ಸಾರಾಂಶ
ಕನಕಪುರ: ಉಪಮುಖ್ಯಮಂತ್ರಿಗಳು ಹಾಗೂ ಮಾಜಿ ಸಂಸದರ ಬಳಿ ಚರ್ಚೆ ಮಾಡಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಳ್ಳಿಮಾರನಹಳ್ಳಿ ಗ್ರಾಪಂ ಸದಸ್ಯರು ಒಕ್ಕಲೂರಿನಿಂದ ತೀರ್ಮಾನಿಸಿದರು.
ತಾಲೂಕಿನ ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಹಾಗೂ ಸದಸ್ಯರು ಚರ್ಚಿಸಿ, ಕಳೆದ ವರ್ಷದಂತೆ ಸಮಸ್ಯೆಯಾಗದಿರಲು ಈಗಿನಿಂದಲೇ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಬೇಸಿಗೆಯಲ್ಲಿ ಗ್ರಾಮೀಣರು ಕುಡಿಯುವ ನೀರಿಗೆ ಪರಿತಪಿಸಬಾರದು ಎಂದು ತಿಳಿಸಿದರು.ಬೇಸಿಗೆ ಆರಂಭಕ್ಕೂ ಮೊದಲೇ ಕೆಲವು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಎಲ್ಲಾ ಸದಸ್ಯರು ಪಕ್ಷಾತೀತವಾಗಿ ಉಪಮುಖ್ಯಮಂತ್ರಿ, ಹಾಲಿ ಸಂಸದರು, ಮಾಜಿ ಸಂಸದರ ಬಳಿ ಚರ್ಚಿಸಿ ಕೊಳವೆ ಬಾವಿಗಳನ್ನು ತೆಗೆದು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸರ್ವ ಸದಸ್ಯರು ತೀರ್ಮಾನಿಸಿದರು.
ಅಧ್ಯಕ್ಷೆ ಗೌರಮ್ಮ ಮಾತನಾಡಿ, ಕೆಲವು ಗ್ರಾಮಗಳಲ್ಲಿ ನೀರು ಪೋಲು ಮಾಡದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಕಸ ಸಂಗ್ರಹ ವಾಹನದ ಧ್ವನಿವರ್ಧಕದ ಮೂಲಕ ನೀರಿನ ಮಿತ ಬಳಕೆ ಬಗ್ಗೆ ಅರಿವು ಮೂಡಿಸಬೇಕು. ಈಗಾಗಲೇ ನೀರಿನ ಅಭಾವ ಎದುರಿಸಿದ್ದೇವೆ ಮುಂದಿನ ದಿನಗಳಲ್ಲಿ ಆ ಸಮಸ್ಯೆ ಬರದಂತೆ ಪ್ರತಿಯೊಬ್ಬರು ಜಾಗ್ರತೆ ವಹಿಸಬೇಕು ಎಂದು ಹೇಳಿದರು.ಭೋವಿ ಕಾಲೋನಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ತ್ಯಾಜ್ಯನೀರು ಹರಿಯಲು ಸಮಸ್ಯೆಯಾಗಿದೆ. ಪಕ್ಕದಲ್ಲಿ ದೇವಾಲಯವಿದೆ ಸ್ಥಳೀಯರು ಚರಂಡಿ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಡುವುದಾಗಿ ಹೇಳಿದ್ದಾರೆ. ಅಲ್ಲಿ ಚರಂಡಿ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದು ಹೇಳಿದರು.
ಸದಸ್ಯರಾದ ಮುದ್ದುರಾಮೇಗೌಡ, ದೀಲಿಪ್, ದೇವರಾಜು, ಲೋಹಿತ್ ಮಾತನಾಡಿ, ಗ್ರಾಮಗಳಲ್ಲಿ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಸ್ವಚ್ಛತೆ ಇಲ್ಲದೆ ಸಾಂಕ್ರಾಮಿಕ ರೋಗ ಹರಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಗ್ರಾಮಗಳಲ್ಲಿ ಚರಂಡಿಗಳ ಹೂಳೆತ್ತಿ ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.ಪ್ರಭಾರ ಅಭಿವೃದ್ಧಿ ಅಧಿಕಾರಿ ಸಿ.ವಿ.ಕೃಷ್ಣ ಮಾತನಾಡಿ, ಅಗತ್ಯವಿರುವ ಗ್ರಾಮಗಳಲ್ಲಿ ಚರಂಡಿಗಳ ಹೂಳೆತ್ತಲು ಕ್ರಮ ಕೈಗೊಳ್ಳಲಾಗುವುದು. ಕಳೆದ ಡಿಸೆಂಬರ್ ಮತ್ತು ಜನವರಿಯಲ್ಲಿ ತೆರಿಗೆ ಸಂಗ್ರಹ ಆಂದೋಲನ ನಡೆಸಿ ಸಿಬ್ಬಂದಿಗೆ ನಾಲ್ಕು ತಿಂಗಳಿಂದ ಬಾಕಿ ಇದ್ದ ವೇತನ ಪಾವತಿ ಮಾಡಿದ್ದೇವೆ ಎಂದು ಸಭೆಗೆ ಮಾಹಿತಿ ನೀಡಿದರು.
ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಕಸ ಸಂಗ್ರಹ ಮಾಡಲು ವಾಹನದ ವ್ಯವಸ್ಥೆ ಮಾಡಿ ಚಾಲಕರನ್ನು ನೇಮಕ ಮಾಡಿದ್ದೇವೆ. ಆದರೆ ಸಾರ್ವಜನಿಕರು ಕಸ ಸಂಗ್ರಹ ವಾಹನಕ್ಕೆ ಕಸ ಹಾಕದೆ, ಸಾರ್ವಜನಿಕ ಸ್ಥಳಗಳಲ್ಲಿ ಹಾಕಿ ಜವಾಬ್ದಾರಿ ಇಲ್ಲದೆ ವರ್ತಿಸುತ್ತಿದ್ದಾರೆ. ಇದರಿಂದ ಪ್ಲಾಸ್ಟಿಕ್ ಹಾಗೂ ಇನ್ನಿತರೆ ತ್ಯಾಜ್ಯ ಚರಂಡಿ ಸೇರಿ ತ್ಯಾಜ್ಯ ನೀರು ಸರಾಗವಾಗಿ ಹರಿಯಲು ಸಮಸ್ಯೆಯಾಗುತ್ತಿದೆ. ಸಾರ್ವಜನಿಕರು ಸ್ವಚ್ಛತೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಮಂಜು ಕಿರಣ್, ಸುಧಾರಾಣಿ, ಲಕ್ಷ್ಮೀಬಾಯಿ, ಯಲ್ಲಮ್ಮ, ರಾಜೀವ್ ಗಾಂಧಿ ನಾಯಕ್ ಇತರರು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 03:ಕನಕಪುರ ತಾಲೂಕಿನ ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಪ್ರಭಾರ ಅಭಿವೃದ್ಧಿ ಅಧಿಕಾರಿ ಸಿ.ವಿ.ಕೃಷ್ಣ, ಸದಸ್ಯರಾದ ಮುದ್ದುರಾಮೇಗೌಡ, ದೀಲಿಪ್, ದೇವರಾಜು, ಲೋಹಿತ್ ಇತರರು ಪಾಲ್ಗೊಂಡಿದ್ದರು.