ನ್ಯಾಯಾಲಯದ ಆದೇಶ ಉಲ್ಲಂಘಿಸಿ ಫಲಿತಾಂಶ ಘೋಷಣೆ ಮಾಡಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತಪತ್ರಗಳನ್ನೇ ಬದಲಾಯಿಸಿ ಗೆಲವು ಸಾಧಿಸಿದೆ ಎಂದು ಜೆಡಿಎಸ್ ಶಾಸಕ ಜಿ.ಡಿ. ಹರೀಶ್ ಗೌಡ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಕಾರಿ ಸಂಘಗಳ ಚುನಾವಣೆಯಲ್ಲಿ 5 ಮತಗಳನ್ನು ಹೆಚ್ಚುವರಿಯಾಗಿ ಸೇರಿಸಿ ಗೆಲುವು ಸಾಧಿಸಿದ್ದೇವೆಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದರು. ಅದರ ಮುಂದಿನ ಭಾಗ ಇದು. ನ್ಯಾಯಾಲಯ ಫಲಿತಾಂಶ ಪ್ರಕಟಿಸದಂತೆ ಆದೇಶ ನೀಡಿತ್ತು. ಆದರೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಫಲಿತಾಂಶ ಘೋಷಣೆ ಮಾಡಿದ್ದಾರೆ ಎಂದು ದೂರಿದರು.

ಬೂತ್ ನಲ್ಲೇ ಮತಪತ್ರ ಬದಲಾಯಿಸಿದ್ದಾರೆಂದು ಹೇಳುತ್ತಿದ್ದಾರೆ. ಮತ ಚಲಾವಣೆ ಮಾಡಿರುವ ಮತದಾರರು ಈ ಬಗ್ಗೆ ಹೇಳಿದ್ದಾರೆ. ಇವೆಲ್ಲವನ್ನು ನೋಡಿದರೆ ಯಾವುದನ್ನೂ ನಂಬಲಿಕ್ಕೆ ಆಗ್ತಿಲ್ಲ. ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ ಎಂದರು.

ರಾಹುಲ್ ಗಾಂಧಿ ಹೋದಲ್ಲಿ ಬಂದಲ್ಲಿ ಮತ ಚೋರಿಯಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಮೈಸೂರಿನ ಎಂಸಿಡಿಸಿಸಿ ಚುನಾವಣೆಯಲ್ಲಿ ಮತಪತ್ರ ಬದಲಾಯಿಸಿದ್ದಾರೆ‌. ನಿಜವಾಗಿಯೂ ಇಲ್ಲಿ ಮತ ಚೋರಿಯಾಗಿದೆ. ಯಾವುದೇ ಸರ್ಕಾರದ ಅವಧಿಯಲ್ಲೂ ಈ ರೀತಿ ನೋಡಿರಲಿಲ್ಲ. ಇಷ್ಟೊಂದು ದ್ವೇಷಾಸೂಯೆಯ ಸರ್ಕಾರ ನೋಡಿರಲಿಲ್ಲ‌. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿ ಕಾನೂನು ಹೋರಾಟ ಮಾಡುತ್ತೇವೆ. ಹೈಕೋರ್ಟ್ ಮೊರೆ ಹೋಗ್ತೇವೆ ಎಂದು ಅವರು ತಿಳಿಸಿದರು.

ಅಭಿವೃದ್ಧಿ ಚರ್ಚೆ ಆಗುತ್ತಿಲ್ಲ

ಕಾಂಗ್ರೆಸ್ ನಾಯಕರು ಸಿಎಂ ಕುರ್ಚಿಗಾಗಿ ಕಚ್ಚಾಡುತ್ತಿದ್ದಾರೆ. ಪರಿಣಾಮ ಬೆಳಗಾವಿ ಅಧಿವೇಶನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬಹುತೇಕ ಸಚಿವರು ಸದನಕ್ಕೆ ಗೈರಾಗುತ್ತಿದ್ದಾರೆ. ಯಾವುದಾದರೂ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಲು ಸಚಿವರೇ ಇರುವುದಿಲ್ಲ ಎಂದು ಅವರು ದೂರಿದರು.

ಆಡಳಿತ ಪಕ್ಷದ ನಾಯಕರು ಪರಸ್ಪರ ಕಚ್ಚಾಟದಲ್ಲೇ ದಿನ ದೂಡುತ್ತಿದ್ದಾರೆ. ಸಿಎಂ, ಡಿಸಿಎಂ ಅಕ್ಕಪಕ್ಕದಲ್ಲಿ ಕುಳಿತಾಗಲೂ ಒಬ್ಬರ ಮುಖ ಮತ್ತೊಬ್ಬರು ನೋಡಲಾಗದ ಪರಿಸ್ಥಿತಿ ಇದೆ. ಜೆಡಿಎಸ್- ಬಿಜೆಪಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಮುಂದಾಗುವುದಿಲ್ಲ. ಎಲ್ಲವನ್ನೂ ಜನರ ತೀರ್ಮಾನಕ್ಕೆ ಬಿಡುತ್ತೇವೆ‌ ಎಂದರು.