ಪಟ್ಟಣದ ಹೊರವಲಯದಲ್ಲಿ ಬೈಪಾಸ್ ರಸ್ತೆ ಇದ್ದರೂ ಪಟ್ಟಣದಲ್ಲಿ ವಾಹನ ಸಂಖ್ಯೆ ಅಧಿಕವಾಗಿದೆ. ಆದ್ದರಿಂದ ಹೆಚ್ಚಿರುವ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆಗೆ ತಕ್ಕಂತೆ ರಸ್ತೆಗಳ ವಿಸ್ತರಣೆಯಾಗಲೇಬೇಕಿದೆ. ಆದ್ದರಿಂದ, ಕೊಲ್ಲಹಳ್ಳಿ ಗ್ರಾಮದಿಂದ ಆನೇಮಹಲ್ ಗ್ರಾಮದವರೆಗೆ ರಸ್ತೆ ವಿಸ್ತರಣೆಗೆ ಇರುವ ಸಾಧಕ ಬಾಧಕಗಳ ಬಗ್ಗೆ ಒಂದು ವಾರದಲ್ಲಿ ವರದಿ ಸಲ್ಲಿಸಬೇಕು.
ಕನ್ನಡಪ್ರಭವಾರ್ತೆ, ಸಕಲೇಶಪುರ
ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಹೇಳಿದರು.ಮಂಗಳವಾರ ಪಟ್ಟಣದ ತಜಸ್ವೀ ವೃತ್ತ, ಹಳೇಬಸ್ ನಿಲ್ದಾಣ ಹಾಗೂ ನಿರ್ಮಾಣ ಹಂತದಲ್ಲಿರುವ ಫುಡ್‌ಕೋರ್ಟ್ ವೀಕ್ಷಣೆ ನಡೆಸಿ ಮಾತನಾಡಿ, ಸಕಲೇಶಪುರ ಪಟ್ಟಣದಲ್ಲಿ ಈಗಿರುವ ಬಸ್‌ನಿಲ್ದಾಣ, ರಸ್ತೆಗಳು ಸೇರಿದಂತೆ ಎಲ್ಲ ತರಹದ ಮೂಲಭೂತ ಸೌಕರ್ಯಗಳು ಕಳೆದ ಎರಡು ದಶಕದ ಹಿಂದೆ ಪಟ್ಟಣದಲ್ಲಿ ೨೦ ರಿಂದ ೨೫ ಸಾವಿರ ಜನಸಂಖ್ಯೆ ಇದ್ದ ವೇಳೆ ನಿರ್ಮಾಣಗೊಂಡಂತಹವು. ಆದರೆ, ಇಂದು ಪಟ್ಟಣದಲ್ಲಿ ೪೦ ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು ಈ ಜನಸಂಖ್ಯೆಗೆ ತಕ್ಕಂತೆ ಮೂಲಭೂತ ಸೌಕರ್ಯಗಳ ನಿರ್ಮಾಣವಾಗಬೇಕಿದೆ. ಪಟ್ಟಣದ ಹೊರವಲಯದಲ್ಲಿ ಬೈಪಾಸ್ ರಸ್ತೆ ಇದ್ದರೂ ಪಟ್ಟಣದಲ್ಲಿ ವಾಹನ ಸಂಖ್ಯೆ ಅಧಿಕವಾಗಿದೆ. ಆದ್ದರಿಂದ ಹೆಚ್ಚಿರುವ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆಗೆ ತಕ್ಕಂತೆ ರಸ್ತೆಗಳ ವಿಸ್ತರಣೆಯಾಗಲೇಬೇಕಿದೆ. ಆದ್ದರಿಂದ, ಕೊಲ್ಲಹಳ್ಳಿ ಗ್ರಾಮದಿಂದ ಆನೇಮಹಲ್ ಗ್ರಾಮದವರೆಗೆ ರಸ್ತೆ ವಿಸ್ತರಣೆಗೆ ಇರುವ ಸಾಧಕ ಬಾಧಕಗಳ ಬಗ್ಗೆ ಒಂದು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ತಾಲೂಕು ಆಡಳಿತಕ್ಕೆ ಸೂಚನೆ ನೀಡಿದರು. ಅಲ್ಲದೆ ಹೆಚ್ಚಿನ ವಾಹನ ದಟ್ಟಣೆಯಿಂದ ಕೂಡಿರುವ ತೇಜಸ್ವಿ ವೃತ್ತವನ್ನು ಅಗಲೀಕರಣಗೊಳಿಸಿ ವೃತ್ತ, ಹೈಮಾಸ್ಟ್ ದೀಪ ಹಾಗೂ ಸೂಚನಾ ಫಲಕ ಆಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಇದಲ್ಲದೆ ಪಟ್ಟಣದ ಹಳೇ ಬಸ್ ನಿಲ್ದಾಣದ ಎದುರು ನಿರ್ಮಾಣ ಹಂತದಲ್ಲಿರುವ ಬಸ್ ತಂಗುದಾಣ ನಿರ್ಮಾಣದ ಬಗ್ಗೆ ದಾಖಲೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಪಟ್ಟಣದ ಎಸ್‌ಬಿಐ ವೃತ್ತದ ಬಳಿ ನಿರ್ಮಿಸಲು ಉದ್ದೇಶಿಸಿರುವ ಫುಡ್‌ಕೋರ್ಟ್ ಅವಾಸ್ತವಿಕವಾಗಿದ್ದು ಹೆಚ್ಚಿನ ವಾಹನ ದಟ್ಟಣೆಯಿಂದ ಕೂಡಿರುವ ಈ ಪ್ರದೇಶ ಹೊರತುಪಡಿಸಿ ಬೇರೆಡೆ ಫುಡ್‌ಕೋರ್ಟ್ ನಿರ್ಮಾಣಕ್ಕೆ ಜಾಗ ಗುರುತಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.ಈ ವೇಳೆ ಉಪವಿಭಾಗಾಧಿಕಾರಿ ಹಲ್ಲುಮನಿ ತಿಮ್ಮಣ್ಣ, ತಹಸೀಲ್ದಾರ್ ಸುಪ್ರೀತಾ, ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ ಸೇರಿದಂತೆ ಸಂಘಸಂಸ್ಥೆಯ ಮುಖಂಡರು ಉಪಸ್ಥಿತರಿದ್ದರು.