ್ರಮ:
ತಂದೆ ಎಂ.ಬಿ.ಪಾಟೀಲರಂತೆಯೇ ತಮ್ಮ ಭಾಗದ ಅನ್ನದಾತರಿಗೆ ಅನುಕೂಲ ಕಲ್ಪಿಸಬೇಕು ಎಂದು ಯೋಜಿಸಿದ ಬಿಎಲ್‌ಡಿಇ ಡೀಮ್ಡ್ ವಿವಿಯ ಕುಲಪತಿಯೂ ಆಗಿರುವ ಪುತ್ರ ಬಿ.ಎಂ.ಪಾಟೀಲರು ಬಬಲೇಶ್ವರ ಕ್ಷೇತ್ರದ ರೈತರಿಗೆ ಹೈನುಗಾರಿಕೆಯಲ್ಲಿ ಆರ್ಥಿಕ ಸದೃಢತೆ ಕಲ್ಪಿಸಲೆಂದೇ ಅಕ್ಷಯಕಲ್ಪ ಹಾಗೂ ಕೃಷಿ ಕಲ್ಪದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಬಿಎಲ್‌ಡಿಇ ಸಂಸ್ಥೆಯಿಂದ ವರ್ಷಕ್ಕೆ ₹50 ಲಕ್ಷದಂತೆ ಮುಂದಿನ ಐದು ವರ್ಷಗಳವರೆಗೆ ಒಟ್ಟು ಎರಡೂವರೆ ಕೋಟಿ ಸಹಾಯಧನ ನೀಡುತ್ತಿದ್ದಾರೆ.
ಎಲ್ಲೆಲ್ಲಿ ಪೈಲಟ್ ಪ್ರಾಜೆಕ್ಟ್?:ಪ್ರಾಯೋಗಿಕವಾಗಿ ಆರಂಭವಾದ ಈ ಪೈಲಟ್ ಪ್ರಾಜೆಕ್ಟ್ ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳಲ್ಲಿನ ನಾಗರಾಳ, ನಿಡೋಣಿ, ಕುಮಟೆ, ಬಾಬಾನಗರ, ಟಕ್ಕಳಕಿ, ಹುಬನೂರ ಹಾಗೂ ಅರ್ಜುಣಗಿ ಗ್ರಾಮಗಳಲ್ಲಿ ಪ್ರಾರಂಭಿಸಲಾಗಿದೆ. ಇಲ್ಲಿನ ಪ್ರತಿ ಹಳ್ಳಿಯಿಂದ 20ರಿಂದ 30 ಸಣ್ಣ ಹಾಗೂ ಅತಿಸಣ್ಣ ರೈತರು ಸೇರಿ ಒಟ್ಟು 150 ರೈತರನ್ನು ಆಯ್ಕೆ ಮಾಡಿಕೊಂಡು ಅವರಿಗೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ತರಬೇತಿ ಕೊಡಿಸಿ ಜರ್ಸಿ ಆಕಳು ಸಾಕಾಣಿಕೆಯಲ್ಲಿ ಬದಲಾವಣೆ ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ. ಇದಕ್ಕೆ ನಾಗರಾಳದ ರೈತ ಸಾಹೇಬಗೌಡ ಪಾಟೀಲ, ರಾಜಕುಮಾರ ಕೊಣ್ಣೂರ, ಕುಮಟೆ ಗ್ರಾಮದ ಸಂಗಪ್ಪ ಗಾಣಿಗೇರ ಉತ್ತಮ ಉದಾಹರಣೆಯಾಗಿದ್ದಾರೆ ಎನ್ನುತ್ತಾರೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ.
------ಬಾಕ್ಸ್
ತರಬೇತಿ ಹೇಗೆ ನಡೆಯುತ್ತದೆ..?ತಿಪಟೂರಿನ ಅಕ್ಷಯಕಲ್ಪ ಹಾಗೂ ಕೃಷಿಕಲ್ಪ ಸಂಸ್ಥೆಗಳು ಹಸು ಸಾಕಾಣಿಕೆ, ಅವುಗಳ ನಿರ್ವಹಣೆ, ಮೇವಿನಲ್ಲಿ ಬದಲಾವಣೆ, ಮೇವು ಹಾಗೂ ನೀರು ಒದಗಿಸುವ ಪ್ರಮಾಣ, ಹಸುಗಳಿಗೆ ರೋಗಗಳು ಬಾರದಂತೆ ತಡೆಗಟ್ಟುವ ವಿಧಾನ, ಹಾಲು ಕರೆಯುವ ಕ್ರಮಗಳು, ಶೆಡ್ ನಿರ್ವಹಣೆ ಸೇರಿದಂತೆ ರೈತರಿಗೆ ಎಲ್ಲ ರೀತಿಯ ತರಬೇತಿ ಹಾಗೂ ಮಾಹಿತಿಗಳನ್ನು ಒದಗಿಸುತ್ತಿವೆ. ದಿನಕ್ಕೆ ಮೂರು ಬಾರಿ ಮೇವು ಹಾಕುವ ಬದಲು ಒಂದೇ ಬಾರಿಗೆ ಮೇವು ಹಾಕಬೇಕು, ಅದರಲ್ಲಿ ಒಣಮೇವು, ಹಸಿಮೇವು ಹಾಗೂ ರಸಮೇವು ಒಟ್ಟಿನಲ್ಲಿ ಟಿಎಂಆರ್ ಒಳಗೊಂಡಿರಬೇಕು. ಇದೆಲ್ಲರ ಕುರಿತು ಸಂತೋಷ ಹಾಗೂ ಈರಣ್ಣ ಸೇರಿದಂತೆ ಸಂಸ್ಥೆಗಳ ಸಿಬ್ಬಂದಿ ರೈತರಿಗೆ ನಿತ್ಯ ಮಾರ್ಗದರ್ಶನ ನೀಡುತ್ತಾರೆ. ಈ ಮೂಲಕ ರೈತರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ ಕೃಷಿಕಲ್ಪ ಸಿಇಒ ಸಿ.ಎಂ.ಪಾಟೀಲ.
-------ಕೋಟ್ -1
ಸಾಂಪ್ರದಾಯಿಕ ಕೃಷಿಯಲ್ಲಿ ಲಾಭವಿಲ್ಲದೆ ನಮ್ಮ ಯಜಮಾನರು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಕಳೆದ ಆರು ತಿಂಗಳ ಹಿಂದೆ ನಮಗೆ ತರಬೇತಿ ಸಿಕ್ಕಿದ್ದರಿಂದ ಕೂಲಿ ಕೆಲಸಕ್ಕೆ ಹೋಗುವುದು ಬಿಟ್ಟು, ಇದೀಗ 13 ಆಕಳುಗಳೊಂದಿಗೆ ಹೈನೋದ್ಯಮ ಮಾಡುತ್ತಿದ್ದೇವೆ. ಕೇವಲ ಎರಡು ಎಕರೆ ಭೂಮಿಯಲ್ಲಿ ಮೇವು ಬೆಳೆದು ಹಸುಗಳ ಸಾಕಾಣಿಕೆಯಿಂದಲೇ ತಿಂಗಳಿಗೆ ₹ 60 ಸಾವಿರ ಲಾಭ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕೆಲ್ಲ ಅನುಕೂಲ ಕಲ್ಪಿಸಿದ ಎಂ.ಬಿ.ಪಾಟೀಲರು ಮತ್ತು ಅವರ ಪುತ್ರ ಬಿ.ಎಂ.ಪಾಟೀಲರು ಮತ್ತು ಅಕ್ಷಯಕಲ್ಪ ಹಾಗೂ ಕೃಷಿಕಲ್ಪದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ.ಮಹಾದೇವಿ ಕೊಣ್ಣೂರ, ಹೈನುಗಾರಿಕೆ ಮಾಡುತ್ತಿರುವ ರೈತ ಮಹಿಳೆ.
ಕೋಟ್-2ನಮ್ಮ ತಂದೆಯವರು ನೀರಾವರಿ ಮೂಲಕ ಹಸಿರುಕ್ರಾಂತಿ ಮಾಡಿದ್ದಾರೆ. ಇದೀಗ ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ಸೇರಿ ಕ್ಷೀರಕ್ರಾಂತಿ ಮಾಡಲು ಮುಂದಾಗಿದ್ದೇವೆ. ರೈತರ ಆದಾಯ ಹೆಚ್ಚಿಸಲು ಅಕ್ಷಯಕಲ್ಪ, ಕೃಷಿಕಲ್ಪ ಹಅಗೂ ಬಿಎಲ್‌ಡಿಇ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಹೈನೋದ್ಯಮಕ್ಕೆ ಯೋಜನೆ ರೂಪಿಸಲಾಗಿದೆ. ಪ್ರತಿಯೊಬ್ಬ ರೈತರು ತಿಂಗಳಿಗೆ ಲಕ್ಷದ ಮೇಲೆ ಆದಾಯ ಗಳಿಸಬೇಕು ಎಂದು ಸಹಾಯಹಸ್ತ ಚಾಚಲಾಗಿದೆ. ಈ ಭಾಗದಲ್ಲಿ ಇನ್ನೂ ಒಂದು ಸಾವಿರ ರೈತರಿಗೆ ತರಬೇತಿ ನೀಡಿ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಬೇಕು ಎಂಬ ಉದ್ದೇಶ ಹೊಂದಲಾಗಿದೆ.
ಬಸನಗೌಡ ಪಾಟೀಲ, ಕ್ಷೀರಕ್ರಾಂತಿಯ ರೂವಾರಿ.------------ಚಿತ್ರ: ಮೊದಲ ಚಿತ್ರದಲ್ಲಿ ನಾಗರಾಳ ಗ್ರಾಮದ ರೈತ ಸಾಹೇಬಗೌಡ ಹಾಗೂ ಕ್ಷೀರಕ್ರಾಂತಿಯ ಎಲ್ಲರೂ ಇದ್ದಾರೆ. ಎರಡನೇ ಚಿತ್ರದಲ್ಲಿ ರೈತ ಮಹಿಳೆ ಮಹಾದೇವಿ ಕೊಣ್ಣೂರ ಮಶೀನನಿಂದ ಆಕಳ ಹಾಲು ಕರೆಯುತ್ತಿದ್ದಾರೆ. ಬರಹ: ಹೈನುಗಾರಿಕೆಯನ್ನು ಹೈನೋದ್ಯಮವಾಗಿಸಿದ ಎಂ.ಬಿ.ಪಾಟೀಲರ ಕ್ಷೀರಕ್ರಾಂತಿ