ಎಂಸಿಪಿ-ಮೊಬೈಲ್‌ ಕಮಾಂಡ್‌ ಪೋಸ್ಟ್‌ (ಸಂಚಾರಿ ನಿಯಂತ್ರಣ ಕೇಂದ್ರ) ಎಂದರ್ಥ. ಹೊರಗಡೆಯಿಂದ ನೋಡಿದರೆ ಯಾವುದೇ ಟ್ರಕ್‌ ನಿಂತಿದೆಯೇನೋ ಎಂದೆನಿಸುತ್ತದೆ. ಆದರೆ, ಒಳಗಡೆ ಅತ್ಯಾಧುನಿಕ ಸೌಲಭ್ಯಗಳನ್ನುಳ್ಳ ಮಿನಿ ಮೀಟಿಂಗ್‌ ಹಾಲ್‌ನಂತೆ ಇದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ವಿಮಾನ ಅಪಘಾತ, ಅಪಹರಣಗಳಂತಹ ಘಟನೆಗಳು ನಡೆದಾಗ ಪರಿಸ್ಥಿತಿ ನಿರ್ವಹಣೆ, ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗಲೆಂಬ ಉದ್ದೇಶದಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಎಂಸಿಪಿ (ಮೊಬೈಲ್‌ ಕಮಾಂಡ್‌ ಪೋಸ್ಟ್‌) ವಾಹನ ಬಂದಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಡಿ (ಎಎಐ) ಬರುವ ರಾಜ್ಯದ ನಿಲ್ದಾಣಗಳ ಪೈಕಿ ಎಂಸಿಪಿ ಹೊಂದಿರುವ ಮೊಟ್ಟ ಮೊದಲ ವಿಮಾನ ನಿಲ್ದಾಣ ಇದಾಗಿದೆ.

ಏನಿದು?

ಎಂಸಿಪಿ-ಮೊಬೈಲ್‌ ಕಮಾಂಡ್‌ ಪೋಸ್ಟ್‌ (ಸಂಚಾರಿ ನಿಯಂತ್ರಣ ಕೇಂದ್ರ) ಎಂದರ್ಥ. ಹೊರಗಡೆಯಿಂದ ನೋಡಿದರೆ ಯಾವುದೇ ಟ್ರಕ್‌ ನಿಂತಿದೆಯೇನೋ ಎಂದೆನಿಸುತ್ತದೆ. ಆದರೆ, ಒಳಗಡೆ ಅತ್ಯಾಧುನಿಕ ಸೌಲಭ್ಯಗಳನ್ನುಳ್ಳ ಮಿನಿ ಮೀಟಿಂಗ್‌ ಹಾಲ್‌ನಂತೆ ಇದೆ. ವಿಮಾನ ಅಪಘಾತ, ಅಪಹರಣವಾದಾಗ ಅಥವಾ ಇನ್ನಿತರ ತುರ್ತು ಸಂದರ್ಭಗಳಲ್ಲಿ ಅಧಿಕಾರಿಗಳು ಕಚೇರಿಗಳಲ್ಲೇ ಕುಳಿತು ಸಭೆ ನಡೆಸುವುದು, ತ್ವರಿತ ನಿರ್ಧಾರ ಕೈಗೊಳ್ಳುವುದು ಕಷ್ಟಸಾಧ್ಯವಾಗುತ್ತದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಭೆ ನಡೆಸಬೇಕೆಂದರೆ ಸಂವಹನ, ಮಾನಿಟರ್‌ ಹಾಗೂ ಇನ್ನಿತರ ಸಮಸ್ಯೆಗಳು ಕಾಡುತ್ತವೆ. ಇದಕ್ಕಾಗಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವೂ ತುರ್ತು ಸಂದರ್ಭಗಳಲ್ಲಿ ನಿರ್ವಹಿಸಲು ಅತ್ಯಾಧುನಿಕ ತಂತ್ರಜ್ಞಾನದ ಈ ಎಂಸಿಪಿ (ಸಂಚಾರಿ ನಿಯಂತ್ರಣ ಕೇಂದ್ರ)ವನ್ನು ಸಿದ್ಧಪಡಿಸಿದೆ. ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲ ವಿಮಾನ ನಿಲ್ದಾಣಗಳಿಗೂ ಆದ್ಯತೆ ಮೇರೆಗೆ ಇಂಥ ವಾಹನಗಳನ್ನು ಕಳುಹಿಸುತ್ತದೆ.

ರಾಜ್ಯದಲ್ಲಿ ಪ್ರಾಧಿಕಾರದ ಅಡಿಯಲ್ಲಿ ಬರುವ ವಿಮಾನ ನಿಲ್ದಾಣಗಳೆಂದರೆ ನಾಲ್ಕು. ಕಲಬುರಗಿ, ಮೈಸೂರ, ಬೆಳಗಾವಿ ಹಾಗೂ ಹುಬ್ಬಳ್ಳಿ. ಈ ಪೈಕಿ ಹೆಚ್ಚು ಪ್ರಯಾಣಿಕರ ಆಗಮನ-ನಿರ್ಗಮನ ಇರುವುದು ಹುಬ್ಬಳ್ಳಿಯಲ್ಲಿ. ಹೀಗಾಗಿ ಮೊದಲ ಹಂತವಾಗಿ ಹುಬ್ಬಳ್ಳಿ ನಿಲ್ದಾಣಕ್ಕೆ ಪ್ರಾಧಿಕಾರವೂ ಈ ವಾಹನವನ್ನು ಕಳುಹಿಸಿದೆ. ಇಲ್ಲಿಗೆ ಬಂದು ಕೆಲ ದಿನಗಳು ಕಳೆದಿವೆ.

ಏನೇನುಂಟು?

ವಿಎಚ್ಎಫ್‌ (Very High Frequency), UHF (Ultra High Frequency) ವ್ಯವಸ್ಥೆಯೂ ಇಲ್ಲಿದೆ. ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ), ಅಗ್ನಿಶಾಮಕ ದಳ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕ ಸಾಧಿಸಬಹುದು. ಇಂಟರ್‌ನೆಟ್‌ ಸಂಪರ್ಕಕ್ಕಾಗಿ ಇದರಲ್ಲಿ ಸ್ಯಾಟ್‌ಲೈಟ್‌ ಲಿಂಕ್‌ಗಳು ಮತ್ತು ಹೈ-ಸ್ಪೀಡ್ ವೈ-ಫೈ ವ್ಯವಸ್ಥೆ ಅಳವಡಿಸಲಾಗಿದೆ. ಇದು ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲೂ ಸಂವಹನಕ್ಕೆ ನೆರವಾಗುತ್ತದೆ. ವಾಹನದ ಒಳಭಾಗದಲ್ಲಿ ಬೃಹತ್ ವೀಡಿಯೋ ವಾಲ್‌ಗಳು ಮತ್ತು ಮಲ್ಟಿಪಲ್ ಮಾನಿಟರ್‌ಗಳಿವೆ. ಇವು ಸಿಸಿಟಿವಿ ಫೀಡ್‌ಗಳನ್ನು ಮತ್ತು ಡ್ರೋನ್ ಚಿತ್ರಣಗಳನ್ನು ನೇರವಾಗಿ ಪ್ರಸಾರ ಮಾಡುತ್ತವೆ. ಇದರಿಂದಾಗಿ ಘಟನಾ ಸ್ಥಳದ 360-ಡಿಗ್ರಿ ಚಿತ್ರಣ ಅಧಿಕಾರಿಗಳಿಗೆ ಲಭ್ಯವಾಗುತ್ತದೆ.

8-10 ಅಧಿಕಾರಿಗಳು ಕುಳಿತು ಮೀಟಿಂಗ್‌ ಮಾಡಲು ಆಸನಗಳುಂಟು. ರಕ್ಷಣಾ ಕಾರ್ಯಾಚರಣೆ ನಡೆಸಲು (ರೆಸ್ಕ್ಯೂ ಆಪರೇಷನ್‌) ಗೆ ಬೇಕಾಗುವ ವ್ಯವಸ್ಥೆ ಇದರಲ್ಲಿದೆ. ₹ 87 ಲಕ್ಷ ವೆಚ್ಚದ ಈ ವಾಹನದ ಖರ್ಚನ್ನು ಎಎಐ ಭರಿಸಿದೆ.

ಒಟ್ಟಾರೆ ಹೈ-ಟೆಕ್ ಸಂವಹನ ಸಾಧನಗಳಿಂದ ಕೂಡಿದ "ಮಿನಿ ಎಮರ್ಜೆನ್ಸಿ ಆಪರೇಷನ್‌ ಸೆಂಟರ್ " ಎಂದರೆ ತಪ್ಪಾಗಲಿಕ್ಕಿಲ್ಲ.

ಎಎಐನಡಿ ಬರುವ ರಾಜ್ಯದ ವಿಮಾನ ನಿಲ್ದಾಣಗಳ ಪೈಕಿ ಹುಬ್ಬಳ್ಳಿ ನಿಲ್ದಾಣಕ್ಕೆ ಈ ಸೌಲಭ್ಯ ಸಿಕ್ಕಿದೆ. ಕೆಲ ದಿನಗಳ ಹಿಂದೆಯಷ್ಟೇ ಎಂಸಿಪಿ (ಮೊಬೈಲ್‌ ಕಮಾಂಡ್‌ ಪೋಸ್ಟ್‌) ವಾಹನ ಬಂದಿದೆ. ವಿಮಾನ ಅಪಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಷ್ಟೇ ಇದು ಉಪಯೋಗ.

ರೂಪೇಶಕುಮಾರ, ನಿರ್ದೇಶಕರು, ಹುಬ್ಬಳ್ಳಿ ವಿಮಾನ ನಿಲ್ದಾಣ