ಕೇವಲ ಗದ್ದಲ ಎಬ್ಬಿಸುವುದಕ್ಕಿಂತ ವಿಷಯಾಧಾರಿತ, ರಚನಾತ್ಮಕ ಚರ್ಚೆಗಳು ನಡೆಯುವುದು ಪ್ರಜಾಪ್ರಭುತ್ವಕ್ಕೆ ಅಗತ್ಯ
ಬಳ್ಳಾರಿ: ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಮತ್ತು ಸಾರ್ಥಕತೆ ಅರ್ಥಪೂರ್ಣ ಚರ್ಚೆಗಳಲ್ಲಿ ಅಡಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಶಾಸನ ಸಭೆಗಳಲ್ಲಿ ಕೇವಲ ಗದ್ದಲ, ವಿರೋಧಕ್ಕಾಗಿಯೇ ವಿರೋಧ ವ್ಯಕ್ತಪಡಿಸುವ ಮನೋಭಾವ ಹೆಚ್ಚುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಹೇಳಿದರು.
ಬಳ್ಳಾರಿ ತಾಲೂಕಾಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಗರದ ಡಾ. ಬಾಬು ಜಗಜೀವನ್ ರಾಂ ಭವನದಲ್ಲಿ ಬುಧವಾರ ಆಯೋಜಿಸಿದ್ದ ಬಳ್ಳಾರಿ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೇವಲ ಗದ್ದಲ ಎಬ್ಬಿಸುವುದಕ್ಕಿಂತ ವಿಷಯಾಧಾರಿತ, ರಚನಾತ್ಮಕ ಚರ್ಚೆಗಳು ನಡೆಯುವುದು ಪ್ರಜಾಪ್ರಭುತ್ವಕ್ಕೆ ಅಗತ್ಯ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಕಾನೂನು ರೂಪಿಸುವ ಮುನ್ನ ಸಾಧಕ-ಬಾಧಕಗಳ ಕುರಿತು ಆಳವಾದ ಚರ್ಚೆ ನಡೆಯುವಂತಾಗಬೇಕು. ಯುವಜನತೆ ಸಂವಿಧಾನದ ಮೌಲ್ಯ ಅರಿತು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಮಬ್ರಹ್ಮಂ ಮಾತನಾಡಿ, ವಿದ್ಯಾರ್ಥಿ-ಯುವಜನರು ವೈದ್ಯ, ಎಂಜಿನಿಯರ್, ವಕೀಲರಾಗುವ ಕನಸು ಕಾಣುವಷ್ಟೇ ಉತ್ಸಾಹದಿಂದ ರಾಜಕೀಯ ನಾಯಕರು, ಶಾಸಕರು ಮತ್ತು ಸಂಸದರಾಗುವ ಕನಸು ಕಾಣಬೇಕು ಎಂದು ಕಿವಿಮಾತು ಹೇಳಿದರು.ವಿದ್ಯಾರ್ಥಿಗಳಿಂದ ಗಮನಾರ್ಹ ಚರ್ಚೆ:
ಅಣಕು ಸಂಸತ್ತು ಸಭೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ನೈಜ ಸಂಸತ್ತಿನ ಕಾರ್ಯಕಲಾಪ ಮರುಸೃಷ್ಟಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಪಾತ್ರ ವಹಿಸಿದ್ದ ವಿದ್ಯಾರ್ಥಿಗಳು ಪ್ರಸ್ತುತ ಸಮಾಜದ ಪ್ರಮುಖ ವಿಷಯಗಳಾದ ಶಿಕ್ಷಣ, ಆರೋಗ್ಯ, ಯುವಜನರ ಉದ್ಯೋಗ, ಪರಿಸರ ಸಂರಕ್ಷಣೆ ಹಾಗೂ ಗ್ರಾಮೀಣ ಅಭಿವೃದ್ಧಿಯಂತಹ ಗಂಭೀರ ವಿಚಾರಗಳ ಕುರಿತು ವಾಸ್ತವಿಕ ಸಂಸತ್ತಿನ ಶೈಲಿಯಲ್ಲೇ ತಾರ್ಕಿಕ ಚರ್ಚೆ ನಡೆಸಿದರು.ವಿಶೇಷವಾಗಿ ಪ್ರಶ್ನೋತ್ತರ ಕಲಾಪ, ಶೂನ್ಯ ವೇಳೆ ಹಾಗೂ ನೂತನ ವಿಧೇಯಕಗಳ ಮಂಡನೆ ಪ್ರಕ್ರಿಯೆಗಳು ನೆರೆದಿದ್ದ ವೀಕ್ಷಕರ ಮತ್ತು ಗಣ್ಯರ ಮೆಚ್ಚುಗೆಗೆ ಪಾತ್ರವಾದವು. ಸ್ಪರ್ಧೆಯ ಅಂತ್ಯದಲ್ಲಿ ಅತ್ಯುತ್ತಮ ವಾಗ್ಮಿತ್ವ ಹಾಗೂ ಸಂಸದೀಯ ಕೌಶಲ್ಯ ಪ್ರದರ್ಶಿಸಿದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಯುವ ಸಂಸತ್ತು ಸಭೆಗೆ ಆಯ್ಕೆ ಮಾಡಲಾಯಿತು. ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ಹೊನ್ನೂರಾಲಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶಾಹೆಕಾ ಅಹಮದಿ, ಬಳ್ಳಾರಿ ತಾಲೂಕು ಗ್ರೇಡ್-2 ತಹಸೀಲ್ದಾರ ಸುಧಾ ಅರಮನೆ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕಸ್ತೂರಿ, ತಾಪಂ ಸಹಾಯಕ ನಿರ್ದೇಶಕಿ ಸಂಧ್ಯಾ, ಮುನ್ಸಿಪಲ್ ಕಾಲೇಜಿನ ಉಪನ್ಯಾಸಕ ನಾಗರೆಡ್ಡಿ ಕೆ.ವಿ., ಪ್ರಾಚಾರ್ಯ ಸತೀಶ್ ಹಿರೇಮಠ್ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು- ಉಪನ್ಯಾಸಕರು ಹಾಗೂ ಪೋಷಕರು ಉಪಸ್ಥಿತರಿದ್ದರು.