ಮಣ್ಣೂರ ಆಸ್ಪತ್ರೆಯಲ್ಲಿ ಅರ್ಥಪೂರ್ಣ ವೈದ್ಯರ ದಿನಾಚರಣೆ

| Published : Jul 02 2024, 01:32 AM IST

ಸಾರಾಂಶ

ರೋಗಿಗಳೊಂದಿಗೆ ವೈದ್ಯರು ಹೆಚ್ಚುಹೊತ್ತು ಮಾತನಾಡಿದಷ್ಟು ಆತ್ಮವಿಶ್ವಾಸ ರೋಗಿಗಳಲ್ಲಿ ಬೆಳೆಯುತ್ತದೆ. ಕಾಯಿಲೆಯ ಬಗ್ಗೆ ವೈದ್ಯರಿಗೂ ಸ್ಪಷ್ಠತೆ ಸಿಗುತ್ತದೆ. ಇದರಿಂದಾಗಿ ಅಗತ್ಯ ಚಿಕಿತ್ಸೆಯನ್ನು ಅಂತ್ಯಂತ ಪರಿಣಾಮಕಾರಿಯಾಗಿ ನೀಡಲು ಸಹಾಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ರೋಗಿಗಳೊಂದಿಗೆ ವೈದ್ಯರು ಹೆಚ್ಚುಹೊತ್ತು ಮಾತನಾಡಿದಷ್ಟು ಆತ್ಮವಿಶ್ವಾಸ ರೋಗಿಗಳಲ್ಲಿ ಬೆಳೆಯುತ್ತದೆ. ಕಾಯಿಲೆಯ ಬಗ್ಗೆ ವೈದ್ಯರಿಗೂ ಸ್ಪಷ್ಠತೆ ಸಿಗುತ್ತದೆ. ಇದರಿಂದಾಗಿ ಅಗತ್ಯ ಚಿಕಿತ್ಸೆಯನ್ನು ಅಂತ್ಯಂತ ಪರಿಣಾಮಕಾರಿಯಾಗಿ ನೀಡಲು ಸಹಾಯವಾಗುತ್ತದೆ. ಹೀಗಾಗಿ, ವೈದ್ಯರು ಸಾಧ್ಯವಾದಷ್ಟು ವಿವರವಾಗಿ ರೋಗಿಗಳೊಂದಿಗೆ ಸಂವಹನ ನಡೆಸಬೇಕು ಎಂದು ಕಲಬುರಗಿ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಮಣ್ಣೂರ ಹೇಳಿದರು.

ಕಲಬುರಗಿ ನಗರದ ರಿಂಗ್‌ ರಸ್ತೆಯಲ್ಲಿರುವ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ನಿಮಿತ್ತ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಎಲ್ಲ ಬಗೆಯ ಕಾಯಿಲೆ ಹಾಗೂ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಜನರು ಅರಿತಿದ್ದಾರೆ. ಎಲ್ಲವನ್ನೂ ಪ್ರಶ್ನಿಸುವುದು ಹಾಗೂ ತಿಳಿಯಲು ಬಯಸುತ್ತಾರೆ. ಗ್ರಾಮೀಣ ಪ್ರದೇಶದ ಜನರು ತಾವು ಅನುಭವಿಸುತ್ತಿರುವ ಸಂಕಟ ಮಾತ್ರ ತಿಳಿಸಿ, ರೋಗ ನಿರ್ಣಯ ಚಿಕಿತ್ಸೆ ಹೀಗೆ ಎಲ್ಲವೂ ವೈದ್ಯರ ಸೂಚನೆಯಂತೆಯೇ ಪಾಲಿಸಲು ಮುಂದಾಗುತ್ತಾರೆ. ಅವರಿಗೂ ಸಹ ಸಂಪೂರ್ಣ ಮಾಹಿತಿ ನೀಡಿ, ಆತ್ಮವಿಶ್ವಾಸ ಮೂಡಿಸಬೇಕು ಎಂದರು ಕರೆ ನೀಡಿದರು.

ಚಿಕಿತ್ಸೆಯ ಆಯ್ಕೆಗಳನ್ನು ಅವರಿಗೇ ನೀಡಬೇಕು. ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡುವ ಭರದಲ್ಲಿ ರೋಗಿಗಳೊಂದಿಗೆ ಸರಿಯಾಗಿ ಮಾತನಾಡದೇ ಕಾಯಿಲೆ-ಚಿಕಿತ್ಸೆ ನಿರ್ಧರಿಸುವುದು ಸಮಂಜಸವಲ್ಲ. ವೃತ್ತಿಯಲ್ಲಿ ಸೇವೆ ಹೆಚ್ಚಾದಾಗಲೇ ಯಶಸ್ಸುಗಳಿಸಲು ಸಾಧ್ಯ ಎಂದು ಹೇಳಿದರು.

ಸಮಾರಂಭದಲ್ಲಿ ಡಾ. ಫಾರೂಕ್‌ ಮಣ್ಣೂರ, ಡಾ. ಮುಝಾಮಿಲ್‌, ಡಾ. ಸತೀಶ, ಡಾ. ಶ್ರೀಕಾಂತ್‌, ಡಾ. ಫೈಜುಲ್‌ ಮತ್ತು ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.