ಸಾರಾಂಶ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಮಾತನಾಡಿ, ವಚನಗಳನ್ನು ನಾಶ ಮಾಡುವ ಕ್ರಾಂತಿ ನಡೆದಾಗ ಅವುಗಳನ್ನು ಎದುರಿಸಿ ವಚನಗಳನ್ನು ಉಳಿಸಿದಂತಹ ಶಕ್ತಿವಂತ, ಧೀರತ್ವದ ವ್ಯಕ್ತಿ ಮಡಿವಾಳ ಮಾಚಿದೇವ. ಅವರ ತತ್ವಗಳನ್ನು, ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದ.ಕ. ಮಡಿವಾಳರ ಸಂಘದ ಸಹಕಾರದೊಂದಿಗೆ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಶನಿವಾರ ನಗರದ ತುಳುಭವನದಲ್ಲಿ ನಡೆಯಿತು.ಮೇಯರ್ ಮನೋಜ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಸಾಮಾಜಿಕ ಕ್ರಾಂತಿಕಾರ ಮಾಚಿದೇವ ಮೇಲು-ಕೀಳು, ಜಾತಿ ಭೇದ, ಮಹಿಳೆಯರ ಶೋಷಣೆ, ಅಸಮಾನತೆ ವಿರುದ್ಧ ಹೋರಾಡಿದವರು. ಸಮಾಜದಲ್ಲಿನ ಎಲ್ಲ ಪಿಡುಗುಗಳನ್ನು ತೊಲಗಿಸುವ ಕಾರ್ಯದಲ್ಲಿ ಮಾಚಿದೇವರ ಕೊಡುಗೆ ಅಪಾರ ಎಂದರು.ಸಂಪನ್ಮೂಲ ವ್ಯಕ್ತಿ ಕೆನರಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಘು ಇಡ್ಕಿದು ಮಾತನಾಡಿ, ಮಡಿವಾಳ ಮಾಚಯ್ಯನವರು ಜನಾಂಗದ ನೆಲೆಯಿಂದ ಗುರುತಿಸಿಕೊಂಡವರಲ್ಲ. ಸಾಮಾಜಿಕ ಕ್ರಾಂತಿಗಳನ್ನು ಮತ್ತು ಸಮಾಜಕ್ಕೆ ಒಳಿತಾಗುವಂತಹ ಕೆಲಸವನ್ನು ಮಾಡಿ ಗುರುತಿಸಿಕೊಂಡವರು. ಸಮಾಜ ಕಟ್ಟುವ ಕೆಲಸವನ್ನು ಅವರು ಮಾಡಿದ್ದಾರೆ. ಸಮಾಜದಲ್ಲಿ ಜನರು ಹೇಗೆ ಬೆಳೆಯಬೇಕು ಎಂಬ ಅಗತ್ಯ ವಿಷಯಗಳನ್ನು ಅವರು ತಮ್ಮ ವಚನದಲ್ಲಿ ಸಾರಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಮಾತನಾಡಿ, ವಚನಗಳನ್ನು ನಾಶ ಮಾಡುವ ಕ್ರಾಂತಿ ನಡೆದಾಗ ಅವುಗಳನ್ನು ಎದುರಿಸಿ ವಚನಗಳನ್ನು ಉಳಿಸಿದಂತಹ ಶಕ್ತಿವಂತ, ಧೀರತ್ವದ ವ್ಯಕ್ತಿ ಮಡಿವಾಳ ಮಾಚಿದೇವ. ಅವರ ತತ್ವಗಳನ್ನು, ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಮಡಿವಾಳರ ಸಂಘದ ಅಧ್ಯಕ್ಷ ಪ್ರಕಾಶ್ ಬಿ.ಎನ್. ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ವಾರುಣಿ ನಾಗರಾಜ್ ನಿರೂಪಿಸಿದರು.