ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಕಾರ್ತಿಕ ಮಾಸದ ಅಂಗವಾಗಿ 33 ದಿನಗಳ ಕಾಲ ಆಯೋಜಿಸಿರುವ ವಚನ ಕಾರ್ತಿಕ ಎಂಬ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಶ್ರೀಮಠದ ಮೂಲಕತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಚಾಲನೆ ನೀಡಲಾಯಿತು.ಮುಂಚೂಣಿಯಲ್ಲಿಲ್ಲದ ಸುಮಾರು 66 ವಚನಕಾರರ ವಚನಗಳು, ಅವರ ವ್ಯಕ್ತಿತ್ವ ಕುರಿತಾದ ಪಥದರ್ಶನ ಕಾರ್ಯಕ್ರಮದಲ್ಲಿ ಮೊದಲ ದಿನ ಶಿವಶರಣರಾದ ಹೊಡೆಹುಲ್ಲ ಬಂಕಣ್ಣ ಹಾಗೂ ಗೋರಕ್ಷ/ಗೋರಖನಾಥರ ಬಗೆಗೆ ವಿಷಯಾವಲೋಕನ ನಡೆಯಿತು.
ಹೊಡೆಹುಲ್ಲ ಬಂಕಣ್ಣ ಅವರ ಬಗ್ಗೆ ಮಾತನಾಡಿದ ಕಡ್ಲೆಗುದ್ದು ಶಾಲೆಯ ಶಿಕ್ಷಕ ಡಾ. ಮಹೇಶ್ ಕೆ.ಎನ್, ಬಂಕಣ್ಣ ಅವರು 12 ನೇ ಶತಮಾನದಲ್ಲಿ ಮಹಾಮನೆ ಮತ್ತು ಅನುಭವ ಮಂಟಪದಲ್ಲಿ ಹುಲ್ಲು ಮಾರುವ ಕಾಯಕ ಮಾಡಿಕೊಂಡಿದ್ದು ಚರ್ಚೆ ಸಂವಾದ ಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದರು. ಇವರ ವಚನಗಳು ಹೆಚ್ಚಾಗಿ ತತ್ವ ನಿರೂಪಣಾ ಶೈಲಿಯಲ್ಲಿದ್ದು, ನಾವು ಯಾವುದೇ ಕೆಲಸವನ್ನು ಮಾಡುವುದಿದ್ದರೆ ನಿಷ್ಠೆ, ಭಾವಶುದ್ಧಿ, ದೈವಸೇವೆಯೆಂದು ಮಾಡಿ ಫಲವನ್ನು ಪ್ರಸಾದವೆಂದು ಕಾಣುವವರೇ ನಿಜವಾದ ಶರಣನ ಸೇವೆ, ಕಾಯಕವೇ ಕಳಸ, ಕಾಯಕವೇ ಪೂಜೆ ಎಂದು ಪರಿಭಾವಿಸಿದ್ದರು ಎಂದು ಹೇಳಿದರು.ನಗರದ ಅಮೃತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ. ಸಜ್ಜನ್ ಅವರು ಗೋರಕ್ಷ/ಗೋರಖನಾಥ ಶರಣರ ಬಗ್ಗೆ ಮಾತನಾಡಿ, ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥಲಿಂಗ ಅಂಕಿತದಲ್ಲಿ 10 ವಚನಗಳು ಲಭ್ಯವಿದ್ದು, ಅಲ್ಲಮಪ್ರಭುಗಳ ಸಂದರ್ಶನಕ್ಕಿಂತ ಮುಂಚೆ ಯೋಗಸಿದ್ಧಿಯಿಂದ ದೇಹದ ಮೇಲೆ ಪ್ರಭುತ್ವ ಹೊಂದಿದ್ದರು. ಇವರು ಶ್ರೀಶೈಲದಲ್ಲಿದ್ದ ಬಗ್ಗೆ ಐತಿಹ್ಯವಿದೆ. ಅಲ್ಲಮರ ಸಂಗದಿಂದ ಅನುಭವ ಮಂಟಪಕ್ಕೆ ತೆರಳಿ ಶಿವಯೋಗಾನುಸಂಧಾನದಿಂದ ಆದ ಅನುಭವ ವಚನಗಳಲ್ಲಿ ಉಲ್ಲೇಖವಾಗಿದೆ ಎಂದರು.
ಮನುಷ್ಯ ಬಾಹ್ಯ ಜೀವನಕ್ಕೆ ಅಥವಾ ರೂಪಕ್ಕೆ ಅಂಟಿಕೊಳ್ಳದೆ ಮನಸ್ಸಿನ ಶುದ್ಧತೆ, ನೈಜತೆ, ಸತ್ಯಭಾವ ಮತ್ತು ಸೇವಾಭಾವ ಬೆಳೆಸಿಕೊಂಡರೆ ಅದು ನಾವು ಗುರುವಿಗೆ ಕೊಡುವ ನಿಜಗೌರವ. ಅದರಂತೆ ಗೋರಕ್ಷನಾಥರ ತತ್ವ ಪ್ರತಿಪಾದನೆಯ ಮೂಲದ್ರವ್ಯ ಅರಿವೇ ದೇವರು, ಅದುವೇ ಪೂಜೆ. ಅರಿವೇ ಸೇವೆ ಎನ್ನುವುದು ದಿಟವೆಂದು ಪ್ರತಿಪಾದಿಸಿದ್ದಾರೆಂದು ವಿಶ್ಲೇಷಿಸಿದರು.ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಬೃಹನ್ಮಠ ಹಾಗೂ ಎಸ್ ಜೆಎಂ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಮುರುಘಾಮಠ ಶೂನ್ಯಪೀಠ ಪರಂಪರೆಯ ಮಠವಾಗಿದ್ದು, ಶರಣಸಂಸ್ಕೃತಿ ಮತ್ತು ಬಸವತತ್ವ ಪ್ರತಿಪಾದನೆಯ ಮೇಲೆ ಅನುಷ್ಠಾನ ಅದರ ಪ್ರಸಾರ ಹಾಗೂ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ನಮಗೆ ಬಸವಣ್ಣ, ಅಲ್ಲಮರು, ಅಕ್ಕಮಹಾದೇವಿ, ಸಿದ್ಧರಾಮ ಹೀಗೆ ಮುಂಚೂಣಿಯಲ್ಲಿರುವ ಶರಣರಷ್ಟೇ ಗೊತ್ತು. ನೂರಾರು ಅಲಕ್ಷಿತ ಶೋಷಿತ ಸಮುದಾಯಗಳನ್ನು ಪ್ರತಿನಿಧಿಸುವ ವಚನಕಾರರು ಗೊತ್ತಿಲ್ಲ. ಅವರ ವ್ಯಕ್ತಿತ್ವ ಸಾಧನೆ ಮತ್ತು ಅವರ ರಚನೆಯ ವಚನಗಳನ್ನು ಅರ್ಥೈಸುವ ಕೆಲಸ ಆಗಬೇಕಿದೆ ಎಂದರು.ಬಸವಮುರುಘೇಂದ್ರ ಸ್ವಾಮೀಜಿ, ಯೋಗವನ ಬೆಟ್ಟದ ಬೆಂಗಳೂರು ಶಾಖೆಯ ಶಾಮಣ್ಣ, ಅಖಿಲಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಆರತಿ ಶಿವಮೂರ್ತಿ, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜಕಟ್ಟಿ, ಡಾ.ಪಿ.ಬಿ.ಭರತ್, ಹಿರಿಯ ನಾಗರಿಕರಾದ ಪ್ರೊ.ಬಿ.ಹೆಚ್ ಹರೀಶ್, ರುದ್ರಮುನಿ, ಆನಂದ್ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))