ಸಾರಾಂಶ
ಹೂವಿನಹಡಗಲಿ: ಮನುಷ್ಯನ ಬದುಕಿಗೆ ಕೃಷಿ ಕ್ಷೇತ್ರ ಆಧಾರವಾಗಿದೆ. ಪ್ರತಿಯೊಬ್ಬರು ಜೀವಿಸಲು ಆಹಾರ ಧಾನ್ಯ ಬಹು ಮುಖ್ಯ ಪಾತ್ರ ವಹಿಸುತ್ತದೆ. ಇಂತಹ ವೃತ್ತಿಯಲ್ಲಿ ಸಾರ್ಥಕತೆ ಇದೆ ಎಂದು ಪ್ರಗತಿಪರ ಕೃಷಿಕ ಕೋಡಬಾಳ ಚನ್ನಬಸಪ್ಪ ಹೇಳಿದರು.ತಾಲೂಕಿನ ಹೊಳಲು ಗ್ರಾಮದ ಡಿವೈನ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಇಲ್ಲಿನ ಕಸಾಪ, ಹಿರೇಹಡಗಲಿ ಹೋಬಳಿ ಘಟಕ ಆಯೋಜಿಸಿದ್ದ, ಬೂದನೂರು ಚಂದ್ರೇಗೌಡ ಸ್ಮಾರಕದತ್ತಿ, ಪೂಜಾರ ಬಸವರಾಜಪ್ಪ ದೇವೇಂದ್ರಪ್ಪ ದತ್ತಿ, ಗಡ್ಡಿ ಸಾವಿತ್ರಮ್ಮ ಗಡ್ಡಿ ಬಸಪ್ಪ ಸ್ಮರಣಾರ್ಥ ದತ್ತಿ, ಭ್ರಮರಿಬಾಯಿ ಪಾರಸ್ ಮಲ್ ಮೆಹತಾ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತವು ಹೆಚ್ಚು ಕೃಷಿ ಭೂಮಿ ಹೊಂದಿರುವ ವಿಶ್ವದ 2ನೇ ದೇಶವಾಗಿದೆ. ಇಲ್ಲಿನ ಶೇ.50ಕ್ಕಿಂತ ಹೆಚ್ಚು ಜನ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಕೃಷಿಯು ದೇಶದ ಜಿಡಿಪಿಗೆ ಶೇ.17ರಿಂದ 18 ಕೊಡುಗೆ ನೀಡುತ್ತಿದೆ ಎಂದರು.ಮೆಕ್ಕೆಜೋಳ, ಭತ್ತ ಮತ್ತು ಕಬ್ಬಿನಿಂದ ಇಥೀನಾಲ್ ತಯಾರಿಕೆಗೆ ಮುಂದಾಗಿರುವುದು ಬೆಳೆಗಾರರಿಗೆ ಆಸರೆಯಾಗಿದೆ. ಕೃಷಿ ತಜ್ಞರು, ವಿಜ್ಞಾನಿಗಳು ತಮ್ಮ ಸಂಶೋಧನೆಯಿಂದ, ರೈತರ ಬದುಕು ಹಸನಾಗಲು ಶ್ರಮಿಸುತ್ತಿದ್ದಾರೆ ಎಂದರು.
ನಿವೃತ್ತ ಕೃಷಿ ಅಧಿಕಾರಿ ಟಿ.ಕೆ. ಬ್ಯಾಡಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹವಾಮಾನ ವೈಪರಿತ್ಯದಿಂದ ಕೃಷಿ ಕ್ಷೇತ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದೆ, ರೈತರು ಇದನ್ನು ಮೀರಿ ಉತ್ಪಾದನೆ ಹೆಚ್ಚಳ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದರು.ಕಸಾಪ ತಾಲೂಕು ಘಟಕದ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಶಾಲೆಯ ಆಡಳಿತಾಧಿಕಾರಿ ಎಸ್.ಪ್ರವೀಣ್ ಮಾತನಾಡಿದರು.
ಇದೇ ವೇಳೆ ಕವನ ವಾಚನ ಸ್ಪರ್ಧೆಯಲ್ಲಿ ವಿಜೇತರಾದ ದಿವ್ಯಾ ಪುರಾಣಿಕ ಮಠ, ಮಮತಾ ನಗಾವತ್, ಜಿ.ಬಿಂದು ಇವರಿಗೆ ಪುಸ್ತಕ ಬಹುಮಾನ ನೀಡಲಾಯಿತು.ಹಿರೇಹಡಗಲಿ ಹೋಬಳಿ ಘಟಕದ ಅಧ್ಯಕ್ಷ ಜಿ.ಎಸ್.ಸತೀಶ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯ ಗುರು ಬಸಯ್ಯ ಹಿರೇಮಠ ಸ್ವಾಗತಿಸಿದರು. ಶಿಕ್ಷಕಿ ಪಿ.ಸಲೀಮಾ ವಂದಿಸಿದರು. ವಿದ್ಯಾರ್ಥಿ ಎಲ್.ಯಶವಂತ್ ನಿರ್ವಹಿಸಿದರು.