ಕಟ್ಟಿಮಠದಲ್ಲಿ ನಾಳೆಯಿಂದ ಅರ್ಥಪೂರ್ಣ ನವರಾತ್ರಿ ಉತ್ಸವ

| Published : Oct 02 2024, 01:12 AM IST

ಸಾರಾಂಶ

ಪ್ರತಿಷ್ಠಿತ ರಿಲಯ್ಸನ್‌ ಕಂಪನಿಯಲ್ಲಿ ಡಿಸೈನ್‌ ಎಂಜಿನಿಯರ್‌ ಆಗಿರುವ ಕಾರ್ತಿಕ್‌ ಪ್ರತಿ ವರ್ಷ ಶರನ್ನವರಾತ್ರಿ ಸಮಯದಲ್ಲಿ ಧಾರವಾಡಕ್ಕೆ ಬಂದು ತನ್ನ ಕಲ್ಪನೆಯಲ್ಲಿ ಮೂಡಿದ ದೇವಿಗೆ ವಿಶೇಷವಾಗಿ ಅಲಂಕಾರ ಮಾಡುವ ಮೂಲಕ ಭಕ್ತರ ಗಮನ ಸೆಳೆದಿದ್ದಾರೆ.

ಧಾರವಾಡ: ದೇವರು, ಪೂಜೆ-ಪುನಃಸ್ಕಾರ ಕುರಿತು ಇಂದಿನ ಪೀಳಿಗೆ ಅದರಲ್ಲೂ ಉನ್ನತ ಶಿಕ್ಷಣ ಪಡೆದವರಿಗೆ ಆಸಕ್ತಿಗಿಂತ ನಿರಾಸಕ್ತಿಯೇ ಜಾಸ್ತಿ. ಇಂತಹ ಸಂದರ್ಭದಲ್ಲಿ ಇಲ್ಲಿಯ ಕಾರ್ತಿಕ ಕಟ್ಟಿಮಠ ಎಂಬುವರು ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು ದೂರದ ಮುಂಬೈನಲ್ಲಿದ್ದರೂ ತಮ್ಮ ಕುಟುಂಬ ಪಾರಂಪರಿಕವಾಗಿ ಆರಾಧಿಸಿಕೊಂಡು ಬರುತ್ತಿರುವ ದೇವಿ ಅಲಂಕಾರ ಹಾಗೂ ಆರಾಧನೆಯನ್ನು ನಿಷ್ಕಳಂಕವಾಗಿ ಮಾಡುತ್ತಿದ್ದಾರೆ.

ಪ್ರತಿಷ್ಠಿತ ರಿಲಯ್ಸನ್‌ ಕಂಪನಿಯಲ್ಲಿ ಡಿಸೈನ್‌ ಎಂಜಿನಿಯರ್‌ ಆಗಿರುವ ಕಾರ್ತಿಕ್‌ ಪ್ರತಿ ವರ್ಷ ಶರನ್ನವರಾತ್ರಿ ಸಮಯದಲ್ಲಿ ಧಾರವಾಡಕ್ಕೆ ಬಂದು ತನ್ನ ಕಲ್ಪನೆಯಲ್ಲಿ ಮೂಡಿದ ದೇವಿಗೆ ವಿಶೇಷವಾಗಿ ಅಲಂಕಾರ ಮಾಡುವ ಮೂಲಕ ಭಕ್ತರ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ನವರಾತ್ರಿಯಲ್ಲಿ ವಿವಿಧ ದೇವಿ ದೇವಸ್ಥಾನಗಳಲ್ಲಿ ದೇವಿಗೆ ಅಲಂಕಾರ ಮಾಡಲಾಗುತ್ತದೆ. ಆದರೆ, ಕಾರ್ತಿಕ್‌ ಅವರ ಕಲ್ಪನೆಯಲ್ಲಿ ದೇವಿಗೆ ಮಾಡುವ ಅಲಂಕಾರವೇ ವಿಶೇಷ. ಪ್ರತಿವರ್ಷ ಒಂದೊಂದು ಕಲ್ಪನೆಯಲ್ಲಿ ದೇವಿಗೆ ಅಲಂಕಾರ ಮಾಡುತ್ತಿದ್ದು, ಇಡೀ ಧಾರವಾಡದ ಜನತೆ ಇವರ ಕಲ್ಪನೆಯಲ್ಲಿ ಅರಳಿದ ದೇವಿಯನ್ನು ಕಣ್ತುಂಬ ನೋಡಿ ಸಂತೃಪ್ತರಾಗುತ್ತಾರೆ.

ದಸಾರ ವೈಭವ

ಇಲ್ಲಿಯ ಮಂಗಳವಾರ ಪೇಟೆಯಲ್ಲಿರುವ ಕಟ್ಟಿಮಠ ಕಿತ್ತೂರು ಸಂಸ್ಥಾನದ ರಾಜಗುರು ಮನೆತನ. ಸುಮಾರು 200 ವರ್ಷಗಳ ಪುರಾತನ ನಿವಾಸದಲ್ಲಿ ದಸರಾ ವೈಭವ ಅನೇಕ ವರ್ಷಗಳಿಂದ ಮನೆಯಲ್ಲೇ ಶಾಸ್ತ್ರೋಕ್ತವಾಗಿ ದೇವಿ ಆರಾಧನೆ, ಒಂಬತ್ತು ದಿನಗಳ ಕಾಲ ದೇವಿಗೆ ವಿವಿಧ ಅಲಂಕಾರ, ಕಲಾವಿದರಿಗೆ ಗೌರವ, ಹಬ್ಬ-ಉತ್ಸವಗಳ ಮಹತ್ವ ಬಗ್ಗೆ ಜನರಿಗೆ ತಿಳಿವಳಿಕೆ ಹಾಗೂ ಉಪನ್ಯಾಸಗಳನ್ನು ಕಾರ್ತಿಕ್‌ ಹಾಗೂ ಅವರ ಕುಟುಂಬದ ಸದಸ್ಯರು ನಡೆಸಿಕೊಡುತ್ತಿದ್ದಾರೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮತ್ತಷ್ಟು ಮಾಹಿತಿ ನೀಡಿದ ವೀರೇಶ ಕಟ್ಟಿಮಠ, ಮೊದಲಿನಿಂದಲೂ ಮನೆಯಲ್ಲಿ ನವರಾತ್ರಿ ಉತ್ಸವ ನಡೆಯುತ್ತಿತ್ತು. ಇತ್ತೀಚಿನ 16 ವರ್ಷಗಳಿಂದ ಪುತ್ರ ಕಾರ್ತಿಕ ಅದನ್ನು ಮುನ್ನಡೆಸಿದ್ದಾನೆ. ಕಾರ್ತಿಕ ಕಾನ್ಪುರ್‌ ಐಐಟಿಯಲ್ಲಿ ಶಿಕ್ಷಣ ಪಡೆದಿದ್ದರೂ, ಧಾರ್ಮಿಕ ಆಸಕ್ತಿ ಹೊಂದಿದ್ದಾನೆ. ನವರಾತ್ರಿ ಉತ್ಸವದಲ್ಲಿ ಪ್ರತಿಷ್ಠಾಪಿಸುವ ದೇವಿ ಮೂರ್ತಿ, ಅಲಂಕಾರಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ಹಲವು ತಿಂಗಳಿಂದ ಸ್ವತಃ ಸಿದ್ಧಪಡಿಸುತ್ತಿದ್ದಾನೆ. ಒಂಭತ್ತು ದಿನಗಳ ಕಾಲ ದೇವಿಯ ಅವತಾರ, ದೀಪದ ವ್ಯವಸ್ಥೆಯನ್ನು ಆಸಕ್ತಿ ಹಾಗೂ ಭಕ್ತಿಯಿಂದ ಮಾಡುತ್ತಾನೆ. ದಸರಾ ಹಿನ್ನೆಲೆಯಲ್ಲಿ ನಿತ್ಯ ಕಾರ್ತಿಕ ಸಂಗೀತ ಕಾರ್ಯಕ್ರಮ ಸಹ ನಡೆಸಿಕೊಡುತ್ತಾನೆ ಎಂದರು.

ಒಂಭತ್ತು ಅವತಾರದಲ್ಲಿ ದೇವಿ

ಈ ಬಾರಿ ಅ. 3ರಂದು ಕನ್ಯಾಕುಮಾರಿ, ಅ. 4ರಂದು ಕನ್ಯಾಕುಮಾರಿ (ಭಗವತಿ) ಅ. 5 ರಂದು ಕಾಶ್ಮೀರ ಶಾರದಾ, ಅ. 6ರಂದು ಕಾಶ್ಮೀರ ಶಾರದಾ (ಜ್ಞಾನದಾ), ಅ. 7ರಂದು ಕಾಮಕ್ಯಾ, ಅ. 8ರಂದು ಕಾಮಕ್ಯಾ (ಕಾಮರೂಪ), ಅ. 9 ರಂದು ಕಂಚಿ ಕಾಮಾಕ್ಷಿ, ಅ. 10ರಂದು ಕಂಚಿ ಕಾಮಾಕ್ಷಿ (ವೀಣಾ ಕಾಮಾಕ್ಷಿ), ಅ. 11 ಹಾಗೂ ಅ. 12ರಂದು ವಿಂದ್ಯಾವಾಸಿನಿ ಅವತಾರದಲ್ಲಿ ದೇವಿ ಅಲಂಕೃತಗೊಳ್ಳಲಿದ್ದಾಳೆ ಎನ್ನುವ ಕಾರ್ತಿಕ್‌, ಮೊದಲಿನಿಂದಲೂ ದೇವಿ ಆರಾಧನೆ ನನಗಿಷ್ಟ. ತಿಳಿವಳಿಕೆ ಬಂದಾಗಿನಿಂದ ದೇವಿಗೆ ಅಲಂಕಾರ ಮಾಡಿ ಪೂಜಿಸುತ್ತಿದ್ದೇನೆ. ಈ ಹಿಂದೆ ನಾನು ತೀರ್ಥ, ನವರಸ, ವಾರಣಾಸಿ ಎಂಬ ವಿಷಯಗಳನ್ನು ಆಧರಿಸಿ ತನ್ಮೂಲಕ ಅಂಬೆಯನ್ನು ಅನೇಕ ತತ್ವಗಳನ್ನು ತಿಳಿಯಲು ಪ್ರಯತ್ನಿಸಿದ್ದೇನೆ. ಕಳೆದ ವರ್ಷ ವಾರಣಾಸಿ ಕ್ಷೇತ್ರವನ್ನು ಆಧರಿಸಿ ಅಂಬೆಯನ್ನು ಅನೇಕ ಸ್ವರೂಪ ಹಾಗೂ ತತ್ವವನ್ನು ತಿಳಿದಿದ್ದೇವೆ. ಈ ವರ್ಷದ ಅದರ ಮುಂದುವರಿದ ಭಾಗವಾಗಿ ದೇವಿಗೆ ಅಲಂಕರ ಮಾಡುತ್ತಿದ್ದೇನೆ ಎಂದರು. ಈ ಸಂದರ್ಭದಲ್ಲಿ ಪ್ರೊ. ವಿಜಯಲಕ್ಷ್ಮೇ ಕಟ್ಟಿಮಠ, ವೀರಣ್ಣ ಯಳಲಿ ಇದ್ದರು.