ಕೃತಕ ಬುದ್ಧಿಮತ್ತೆಯಿಂದ ಭಾರಿ ಬದಲಾವಣೆ ಸಂಭವಿಸುತ್ತದೆ ಎಂಬ ಚರ್ಚೆ ವ್ಯಾಪಕವಾಗಿದೆ

ಕುಷ್ಟಗಿ: ಕೃತಕ ಬುದ್ಧಿಮತ್ತೆಗಿಂತ ನೈಜ ಬುದ್ದಿಮತ್ತೆಯ ಬಳಕೆಯಿಂದ ಅರ್ಥಪೂರ್ಣ ಬದಲಾವಣೆ ಸಾಧ್ಯ ಎಂದು ಬೆಂಗಳೂರ ವಿಜ್ಞಾನಿ ಡಾ.ಆರ್.ಸಿ. ಹಿರೇಮಠ್ ಹೇಳಿದರು.

ಪಟ್ಟಣದ ಎಸ್ ವಿಸಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಎರಡು ದಿನಗಳ ಗ್ರಾವಿಟಿ-2025-26 ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಕೃತಕ ಬುದ್ಧಿಮತ್ತೆಯಿಂದ ಭಾರಿ ಬದಲಾವಣೆ ಸಂಭವಿಸುತ್ತದೆ ಎಂಬ ಚರ್ಚೆ ವ್ಯಾಪಕವಾಗಿದೆ. ಕೃತಕ ಬುದ್ಧಿಮತ್ತೆ ತರಬಹುದಾದ ಬದಲಾವಣೆಗಳ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ. ಕೃತಕ ಬುದ್ಧಿಮತ್ತೆ ಸಾಮಾಜಿಕ ವ್ಯವಸ್ಥೆಯ ಸಮಸ್ಯೆ ಪರಿಹರಿಸಬಹುದು. ಮನುಕುಲದ ಮೂಲಭೂತ ಸಮಸ್ಯೆ ಪರಿಹರಿಸಿ ಅರ್ಥಪೂರ್ಣ ಬದಲಾವಣೆ ತರುವ ಸಾಮರ್ಥ್ಯ ಇರುವುದು ಕೇವಲ ನೈಜ ಬುದ್ದಿಮತ್ತೆಗೆ ಮಾತ್ರ. ಆದ್ದರಿಂದ ನೈಜ ಬುದ್ದಿಮತ್ತೆಯ ಬಳಕೆಯ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.

ಸರಿ ಮತ್ತು ತಪ್ಪು ಅರಿವು ಹಾಗೂ ಬಳಕೆ ಕಡಿಮೆಯಾಗಿರುವುದು ಭಾರತ ಇಂದು ಎದುರಿಸುತ್ತಿರುವ ಬಿಕ್ಕಟ್ಟಿಗೆ ಕಾರಣ. ಮನುಷ್ಯನಲ್ಲಿರುವ ನೈಜ ಬುದ್ಧಿಮತ್ತೆ ಬಳಸಿಕೊಂಡರೆ ಇದಕ್ಕೆ ಪರಿಹಾರ ಸಾಧ್ಯ. ನೈಜ ಬುದ್ಧಿಮತ್ತೆಯ ಬಳಕೆ ಕಡಿಮೆಯಾಗುತ್ತಿರುವುದು ದುರಂತದ ಸಂಕೇತ ಎಂದರು.

ಶಿಕ್ಷಣ ಸಂಸ್ಥೆ, ಪೋಷಕರು ಹಾಗೂ ಸರ್ಕಾರಗಳು ಅನ್ವಯಿಕ ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಡುತ್ತಿರುವುದು ಕಳವಳದ ವಿಷಯ. ಮೂಲ ವಿಜ್ಞಾನದ ವಿಷಯಗಳಿಗೆ ಪರ್ಯಾಯವಿಲ್ಲ. ಬಾಹ್ಯಾಕಾಶ, ಆರೋಗ್ಯ, ಪರಿಸರ ಕ್ಷೇತ್ರಗಳಲ್ಲಿ ಸಂಶೋಧನೆಗೆ ವಿಫುಲ ಅವಕಾಶಗಳಿವೆ. ಇದು ಅರ್ಥವಾಗದ ಹೊರತು ನೀಟ್, ಸಿಇಟಿ, ಜೆಇಇ ಹಾಗೂ ಐಐಟಿ ಮಾತ್ರ ಉತ್ತಮ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತವೆ ಎಂಬ ಭ್ರಮೆಯಿಂದ ಹೊರಗಡೆ ಬರಲು ಸಾಧ್ಯವಿಲ್ಲ ಎಂದರು.

ಸಾವಯವ ಹಾಗೂ ಸುಸ್ಥಿರ ಕೃಷಿ ತಜ್ಞ ಶ್ರೀಪಾದರಾಜ್ ಮುರಡಿ ಮಾತನಾಡಿ, ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆ ಕ್ಷೇತ್ರಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯ. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಶೋಧನೆ ನಡೆಯದೇ ಇರುವುದು ಹಾಗೂ ವೈಜ್ಞಾನಿಕ ಆವಿಷ್ಕಾರಗಳ ಬಳಕೆಯಾಗದಿರುವುದು ಎಲ್ಲ ಕೃಷಿ ಸಮಸ್ಯೆಗಳ ಮೂಲ. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ. ವಿದ್ಯಾರ್ಥಿಗಳು ಇದರ ಕಡೆ ಗಮನಹರಿಸಬೇಕು ಎಂದರು.

ಸಿಇಓ ಡಾ. ಜಗದೀಶ್ ಅಂಗಡಿ ಮಾತನಾಡಿ ಮಾರ್ಗದರ್ಶನ ಮತ್ತು ವೇದಿಕೆ ಒದಗಿಸಿದರೆ ವಿದ್ಯಾರ್ಥಿಗಳು ಉನ್ನತ ಹುದ್ದೆಗೆ ಏರಲು ಸಾಧ್ಯ. ಇಂದಿನ ಶೈಕ್ಷಣಿಕ ವ್ಯವಸ್ಥೆಯ ಸಮಸ್ಯೆಗಳಿಗೆ ಬಹುತೇಕ ಪೋಷಕರ ಮನಸ್ಥಿತಿ ಮತ್ತು ವೃತ್ತಿಪರತೆರಹಿತ ಶಿಕ್ಷಕರು ಕಾರಣ. ಮಕ್ಕಳಿಗೆ ವೇದಿಕೆ ಒದಗಿಸಲು ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಇದರಲ್ಲಿ ಒಟ್ಟು 586 ವಿವಿಧ ಮಾದರಿ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ. ಮಕ್ಕಳಿಗೆ ಕೃಷಿ ಮತ್ತು ಪರಿಸರ ಕ್ಷೇತ್ರಗಳ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ದೇಸಿ ಭತ್ತ, ತರಕಾರಿ ಬೀಜಗಳ ತಳಿ, ನೈಸರ್ಗಿಕ ಬೆಲ್ಲ ಹಾಗೂ ಸಿರಿಧಾನ್ಯಗಳ ಪ್ರದರ್ಶನ ಏರ್ಪಡಿಸಲಾಗಿದೆ. ಬೆಳಗಾವಿಯ ಖಾನಾಪುರದ ಕೃಷಿಕ ಡಾ. ಶಂಕರ್ ಲಂಗಟಿ ಅವರೊಂದಿಗೆ ರೈತರಿಗಾಗಿ ಸಂವಾದ ಏರ್ಪಡಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್ ವಿಸಿ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಬಸವರಾಜ್ ಚಂದ್ರಶೇಖರ್, ಎಸ್ ವಿ ಸಿ ಮೆಮೋರಿಯಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮಹದೇವ್ ಮಧಾಳೆ, ಎಸ್ ವಿ ಸಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಖ್ಯೋಪಾಧ್ಯಾಯ ಭೀಮರಾವ್ ಕುಲಕರ್ಣಿ, ಎಸ್ ವಿಸಿಪಿ ಯು ಕಾಲೇಜಿನ ಪ್ರಾಂಶುಪಾಲ ಭೀಮಸೇನ್ ಆಚಾರ್, ಡಾ.ಶಂಕರ್ ಲಂಗಟಿ, ಲೇಖಕ ಆನಂದ ತೀರ್ಥ ಪ್ಯಾಟಿ ಹಾಗೂ ಹಣಕಾಸು ಅಧಿಕಾರಿ ಅರುಣ್ ಕರ್ಮಾಕರ್ ಉಪಸ್ಥಿತರಿದ್ದರು.