ಚಿತ್ರದುರ್ಗ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹಾಗೂ ನಿವೃತ್ತ ಪ್ರಾಂಶುಪಾಲ ಡಾ.ಕರಿಯಪ್ಪ ಮಾಳಿಗೆ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪ್ರಸ್ತುತ ಕಾಲಘಟ್ಟದ ವಿದ್ಯಾರ್ಥಿಗಳು ವರ್ತಮಾನವನ್ನು ಸರಿಯಾಗಿ ಬಳಸಿಕೊಂಡರೆ ತಮ್ಮ ಭವಿಷ್ಯವನ್ನು ಅತ್ಯುತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ. ಭವಿಷ್ಯದ ನಿರ್ಮಾಣಕ್ಕೆ ಭದ್ರವಾದ ಬುನಾದಿ ಎಂದರೆ ದೃಢವಾದ ಸಂಕಲ್ಪ ಮಾಡುವುದೇ ಆಗಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ. ಕರಿಯಪ್ಪ ಮಾಳಿಗೆ ಹೇಳಿದರು.ಚಿತ್ರದುರ್ಗ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ಅವರು ಪ್ರಾಚೀನ ಕಾಲಘಟ್ಟದಿಂದ ಮಧ್ಯಕಾಲೀನ ಸಂದರ್ಭದಲ್ಲೂ ಹೆಣ್ಣುಮಕ್ಕಳಿಗೆ ಶಿಕ್ಷಣ ಏಕೆ ಎಂಬ ಧೋರಣೆ ಇತ್ತು. ಆದರೆ, ಇಂದು ಅಂತಹ ನಿರ್ಬಂಧಗಳು ಕಡಿಮೆಯಾಗಿದ್ದು, ಉನ್ನತ ಶಿಕ್ಷಣಕ್ಕೆ ವ್ಯಾಪಕ ಸವಲತ್ತುಗಳು ಲಭ್ಯವಿವೆ ಎಂದರು.
ವಿದ್ಯಾರ್ಥಿನಿಯರು ಹೆಣ್ಣು ಎಂಬ ಕಾರಣಕ್ಕೆ ಯಾರಿಂದಲೂ ಅನುಕಂಪ ಬಯಸಬಾರದು. ನಿಮ್ಮಲ್ಲಿಯೇ ಅಪಾರವಾದ ಶಕ್ತಿ ಮತ್ತು ಸಾಮರ್ಥ್ಯವಿದೆ. ಅದನ್ನು ಸರಿಯಾಗಿ ಅರ್ಥೈಸಿಕೊಂಡರೆ ಪ್ರತಿಯೊಂದು ಅವಕಾಶವೂ ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿಧಾನಪರಿಷತ್ ಸದಸ್ಯದ ಕೆ.ಎಸ್ ನವೀನ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪುಸ್ತಕದ ಬದನೆಕಾಯಿಯಾಗದೇ ಸಮಾಜ ಹಾಗೂ ಸಾಮಾನ್ಯ ಜನರೊಂದಿಗೆ ನೇರ ಒಡನಾಟ ಇಟ್ಟುಕೊಳ್ಳಬೇಕು. ಆಗ ಮಾತ್ರ ಜೀವನದ ನಿಜವಾದ ಪಾಠವನ್ನು ಕಲಿಯಲು ಸಾಧ್ಯ ಎಂದರು.
ನನಗೂ ಇಬ್ಬರು ಹೆಣ್ಣುಮಕ್ಕಳಿದ್ದು, ಸಮಾಜದ ಕಷ್ಟ-ಸುಖಗಳನ್ನು ಹತ್ತಿರದಿಂದ ಕಂಡು ಕಲಿಯಲಿ ಎಂಬ ಉದ್ದೇಶದಿಂದ ಅವರನ್ನು ಇಂಟರ್ನ್‌ಶಿಪ್‌ಗೆ ಕಳುಹಿಸುತ್ತಿದ್ದೇನೆ. ವಿದ್ಯಾರ್ಥಿಗಳು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕಾರ್ಮಿಕರು ಹಾಗೂ ಕೃಷಿಕ ಸಮುದಾಯದವ ಜೊತೆಗೆ ಬೆರೆತು ಅವರ ಜೀವನ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚು ಶಿಕ್ಷಿತರಾಗುತ್ತಿರುವುದು ಸಂತಸದ ವಿಷಯವಾಗಿದ್ದು, ವಿದ್ಯಾರ್ಥಿನಿಯರು ತಮ್ಮಲ್ಲಿರುವ ಸಾಮಥ್ರ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಯಶಸ್ಸು ಸಾಧಿಸಬೇಕು ಎಂದು ಶಾಸಕ ಕೆ.ಎಸ್.ನವೀನ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಶಿವಣ್ಣ ಅವರು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿ ಜೀವನಕ್ಕೆ ಬಹಳ ಮುಖ್ಯ. ಅತಿಥಿಗಳ ಸ್ಪೂರ್ತಿದಾಯಕ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾವು ಓದುವ ಕಾಲದಲ್ಲಿ ಇಷ್ಟೊಂದು ಸವಲತ್ತುಗಳು ಇರಲಿಲ್ಲ, ಆದರೆ ಇಂದು ನಿಮಗೆ ಉತ್ತಮ ಅವಕಾಶಗಳಿವೆ. ನಮ್ಮ ಕಾಲೇಜಿಗೆ ಸ್ವಂತ ಕಟ್ಟಡದ ಸಮಸ್ಯೆ ಇದ್ದರೂ, ವಿದ್ಯಾರ್ಥಿಗಳ ಸಾಧನೆಗೆ ಮಾತ್ರ ಯಾವುದೇ ಕೊರತೆ ಇಲ್ಲ. ಬೇರೆ ಬೇರೆ ತಾಲೂಕು ಹಾಗೂ ಜಿಲ್ಲೆಗಳಿಂದ ವಿದ್ಯಾರ್ಥಿನಿಯರು ನಮ್ಮ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಆಗಮಿಸುತ್ತಿದ್ದಾರೆ ಎಂದರೆ ಇಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದೇ ಅರ್ಥ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ಜಯಲಕ್ಷ್ಮಮ್ಮ ಕೆ, ಡಾ. ಮಧುಸೂದನ ಪಿ ಎನ್, ಡಾ, ವಿಜಯಲಕ್ಷ್ಮಿ ಆರ್, ಡಾ, ಗಾಯಿತ್ರಮ್ಮ ಟಿ, ಸತೀಶ್ ಹಲಸಂದಿ, ಕನಕರಾಜ್, ಗಿರೀಶ್ ಎಂ. ಯೋಗಾನಂದ ಎಸ್.ಕೆ. ಶಿವಪ್ರಸಾದ್ ಆರ್, ಪತ್ರಾಂಕಿತ ವ್ಯವಸ್ಥಾಪಕರಾದ ವೆಂಕಟೇಶ್ ಆರ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಅಪಾರ ಸಂಖ್ಯೆಯ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.