ಆಕಾಶವಾಣಿಯಲ್ಲಿ ಎಂಸಿಇ ತಂತ್ರಸುಧಾ ಸರಣಿ

| Published : May 18 2025, 01:43 AM IST

ಸಾರಾಂಶ

ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಜನಸಾಮಾನ್ಯರಿಗೆ ಸರಳವಾಗಿ ತಿಳಿಸಿಕೊಡುವ ಸಲುವಾಗಿ ಆಕಾಶವಾಣಿ ಹಾಸನ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದಲ್ಲಿ ರೂಪಿಸಿರುವ ’ತಂತ್ರಸುಧಾ’ ತಂತ್ರಜ್ಞಾನ ಸರಣಿ ಮೇ ೧೯ರಿಂದ ಸೋಮವಾರ ಹಾಗೂ ಬುಧವಾರ ಬೆಳಗ್ಗೆ ೮.೩೫ಕ್ಕೆ ಪ್ರಸಾರವಾಗಲಿದೆ. ಒಟ್ಟು ಹದಿನೈದು ಕಂತುಗಳನ್ನು ಈ ಸರಣಿ ಒಳಗೊಂಡಿದೆ.

ಕನ್ನಡಪ್ರಭ ವಾರ್ತೆ ಹಾಸನ

ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಜನಸಾಮಾನ್ಯರಿಗೆ ಸರಳವಾಗಿ ತಿಳಿಸಿಕೊಡುವ ಸಲುವಾಗಿ ಆಕಾಶವಾಣಿ ಹಾಸನ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದಲ್ಲಿ ರೂಪಿಸಿರುವ ’ತಂತ್ರಸುಧಾ’ ತಂತ್ರಜ್ಞಾನ ಸರಣಿ ಮೇ ೧೯ರಿಂದ ಸೋಮವಾರ ಹಾಗೂ ಬುಧವಾರ ಬೆಳಗ್ಗೆ ೮.೩೫ಕ್ಕೆ ಪ್ರಸಾರವಾಗಲಿದೆ.

ಒಟ್ಟು ಹದಿನೈದು ಕಂತುಗಳನ್ನು ಒಳಗೊಂಡಿರುವ ಈ ಸರಣಿಯಲ್ಲಿ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರು ಕೃತಕ ಬುದ್ಧಿಮತ್ತೆ, ಬಿಗ್ ಡೇಟಾ, ಡೇಟಾ ಸೈನ್ಸ್, ಸುಸ್ಥಿರ ನಿರ್ಮಾಣ, ಮಣ್ಣು ತಂತ್ರಜ್ಞಾನ, ೩-ಡಿ ಮುದ್ರಣ, ಇ.ವಿ. ವಾಹನ, ಸೌರ ಶಕ್ತಿ, ೫ಜಿ ನೆಟ್ವರ್ಕ್, ಸೆನ್ಸಾರ್‌, ಇ-ಕಾಮರ್ಸ್, ಕ್ವಾಂಟಂ ತಂತ್ರಜ್ಞಾನ, ರಾಸಾಯನಿಕ ವಸ್ತುಗಳು, ನವೋದ್ಯಮ ಮುಂತಾದ ವಿಷಯಗಳ ಕುರಿತು ಮಾತನಾಡಿದ್ದಾರೆ.

ಮೇ ೧೯ರಂದು ಪ್ರಾಂಶುಪಾಲ ಡಾ.ಎ.ಜೆ.ಕೃಷ್ಣಯ್ಯ ಅವರು "ಸಿವಿಲ್ ಎಂಜಿನಿಯರಿಂಗ್ ಕಾಮಗಾರಿಗಳಲ್ಲಿ ಮಣ್ಣು ತಂತ್ರಜ್ಞಾನ ಅಳವಡಿಕೆ’ ವಿಷಯದ ಕುರಿತು ಮಾತನಾಡಿರುವ ಕಂತು ಪ್ರಸಾರವಾಗಲಿದೆ. ಮೇ ೨೧ ರಂದು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಚ್.ಕೆ.ಶರತ್ ಅವರು ’೩-ಡಿ ಮುದ್ರಣ’ದ ಕುರಿತು ತಿಳಿಸಿಕೊಟ್ಟಿರುವ ಕಂತು ಬಿತ್ತರಗೊಳ್ಳಲಿದೆ.