ಸಾರಾಂಶ
ತರೀಕೆರೆಯಲ್ಲಿ ಶ್ರಾವಣ ಸಾಹಿತ್ಯ ಸಂಬ್ರಮ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮನೆ ಮನೆಗಳಲ್ಲಿ ಅರ್ಥ ಪೂರ್ಣ ವಿಚಾರಗೋಷ್ಠಿಗಳನ್ನು ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಕಿರಣ್ ಹೇಳಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮಹಿಳಾ ಘಟಕ, ಹೋಬಳಿ ಘಟಕ, ನಗರ ಘಟಕ, ಯುವ ಘಟಕದಿಂದ ಕಟ್ಟೆಹೊಳೆ ಸುನಿತ ಕಿರಣ್ ಅವರ ಮನೆಯಂಗಳದಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿನ ಸಮಾಜ ಕೂಡ ಬದಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹೆಣ್ಣು ಮಕ್ಕಳಿಗೂ ಪ್ರಾಧಾನ್ಯತೆ ನೀಡಿ ಗೌರವಿಸು ತ್ತಿದ್ದಾರೆ. ಇಂದಿನ ನಮ್ಮ ಮನೆಯಂಗಳದಲ್ಲಿ ನಡೆದ ಉಪನ್ಯಾಸ ವಿಚಾರ ಅರ್ಥಪೂರ್ಣವಾಗಿತ್ತು. ಶೋಷಣೆ ಎಲ್ಲಿ ನಡೆಯುತ್ತದೆಯೋ ಅದರ ವಿರುದ್ಧ ಪ್ರತಿಯೊಬ್ಬರೂ ನಿಲ್ಲುವುದು ಮನುಷ್ಯನ ಆದ್ಯ ಕರ್ತವ್ಯ ಎಂದು ಹೇಳಿದರು.ತರೀಕೆರೆ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಕನ್ನಡ ಶಿಕ್ಷಕಿ ಡಾ. ನಾಗಜ್ಯೋತಿ ಸ್ತ್ರೀ ಎಂದರೆ ಅಷ್ಟೇ ಸಾಕೆ ವಿಷಯ ಕುರಿತು ಉಪನ್ಯಾಸ ನೀಡಿದರು. ಪುರುಷ ಪಾರಮ್ಯತೆಯ ಏಕ ಪಕ್ಷೀಯ ನಿಲುವುಗಳ ಬಗ್ಗೆ ಹೆಣ್ಣು ಮಕ್ಕಳು ಧ್ವನಿ ಎತ್ತಬೇಕು, ಪಿತೃ ಪ್ರಧಾನ್ಯತೆಯ ಕರಿ ನೆರಳಿನಿಂದ ಹೊಬರಲು ಉನ್ನತ ಶಿಕ್ಷಣ ದೊರೆಯಬೇಕು. ಕಳೆದ ಶತಮಾನ ದಲ್ಲಿ ಶಿಕ್ಷಣ ಹಾಗೂ ಸ್ವಾತಂತ್ರ್ಯ ಹೋರಾಟದ ಅನುಭವಗಳು ಹೊಸ ಅಭಿವ್ಯಕ್ತಿಯ ದಾರಿ ಸೃಷ್ಠಿಸಿವೆ ಎಂದು ಹೇಳಿದರು.
ವಕೀಲ ಬಿ.ಎನ್.ಕಿರಣ್ ಕುಮಾರ್ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ ಕನ್ನಡ ತಾಯಿ ಭುವನೇಶ್ವರಿ ಹಬ್ಬವನ್ನು ಎಲ್ಲ ಮನೆ, ಶಾಲಾ ಕಾಲೇಜುಗಳಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮದಡಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿರುವುದು ಅಭಿನಂದ ನಾರ್ಹ ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಂಚಾಲಕ ಇಮ್ರಾನ್ ಅಹಮದ್ ಬೇಗ್ ಮಾತನಾಡಿ ಗಂಡು ಮಕ್ಕಳಾಗಲಿ ಹೆಣ್ಣು ಮಕ್ಕಳಾಗಲಿ ಅವರಿಗೆ ಸಂಸ್ಕಾರ ಅಚಾರ-ವಿಚಾರ ಪರಂಪರೆ ಅರಿವು ಮೂಡಿಸಿ ಬೆಳೆಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಮಾತನಾಡಿ ಸ್ವಾತಂತ್ರ್ಯಗಂಡು- ಹೆಣ್ಣು ಮಕ್ಕಳಿಗೂ ಸರಿಸಮನಾಗಿದೆ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನದಿಂದ ಮಹಿಳೆಯರಿಗೂ ಸಿಗಬೇಕಾದ ಹಕ್ಕು ಮತ್ತು ಸಮಾನತೆ ದೊರೆಯುತ್ತಿದೆ. ಸಮ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದರು.ಕನ್ನಡಶ್ರೀ ಬಿ.ಎಸ್.ಭಗವಾನ್, ಕಸಾಪ ಗೌರವಾಧ್ಯಕ್ಷ ಶಿವಣ್ಣ, ಉಪನ್ಯಾಸಕ ಎ.ದಾದಾಪೀರ್, ಜಿಲ್ಲಾ ಮಹಿಳಾ ಕಸಾಪ ಕೋಶ್ಯಾಧ್ಯಕ್ಷೆ ವಿಶಾಲಾಕ್ಷಮ್ಮ, ಲತಾ ಗೋಪಾಲಕೃಷ್ಣ, ಲಕ್ಷ್ಮಿಭಗವಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
26ಕೆಟಿಆರ್.ಕೆ.10ಃತರೀಕೆರೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ಶ್ರಾವಣ ಸಾಹಿತ್ಯ ಸಂಭ್ರಮದ ಉದ್ಘಾಟನೆಯನ್ನು ವಕೀಲ ಬಿ.ಎನ್.ಕಿರಣ್ ಕುಮಾರ್ ನೆರವೇರಿಸಿದರು. ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಕಿರಣ್, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಕನ್ನಡ ಶಿಕ್ಷಕಿ ಡಾ.ನಾಗಜ್ಯೋತಿ, ಕಸಾಪ ಜಿಲ್ಲಾ ಸಂಚಾಲಕ ಇಮ್ರಾನ್ ಅಹಮದ್ ಬೇಗ್ ಮತ್ತಿತರರು ಇದ್ದರು.