ಶಿಸ್ತಿಗೆ ಹೆಸರಾಗಿದ್ದ ಎಂ.ಡಿ.ಚಂದ್ರಶೇಖರಯ್ಯ: ಕೆ.ನಾಗರಾಜ್

| Published : Jul 28 2025, 12:30 AM IST

ಸಾರಾಂಶ

ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ್ದ ಎಂ.ಡಿ.ಚಂದ್ರಶೇಖರಯ್ಯ ಅವರು ಹುಟ್ಟೂರು ಮುಳಕಟ್ಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಬೆಂಗಳೂರಿನಲ್ಲಿ ತಾಂತ್ರಿಕ ಶಿಕ್ಷಣ ಮುಗಿಸಿ ಹರಿಹರದ ಪಾಲಿ ಬೈಪರ್ಸ್ ಕಂಪನಿಯಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಉನ್ನತ ಹುದ್ದೆ ಅಲಂಕರಿಸಿದ್ದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಶಿಸ್ತಿಗೆ ಹೆಸರಾಗಿದ್ದ ಎಂ.ಡಿ.ಚಂದ್ರಶೇಖರಯ್ಯ ಅವರು ಎಷ್ಟೆ ಕಷ್ಟವಿದ್ದರೂ ಕೂಡ ಬೇರೆಯವರ ಬಳಿ ಹಣಕಾಸಿನ ಸಹಾಯ ಪಡೆಯದೆ ತಮ್ಮ ಐವರು ಸಹೋದರರಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸ್ವಾಭಿಮಾನಿಯಾಗಿದ್ದರು ಎಂದು ಬೆಂಗಳೂರಿನ ಸಹಕಾರ ಸಂಘಗಳ ನಿವೃತ್ತ ಹೆಚ್ಚುವರಿ ರಿಜಿಸ್ಟ್ರಾರ್ ಕೆ.ನಾಗರಾಜ್ ತಿಳಿಸಿದರು.

ತಾಲೂಕಿನ ಮುಳಕಟ್ಟೆ ಗ್ರಾಮದ ಎಂಎಸ್‌ಎನ್ ಕನ್ವೆಷನ್ ಹಾಲ್‌ನಲ್ಲಿ ಗ್ರಾಮದ ಲೇಟ್ ಎಂ.ಡಿ.ಚಂದ್ರಶೇಖರಯ್ಯ ಅವರ ಆತ್ಮಕಥನ ‘ನನ್ನೆಜ್ಜೆ’ ಪುಸ್ತಕ ಬಿಡುಗಡೆ, ನುಡಿನಮನ ಹಾಗೂ ಗ್ರಾಮದ 30 ಮಂದಿ ಹಿರಿಯ ನಾಗರೀಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ್ದ ಎಂ.ಡಿ.ಚಂದ್ರಶೇಖರಯ್ಯ ಅವರು ಹುಟ್ಟೂರು ಮುಳಕಟ್ಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಬೆಂಗಳೂರಿನಲ್ಲಿ ತಾಂತ್ರಿಕ ಶಿಕ್ಷಣ ಮುಗಿಸಿ ಹರಿಹರದ ಪಾಲಿ ಬೈಪರ್ಸ್ ಕಂಪನಿಯಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಉನ್ನತ ಹುದ್ದೆ ಅಲಂಕರಿಸಿದ್ದರು ಎಂದರು.ನಿವೃತ್ತಿ ನಂತರ ಸ್ವತಃ ಆದಿತ್ಯ ಬಿರ್ಲಾ ಅವರೆ ಚಂದ್ರಶೇಖರಯ್ಯ ಅವರಿಗೆ ದೂರವಾಣಿ ಕರೆ ಮಾಡಿ ಥೈಲ್ಯಾಂಡ್‌ಗೆ ಕಳುಹಿಸಿದ್ದರು. ಅಂತಹ ಸರಳ ವ್ಯಕ್ತಿತ್ವವುಳ್ಳ ಚಂದ್ರಶೇಖರಯ್ಯ ಅವರ ಆತ್ಮಕಥನ ‘ನನ್ನೆಜ್ಜೆ’ ಪುಸ್ತಕ ಬಿಡುಗಡೆ ಮಾಡುತ್ತಿರುವುದು ಅತ್ಯಂತ ಸಂತಸದ ವಿಚಾರ ಎಂದರು.

ಪುಸ್ತಕ ಬಿಡುಗಡೆ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಹೊ.ನಾ.ನೀಲಕಂಠೇಗೌಡ ಮಾತನಾಡಿ, ಒಬ್ಬ ತಾಂತ್ರಿಕ ಪರಿಣತಿ ಹೊಂದಿದ ಇವರು ಕುಟುಂಬ ಪ್ರೇಮಿ ಕೂಡ ಆಗಿದ್ದರು. ಕೂಡು ಕುಟುಂಬದ ಸದಸ್ಯರಿಗೆಲ್ಲಾ ವಿದ್ಯಾಭ್ಯಾಸಕ್ಕೆ ನೆರವಾಗಿದ್ದರು. ಬದುಕಿನ ಮುಸ್ಸಂಜೆಯಲ್ಲಿ ತಮ್ಮ ಆತ್ಮ ಕಥನದಲ್ಲಿ ನಾಗಮಂಗಲ ಪರಿಸರದ ದಾಖಲಿಸಿದ್ದಾರೆ. ಹುಟ್ಟಿದ ಊರಿನಲ್ಲಿ ಅವರ ಆತ್ಮಕಥನ ಬಿಡುಗಡೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಇದೇ ವೇಳೆ ಗ್ರಾಮದ 30ಕ್ಕೂ ಹೆಚ್ಚು ಹಿರಿಯ ನಾಗರೀಕರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಚಂದ್ರಶೇಖರಯ್ಯ ಅವರ ಸಹೋದರ ಎಂ.ಡಿ.ಪುಟ್ಟನಂಜಪ್ಪ, ಪುತ್ರ ಸತೀಶ್, ಪಟ್ಟಣದ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಬಿ.ಕೆ.ಲೋಕೇಶ್, ಶಿಕ್ಷಕ ಹೆರಗನಹಳ್ಳಿ ದಿನೇಶ್, ನಿವೃತ್ತ ದೈಹಿಕ ಶಿಕ್ಷಕ ಎಂ.ಎನ್.ಪರಮಶಿವಯ್ಯ ಸೇರಿದಂತೆ ಐನೂರಕ್ಕೂ ಹೆಚ್ಚು ಜನರು ಇದ್ದರು.