ಹಬ್ಬಗಳ ಅರ್ಥಪೂರ್ಣ ಆಚರಣೆ ಮುಖ್ಯ: ಡಾ.ಬಸವಪ್ರಭು ಶ್ರೀ

| Published : Aug 01 2025, 12:30 AM IST

ಹಬ್ಬಗಳ ಅರ್ಥಪೂರ್ಣ ಆಚರಣೆ ಮುಖ್ಯ: ಡಾ.ಬಸವಪ್ರಭು ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಹಬ್ಬಗಳನ್ನು ಆಚರಣೆ ಮಾಡೋಣ. ಆದರೆ ಅವುಗಳನ್ನು ವೈಚಾರಿಕ, ವೈಜ್ಞಾನಿಕ ಹಾಗೂ ಅರ್ಥಪೂರ್ಣವಾಗಿ ಆಚರಿಸೋಣ ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ನುಡಿದಿದ್ದಾರೆ.

- ದೊಡ್ಡಪೇಟೆ ವಿರಕ್ತ ಮಠದಲ್ಲಿ ಹಾಲು ಕುಡಿಸುವ ಹಬ್ಬ- ಬಸವ ಪಂಚಮಿ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಬ್ಬಗಳನ್ನು ಆಚರಣೆ ಮಾಡೋಣ. ಆದರೆ ಅವುಗಳನ್ನು ವೈಚಾರಿಕ, ವೈಜ್ಞಾನಿಕ ಹಾಗೂ ಅರ್ಥಪೂರ್ಣವಾಗಿ ಆಚರಿಸೋಣ ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ನುಡಿದರು.

ನಗರದ ದೊಡ್ಡಪೇಟೆಯ ವಿರಕ್ತ ಮಠದಲ್ಲಿ ಸೋಮವಾರ ಶಿವಯೋಗಾಶ್ರಮ, ವಿರಕ್ತ ಮಠದ ಸಹಯೋಗದಲ್ಲಿ ಹಾಲು ಕುಡಿಸುವ ಹಬ್ಬ- ಬಸವ ಪಂಚಮಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಶ್ರೀಗಳು ಮಾತನಾಡಿದರು.

ನಾಗರಪಂಚಮಿ ಹಬ್ಬದ ಹೆಸರಿನಲ್ಲಿ ಇಡೀ ದೇಶಾದ್ಯಂತ ನಮ್ಮ ಪಾಲು, ಅಜ್ಜ-ಅಜ್ಜಿ, ಅಪ್ಪ-ಅಮ್ಮ ಪಾಲು, ಹಿರಿಯ ಪಾಲು ಎಂದು ಕಲ್ಲ ನಾಗರಕ್ಕೆ, ಹುತ್ತಕ್ಕೆ ಹಾಲನ್ನು ಎರೆದು ಕೊನೆಗೆ ಹಾಲನ್ನು ಮಣ್ಣುಪಾಲು ಮಾಡುತ್ತಾರೆ. ದೇವರ, ಧರ್ಮದ ಹೆಸರಿನಲ್ಲಿ ನಾವು ಸ್ವೀಕಾರ ಮಾಡುವಂತಹ ಹಾಲು, ತುಪ್ಪ, ಮೊಸರು, ಎಳೆನೀರು, ಜೇನುತುಪ್ಪ ವ್ಯರ್ಥ ಮಾಡಬಾರದು. ಹಾಲನ್ನು ಎರೆದರೆ ದೇವರು ಸಂತೃಪ್ತರಾಗುವುದಿಲ್ಲ. ಅದೇ ಹಾಲನ್ನು ವ್ಯರ್ಥ ಮಾಡದೇ ಮಕ್ಕಳಿಗೆ, ರೋಗಿಗಳಿಗೆ, ಅನಾಥರಿಗೆ, ವಯೋವೃದ್ಧರಿಗೆ, ಬಡವರಿಗೆ ಕೊಟ್ಟಿದ್ದೇ ಆದರೆ ದೇವರಿಗೆ ಸಂತೃಪ್ತಿಯಾಗುತ್ತದೆ ಎಂದರು.

ಬಸವಣ್ಣನವರ ವಚನದಂತೆ ಕಲ್ಲ ನಾಗರ ಕಂಡರೆ ಹಾಲನೆರೆಯಂಬರು, ದಿಟದ ನಾಗರ ಕಂಡರೆ ಕೊಲ್ಲು, ಕೊಲ್ಲೆಂಬರು. ಅದೇ ಹಸಿವಾದವರು ಬಂದರೆ ಮುಂದಕ್ಕೆ ಹೋಗು ಎನ್ನುತ್ತಾರೆ. ಹಬ್ಬಗಳ ಆಚರಣೆ ಮಾಡುವುದು ತಪ್ಪಲ್ಲ. ಯಾರು ಹಸಿದಂತಹವರು ಇರುತ್ತಾರೆ ಅವರಿಗೆ ಅನ್ನವನ್ನು ಕೊಡಿ. ಉಣಲಾರದವರಿಗೆ ನೈವೇದ್ಯ ಮಾಡುವ ಬದಲು ಉಣ್ಣುವವರಿಗೆ ಕೊಡಿ ಎಂದು ಧರ್ಮದ ಸಂದೇಶವನ್ನು ಬಸವಣ್ಣನವರು ಕೊಟ್ಟಿದ್ದಾರೆ ಎಂದರು.

ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಕಾರ್ಯಕ್ರಮ ಉದ್ಘಾಟಿಸಿದರು. ಪ್ರವಚನಕಾರ ಬಿ.ಎಂ.ಪಂಚಾಕ್ಷರಿ ಶಾಸ್ತ್ರಿ, ಶಿವಯೋಗಾಶ್ರಮ ಟ್ರಸ್ಟ್‌ ಸಹ ಕಾರ್ಯದರ್ಶಿ ಎಸ್.ಓಂಕಾರಪ್ಪ, ಮುರುಘರಾಜೇಂದ್ರ ಬ್ಯಾಂಕ್‌ ಉಪಾಧ್ಯಕ್ಷ ಎಚ್.ವಿ. ಮಂಜುನಾಥ ಸ್ವಾಮಿ, ಲಂಬಿ ಮುರುಗೇಶ, ಹಾಸಬಾವಿ ಕರಿಬಸಪ್ಪ, ಕಣಕುಪ್ಪಿ ಮುರುಗೇಶ, ಟಿ.ಎಂ. ವೀರೇಂದ್ರ, ಚಿಗಟೇರಿ ಜಯದೇವ, ನಸೀರ್ ಅಹಮದ್, ಮಹಿಳಾ ಬಸವ ಕೇಂದ್ರದ ಮಹಾದೇವಮ್ಮ, ಕುಂಟೋಜಿ ಚನ್ನಪ್ಪ, ಕೆ.ಸಿ.ಉಮೇಶ, ಚನ್ನಬಸವ ಶೀಲವಂತ್, ಬೆಳ್ಳೂಡಿ ಮಂಜುನಾಥ, ಶ್ರೀಮಠದ ಭಕ್ತರು, ಶಾಲಾ ಶಿಕ್ಷಕರು, ಮಕ್ಕಳು ಇದ್ದರು.

- - -

(ಕೋಟ್‌)

ನಾಗರ ಪಂಚಮಿ ಹೆಸರಿನಲ್ಲಿ ಅಮೃತಕ್ಕೆ ಸಮನಾದ ಹಾಲನ್ನು ಹುತ್ತಕ್ಕೆ ಹಾಕಿ ವ್ಯರ್ಥ ಮಾಡುವ ಬದಲು, ಮಕ್ಕಳಿಗೆ ಕೊಡುವಂತಹ ಕೆಲಸವನ್ನು ಬಸವ ಕೇಂದ್ರ ಮಾಡುತ್ತಿರುವುದು ಶ್ಲಾಘನೀಯ. ಯಾವುದೇ ವಿಷಯವನ್ನು ವೈಜ್ಞಾನಿಕವಾಗಿ ತಿಳಿದಾಗ ಅದಕ್ಕೆ ಅರ್ಥ ಇರುತ್ತದೆ. ವಿಷಯ ಅರ್ಥ ಮಾಡಿಕೊಳ್ಳದೇ ಓದಬಾರದು. ಗೊತ್ತಾಗದಿದ್ದರೆ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಬೇಕು.

- ಉಮಾ ಪ್ರಶಾಂತ್, ಜಿಲ್ಲಾ ಎಸ್‌ಪಿ

- - -

-28ಕೆಡಿವಿಜಿ33.ಜೆಪಿಜಿ:

ದಾವಣಗೆರೆಯಲ್ಲಿ ನಡೆದ ಹಾಲು ಕುಡಿಸುವ ಹಬ್ಬ- ಬಸವ ಪಂಚಮಿ ಕಾರ್ಯಕ್ರಮವನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಉದ್ಘಾಟಿಸಿದರು.