ಸಾರಾಂಶ
ಚಿತ್ರದುರ್ಗ: ಸಾಂಸ್ಕೃತಿಕ ನಾಯಕ ಮಾನವತಾವಾದಿ ಬಸವೇಶ್ವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಮರುಘಾಮಠದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಯಿತು.
ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ ಶಿವಯೋಗಿ ಕಳಸದ ಮಾತನಾಡಿ, ಅಧಿಕಾರಿಯಾಗಿದ್ದಾಗ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿಸಿದ್ದೆ. ಬಸವಣ್ಣನವರ ಆದರ್ಶಗಳು ಬದುಕಾಗಬೇಕು. ಬಸವಣ್ಣನವರು ಒಂದು ವರ್ಗಕ್ಕೆ ಸೀಮಿತಗೊಳಿಸಬಾರದು. ಅವರು ವಿಶ್ವಮಾನ್ಯರು. ಐತಿಹಾಸಿಕ ಕಾರ್ಯಕ್ರಮ ಇದಾಗಬೇಕೆಂದರು.ಡಾ.ಜಯಬಸವ ಸ್ವಾಮಿಗಳು ಮಾತನಾಡಿ, ಜಯದೇವ ಜಗದ್ಗುರುಗಳ ಒತ್ತಾಸೆಯಿಂದ ಪ್ರಥಮ ಬಾರಿಗೆ ದಾವಣಗೆರೆ ವಿರಕ್ತಮಠದಲ್ಲಿ ಬಸವ ಜಯಂತಿ ಆಚರಿಸಲಾಯಿತು. 1913ರಲ್ಲಿ ಹರ್ಡೇಕರ್ ಮಂಜಪ್ಪನವರು ಆರಂಭಿಸಿದರು. ಮೃತ್ಯುಂಜಯ ಅಪ್ಪಗಳು ಇದಕ್ಕೆ ಸಮ್ಮತಿಸಿದರು. ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಸಾರಿದ್ದು ಸ್ವಾಗತಾರ್ಹ. ಶೂನ್ಯಪೀಠ ಹಾಗೂ ಮುರುಘಾ ಪರಂಪರೆಗೆ ಅನ್ಯೋನ್ಯ ಸಂಬಂಧವಿದೆ. ಮೇ 10ರಂದು ಸಂಜೆ ಅನುಭವ ಮಂಟಪದಲ್ಲಿ ಸಭಾ ಕಾರ್ಯಕ್ರಮ, ಮೊದಲ ಎರಡು ದಿನ ಬೇರೆ ಬೇರೆ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ವಚನ ಕಂಠಪಾಠ ಸ್ಪರ್ಧೆ, ವೇಷಭೂಷಣ ಸ್ಪರ್ಧೆ ಮೊದಲಾಗಿ ಮಾಡಬೇಕಿದೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷೆ ಆರ್.ಶೈಲಜಾಬಾಬು ಮಾತನಾಡಿ, ಜಯಂತಿ ಸಂದರ್ಭದಲ್ಲಿ ಶರಣರ ವಚನಗಳನ್ನು ಹಾಡಿಸುತ್ತ, ಶರಣರ ಹಬ್ಬ ಆಚರಿಸಬೇಕೆಂದರು. ನಾಗರಾಜ ಸಂಗಂ ಮಾತನಾಡಿ, 3 ದಿನಗಳ ಕಾರ್ಯಕ್ರಮ ನಡೆಯಬೇಕು. ಎರಡೂ ಕಡೆ ಕಾರ್ಯಕ್ರಮ ಒಂದೇ ಆಗಬೇಕು. ರಂಗೋಲಿ ಸ್ಪರ್ಧೆ, ಬಸವಣ್ಣನವರ ಫೋಟೋಗಳು ರಾರಾಜಿಸಬೇಕು. ಕಾರ್ಯಕ್ರಮ ರಂಗಮಂದಿರದಲ್ಲಿ ನಡೆಯಬೇಕು. ಬಸವಣ್ಣನವರ ತತ್ವಗಳು ಜನರಿಗೆ ತಲುಪಬೇಕು ಎಂದರು.ವೀರಶೈವ ಸಮಾಜದ ಕಾರ್ಯದರ್ಶಿ ಪಿ.ವೀರೇಂದ್ರ ಕುಮಾರ್ ಮಾತನಾಡಿ, ಸಮಾಜ ಬಿಟ್ಟು ಮಠವಿಲ್ಲ. ಮಠ ಬಿಟ್ಟು ಸಮಾಜವಿಲ್ಲ. ಶ್ರೀಮಠದ ಅವಿಭಾಜ್ಯ ಅಂಗ ವೀರಶೈವ ಸಮಾಜ. ಎಲ್ಲ ಒಳಪಂಗಡಗಳು ಸೇರಿ ಕಾರ್ಯಕ್ರಮ ಮಾಡಬೇಕು. ಯುವಕರಿಗೆ ಮನ್ನಣೆ ನೀಡಬೇಕೆಂದು ತಿಳಿಸಿದರು. ಬಸವನಾಗಿದೇವ ಸ್ವಾಮಿಗಳು ಮಾತನಾಡಿ, ಬಸವಣ್ಣ ವಿಶ್ವಗುರು. ಬಸವಣ್ಣನವರ ತತ್ವದಿಂದ ನಮ್ಮಂತಹ ಅನೇಕರು ಸ್ವಾಮಿಗಳು ಇಂದು ಇದ್ದೇವೆ ಎಂದರು. ಸುರೇಶ್‍ಬಾಬು ಮಾತನಾಡಿ, ಎರಡು ದಿನ ಶ್ರೀಮಠದಲ್ಲಿ ಮತ್ತು ಒಂದುದಿನ ನೀಲಕಂಠೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸೂಕ್ತ ಎಂದರು.
ತಿಪ್ಪೇರುದ್ರ ಸ್ವಾಮಿಗಳು, ಬಸವರಮಾನಂದ ಸ್ವಾಮಿಗಳು, ಕೆ.ಸಿ.ನಾಗರಾಜ್, ರಂಗಸ್ವಾಮಿ ಜೆ.ಎನ್.ಕೋಟೆ, ಚಂದ್ರಶೇಖರ್, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಜಯದೇವಮೂರ್ತಿ ಮಾತನಾಡಿದರು.ಬಸವಪ್ರಭು ಸ್ವಾಮಿಗಳು, ಬಸವರಮಾನಂದ ಸ್ವಾಮಿಗಳು ಹೆಗ್ಗುಂದ, ಬಸವಕಬೀರ ಸ್ವಾಮಿಗಳು ಕಲಬುರ್ಗಿ, ಬಸವಮಹಾಂತ ಸ್ವಾಮಿಗಳು ಶಿರಸಂಗಿ, ಬಸವಪ್ರಸಾದ ಸ್ವಾಮಿಗಳು ಮಾನವಿ, ಬಸವ ಮಲ್ಲಿಕಾರ್ಜುನ ಸ್ವಾಮಿಗಳು ನಿಪ್ಪಾಣಿ, ಬಸವಲಿಂಗಮೂರ್ತಿ ಸ್ವಾಮಿಗಳು ಮೈಸೂರು, ಬಸವ ಮಹಾಲಿಂಗ ಸ್ವಾಮಿಗಳು ತುಮಕೂರು, ತಿಪ್ಪೇರುದ್ರಸ್ವಾಮಿಗಳು ನಾಯಕನಹಟ್ಟಿ, ಬಸವಭೂಷಣ ಸ್ವಾಮಿಗಳು ಸಿಂಧನೂರು, ಆರತಿ ಮಹಡಿ ಶಿವಮೂರ್ತಿ, ತಿಪ್ಪೇಸ್ವಾಮಿ, ರುದ್ರೇಶ್ ಐಗಳ್, ಮೋಕ್ಷ ರುದ್ರಸ್ವಾಮಿ, ವಾಗೀಶಬಾಬು, ಎನ್.ಬಿ.ವಿಶ್ವನಾಥ್, ಜಿ.ಎಸ್.ಉಜ್ಜಿನಪ್ಪ, ವಿಜಯಕುಮಾರ್, ಪೈಲ್ವಾನ್ ತಿಪ್ಪೇಸ್ವಾಮಿ ಭಾಗವಹಿಸಿದ್ದರು.