ನಗರ, ಗ್ರಾಮ ನೀರಿನ ಬವಣೆ ಅನುಭವಿಸದಂತೆ ಕ್ರಮ

| Published : Mar 23 2024, 01:09 AM IST

ಸಾರಾಂಶ

ಮುಂದಿನ ದಿನಗಳಲ್ಲಿ 168 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಅಂತಹ ಗ್ರಾಮಗಳಲ್ಲಿ ನೀರು ಪೂರೈಸಲು ಮುನ್ನೆಚ್ಚರಿಕೆಯಾಗಿ ಖಾಸಗಿ ಕೊಳೆವೆ ಬಾವಿಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ಪೂರೈಸಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ಗ್ರಾಮಾಂತರ ಮತ್ತು ನಗರ ಪ್ರದೇಶದ ಯಾವುದೇ ಗ್ರಾಮ, ವಾರ್ಡ್‌ಗಳಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಮೇವಿಧಿಕಾರಿ ಪಿ.ಎನ್ ರವೀಂದ್ರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆದು ಮಾತನಾಡಿ, ಪ್ರಸ್ತುತ ಗ್ರಾಮಾಂತರ ಪ್ರದೇಶದ 39 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ ಎಂದರು.

168 ಗ್ರಾಮಗಳಲ್ಲಿ ನೀರಿನ ಸಮಸ್ಯೆ

ಆ ಗ್ರಾಮಗಳಲ್ಲಿ ಖಾಸಗಿ ಕೊಳೆವೆ ಬಾವಿಗಳ ಮೂಲಕ ನೀರು ಒಪ್ಪಂದದ ಮೇರೆಗೆ ಪೂರೈಸಲಾಗುತ್ತಿದೆ. ಮುಂದೆ 168 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದಾಗಿದ್ದು, ಅಂತಹ ಗ್ರಾಮಗಳಲ್ಲಿ ನೀರು ಪೂರೈಸಲು ಮುನ್ನೆಚ್ಚರಿಕೆಯಾಗಿ ಖಾಸಗಿ ಕೊಳೆವೆ ಬಾವಿಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ಸಿದ್ಧರಿರಬೇಕು ಎಂದರು.

ನಗರ ಪ್ರದೇಶಗಳ 6 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 17 ಖಾಸಗಿ ಕೊಳವೆ ಬಾವಿಗಳ ಮೂಲಕ 29 ವಾರ್ಡಗಳಲ್ಲಿ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳ 24 ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದ್ದು, ಪರಿಹಾರ ಕ್ರಮವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಲಹೆ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.

ಮೇವಿನ ದಾಸ್ತಾನು ಲಭ್ಯ

ಜಿಲ್ಲೆಯಲ್ಲಿನ ಜಾನುವಾರುಗಳಿಗೆ 20ವಾರಗಳಿಗೆ ಆಗುವಷ್ಟು ಮೇವಿನ ದಾಸ್ತಾನು ಲಭ್ಯವಿದೆ. ಜೊತೆಗೆ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಮೇವು ನಿಧಿಯನ್ನು ಸ್ಥಾಪಿಸಲು ಕ್ರಮವಹಿಸಬೇಕು. ಜಿಲ್ಲೆಯಲ್ಲಿ ಕಳೆದ ವರ್ಷ ತೀವ್ರತರದ ಮಳೆಯ ಕೊರತೆಯಿಂದ ಜಿಲ್ಲೆಯಾದ್ಯಂತ ಬರದ ಸಂಕಷ್ಟದ ಪರಿಸ್ಥಿತಿಗೆ ಜನರು ಸಿಲುಕಿದ್ದಾರೆ. ಅವರು ಗುಳೆ ಹೋಗದಂತೆ ಕ್ರಮ ಕೈಗೊಳ್ಳಬೇಕು. ಅವರಿಗೆ ಅಗತ್ಯವಿರುವ ಮೂಲ ಅಗತ್ಯಗಳನ್ನು ಒದಗಿಸಲು ಅಧಿಕಾರಿಗಳು ನೆರವಾಗಬೇಕು. ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಂಡು ಜನರ ಸಂಕಷ್ಟವನ್ನು ಕಡಿಮೆ ಮಾಡಲು ಕೆಲಸ ಮಾಡಲು ಸೂಚಿಸಿದರು.ಕೆರೆಗಳಿಂದ ನೀರೆತ್ತುವಂತಿಲ್ಲ

ಜಿಲ್ಲೆಯಲ್ಲಿನ ಯಾವುದೇ ಕೆರೆಗಳಿಂದ ಯಾವುದೇ ವ್ಯಕ್ತಿ ಯಾವುದೇ ಉದ್ದೇಶಕ್ಕೆ ನೀರನ್ನು ಪಂಪ್ ಸೆಟ್ ಮೂಲಕ ಸೆಳೆದು ತೆಗೆದುಕೊಂಡು ಹೋಗುವಂತಿಲ್ಲ ಅಂತಹ ಪ್ರಕರಣಗಳು ಕಂಡು ಬಂದರೆ ಕಾನೂನು ಕ್ರಮ ವಹಿಸಬೇಕು ಈ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.ಬಿಸಿಲಿನಿಂದ ರಕ್ಷಿಸಿಕೊಳ್ಳಿ

ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಶಾಖದ ಹೊಡೆತ (ಹೀಟ್ ವೇವ್ ಸ್ಟ್ರೋಕ್) ದಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸಾರ್ವಜನಿಕರಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ತಿಳಿಸಿದರು.ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ

ಸಾರ್ವಜನಿಕರು ಬಿಸಿಲು ದಿನಗಳಲ್ಲಿ ಛತ್ರಿ, ಟೋಪಿ, ಟವಲ್ ಬಳಸಿರಿ ಹಾಗೂ ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಉಳಿಯಲು ಪ್ರಯತ್ನಿಸಿ. ತೆಳುವಾದ ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸಿ. ಆದಷ್ಟು ಬಿಳಿ ಬಣ್ಣದ ಬಟ್ಟೆಗಳ ಬಳಕೆ ಒಳ್ಳೆಯದು. ಹತ್ತಿಯ ಅಥವಾ ಟರ್ಬನ್ ಟೋಪಿ ಹಾಗೂ ಕೂಲಿಂಗ್ ಗ್ಲಾಸ್ ಧರಿಸಿರಿ, ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಹೆಚ್ಚು ನೀರು ಕುಡಿಯಲು ಕೊಡಬೇಕು ಎಂದು ಸಲಹೆಗಳನ್ನು ನೀಡಿದರು. ಸಭೆಯಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಅಪರ ಡೀಸಿ ಡಾ.ಎನ್. ತಿಪ್ಪೇಸ್ವಾಮಿ, ಜಿಪಂ ಉಪಕಾರ್ಯದರ್ಶಿ ಡಾ. ಭಾಸ್ಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.