ಉಳ್ಳಾಲ: ಅವ್ಯವಹಾರ, ಮೋಸ ಹಾಗೂ ಹಣಕಾಸಿನ ನಷ್ಟದ ಭಯ ಜನರಲ್ಲಿ ಇರುತ್ತದೆ. ಆದರೆ ಎಂಸಿಸಿ ಬ್ಯಾಂಕ್ ತನ್ನ ಪಾರದರ್ಶಕತೆ ಮತ್ತು ವಿಶ್ವಾಸಾರ್ಹ ಸೇವೆಯ ಮೂಲಕ ಜನರ ನಂಬಿಕೆಗೆ ಪಾತ್ರವಾಗಿದೆ. ಹೊಸ ಶಾಖೆಯು ದೇವರ ಆಶೀರ್ವಾದದೊಂದಿಗೆ ಬೆಳೆಯಲಿ ಎಂದು ಪಾನೀರ್‌ನ ಅವರ್ ಲೇಡಿ ಆಫ್ ಮರ್ಸಿ ಚರ್ಚ್‌ನ ಧರ್ಮಗುರು ವಂ. ವಿಕ್ಟರ್ ಡಿಮೆಲ್ಲೊ ಹಾರೈಸಿದ್ದಾರೆ.

ರಾಜ್ಯ ವ್ಯಾಪ್ತಿ 114 ವರ್ಷಗಳಿಂದ ಯಶಸ್ವಿಯಾಗಿ ಬ್ಯಾಂಕಿಂಗ್ ಸೇವೆ ಸಲ್ಲಿಸುತ್ತಿರುವ ಎಂ.ಸಿ.ಸಿ. ಬ್ಯಾಂಕ್ ಲಿಮಿಟೆಡ್‌ನ 22ನೇ ಶಾಖೆ ಯನ್ನು ದೇರಳಕಟ್ಟೆ ಫಾದರ್‌ ಮುಲ್ಲರ್ಸ್‌ ಕಾಂಪ್ಲೆಕ್ಸ್‌ ನೆಲಮಹಡಿಯಲ್ಲಿ ಭಾನುವಾರ ಉದ್ಘಾಟಿಸಿ, ಎಟಿಎಂ ಉದ್ಘಾಟನೆಯಲ್ಲಿ ಭಾಗವಹಿಸಿ ಬಳಿಕ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಗ್ರಾಹಕರೇ ದೇವರು. ಬ್ಯಾಂಕ್‌ಗೆ ಬರುವ ಪ್ರತಿಯೊಬ್ಬ ಗ್ರಾಹಕರಿಗೂ ಗೌರವಯುತ ಸೇವೆ ಸಿಗಬೇಕು. ಎಲ್ಲರೊಂದಿಗೆ ಸಮಾನ ಗೌರವದಿಂದ ವರ್ತಿಸಿ, ಆತ್ಮೀಯ ಸೇವೆ ನೀಡಬೇಕು ಎಂದು ಸಿಬ್ಬಂದಿಗೆ ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಮಾತನಾಡಿ, ಮುಂದಿನ ಆರು ತಿಂಗಳೊಳಗೆ ದೇರಳಕಟ್ಟೆ ಶಾಖೆಯಲ್ಲಿ ₹10 ಕೋಟಿ ರು. ವ್ಯವಹಾರ (ಟರ್ನೋವರ್) ಸಾಧಿಸುವ ಗುರಿ ಹೊಂದಿದ್ದೇವೆ. ಆಸ್ಪತ್ರೆ ಮತ್ತು ಬ್ಯಾಂಕ್ ಎಂಬ ಎರಡು ಕ್ಷೇತ್ರಗಳಲ್ಲಿ ಜನರು ತಮ್ಮ ಹಣ ಮತ್ತು ನಂಬಿಕೆಯನ್ನು ಒಪ್ಪಿಸುತ್ತಾರೆ. ಆ ನಂಬಿಕೆಗೆ ಧಕ್ಕೆಯಾಗದಂತೆ, ಗ್ರಾಹಕರ ಹಣವನ್ನು ಎಂದಿಗೂ ಆತಂಕದಲ್ಲಿಡದ ರೀತಿಯಲ್ಲಿ ಎಂ.ಸಿ.ಸಿ. ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಎಂದರು.2018ರಲ್ಲಿ ಸುಮಾರು ₹500 ಕೋಟಿ ರು. ವ್ಯವಹಾರ ಹೊಂದಿದ್ದ ಬ್ಯಾಂಕ್, ಇಂದು ₹1,530 ಕೋಟಿ ರು. ವ್ಯವಹಾರ ತಲುಪಿದೆ. ಈ ಸಾಧನೆ ಬ್ಯಾಂಕಿನ ಸಿಬ್ಬಂದಿಯ ಶ್ರಮ, ಸಮರ್ಪಣೆ ಹಾಗೂ ಗ್ರಾಹಕರ ವಿಶ್ವಾಸದಿಂದ ಸಾಧ್ಯವಾಗಿದೆ ಎಂದರು.ಭದ್ರತಾ ಕೊಠಡಿ ಉದ್ಘಾಟಿಸಿದ ಅರ್ಸುಲೈನ್ ಫ್ರಾನ್ಸಿಸ್ಕನ್ ಸಿಸ್ಟರ್ಸ್‌ನ ಸುಪೀರಿಯರ್ ಜನರಲ್ ಸಿ. ಮಿಲ್ಲಿ ಫೆರ್ನಾಂಡಿಸ್ ಮಾತನಾಡಿ, ಸರ್ಕಾರದ ವಿವಿಧ ಜನಪರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.

ಎಟಿಎಂ ಕೇಂದ್ರ ಉದ್ಘಾಟಿಸಿದ ಫಾದರ್ ಮುಲ್ಲರ್ ಹೋಮಿಯೊಪತಿಕ್ ಕಾಲೇಜಿನ ಆಡಳಿತದಾರ ಫಾ. ನೀಲೆಶ್ ಕ್ರಾಸ್ತಾ ಮಾತನಾಡಿ, ಇಂದಿನ ದಿನಗಳಲ್ಲಿ ವ್ಯಕ್ತಿಯ ಅನಾರೋಗ್ಯಕ್ಕೆ ವೈದ್ಯಕೀಯ ಕಾರಣಗಳಷ್ಟೇ ಅಲ್ಲ, ಆರ್ಥಿಕ ಅಸ್ಥಿರತೆಯೂ ಪ್ರಮುಖ ಕಾರಣವಾಗಿದೆ. ಆರ್ಥಿಕ ಭದ್ರತೆ ಉತ್ತಮವಾಗಿದ್ದರೆ ಕುಟುಂಬದ ಆರೋಗ್ಯ ಮತ್ತು ನೆಮ್ಮದಿಯೂ ಉತ್ತಮವಾಗಿರುತ್ತದೆ ಎಂದರು.

ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ಎಸ್‌ ಶೆಟ್ಟಿ ಮಾತನಾಡಿ, ದೇರಳಕಟ್ಟೆಯಲ್ಲಿ ಹೊಸ ಶಾಖೆ ಆರಂಭವಾಗಿರುವುದರಿಂದ ಈ ಭಾಗದ ಜನರಿಗೆ ಗುಣಮಟ್ಟದ ಹಾಗೂ ವಿಶ್ವಾಸಾರ್ಹ ಬ್ಯಾಂಕಿಂಗ್ ಸೇವೆ ಇನ್ನಷ್ಟು ಸುಲಭವಾಗಿ ದೊರೆಯಲಿದೆ ಎಂದರು.ಪ್ರತಿಭಾ ಪುರಸ್ಕಾರ, ನೆರವು: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿ, ಸಾಮಾಜಿಕ ಸಂಸ್ಥೆಗಳಿಗೆ ಒಟ್ಟು 5 ಲಕ್ಷ ರು. ಸಹಾಯಧನ ಹಾಗೂ ದೇರಳಕಟ್ಟೆ ಪಾನೀರು ಪರಿಸರದಲ್ಲಿ ಸಮಾಜಸೇವೆಯನ್ನು ನಡೆಸುತ್ತಾ ಬಂದಿರುವ ಸಾಮಾಜಿಕ ಕಾರ್ಯಕರ್ತರನ್ನು ಅಭಿನಂದಿಸಲಾಯಿತು. ಬ್ಯಾಂಕಿನ ಉಪಾಧ್ಯಕ್ಷರು, ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.