ಸಾರಾಂಶ
ಗಿರಿಗೆ ವಾಹನಗಳ ದಟ್ಟಣೆ ತಡೆಯುವ ಸಲುವಾಗಿ ಎರಡು ಸ್ಲಾಟ್ ವ್ಯವಸ್ಥೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಾರಾಂತ್ಯದಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ಜಿಲ್ಲಾಡಳಿತದಿಂದ ಕ್ರಮ ಕೈಗೊಂಡು ಎರಡು ಸ್ಲಾಟ್‌ಗಳಲ್ಲಿ ಪ್ರತೀ ದಿನ ಮುಳ್ಳಯ್ಯನಗಿರಿ ಭಾಗಕ್ಕೆ ವಾಹನಗಳನ್ನು ಬಿಡಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಹೇಳಿದ್ದಾರೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಿರಿಗೆ ವಾಹನಗಳ ದಟ್ಟಣೆ ತಡೆಯುವ ಸಲುವಾಗಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ರವರೆಗೆ 600 ವಾಹನಗಳನ್ನು ಹಾಗೂ ಮಧ್ಯಾಹ್ನ 1 ಗಂಟೆಯಿಂದ ಸಂಜೆ 6 ಗಂಟೆವರೆಗೆ 600 ವಾಹನಗಳನ್ನು ಎರಡು ಸ್ಲಾಟ್‌ಗಳಲ್ಲಿ ಬಿಡಲಾಗುವುದು ಎಂದು ಹೇಳಿದರು.
ಮಧ್ಯಾಹ್ನ ಬಿಡುವು ನೀಡಲಾಗುವ ಒಂದು ಗಂಟೆ ಅವಧಿಯಲ್ಲಿ ಮೇಲೆ ತೆರಳುವ ವಾಹನಗಳು ಮರಳಿ ಬರಲು ಅವಕಾಶ ಕಲ್ಪಿಸಲಾಗುವುದು. ಮುಳ್ಳಯ್ಯನಗಿರಿಗೆ ತೆರಳುವ ಪ್ರವಾಸಿಗರಿಗೆ ಸೀತಾಳಯ್ಯನಗಿರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲಿಸಿ ಪ್ರವಾಸಿಗರು ಚಾರಣ ಮುಖಾಂತರ, ಇಲಾಖೆಯಿಂದ ಅನುಮತಿಸಿದ ಜೀಪುಗಳು ಇಲಾಖೆಯಿಂದ ನಿಯೋಜಿಸಲಾದ ಟಿ.ಟಿ. ಹಾಗೂ ತೂಫಾನ್ ವಾಹನಗಳಿಗೆ ಅವಕಾಶ ನೀಡಲಾಗುವುದು ಎಂದರು.ವಾಹನಗಳಿಗೆ ಮುಂಗಡ ಬುಕ್ಕಿಂಗ್ ವ್ಯವಸ್ಥೆಯೂ ಇರಲಿದೆ. ರೆಡ್ ಅಲರ್ಟ್ ಸಂದರ್ಭ ಹಾಗೂ ಪೊಲೀಸರಿಂದ ಸೂಚನೆ ಗಳೇನಾದರೂ ಇದ್ದಲ್ಲಿ ಅಥವಾ ಸ್ಥಳೀಯವಾಗಿ ಸೀತಾಳಯ್ಯನಗಿರಿ ಇಲ್ಲವೇ ಐಡಿ ಪೀಠದ ಜಾತ್ರೆಯ ಸಂದರ್ಭಗಲ್ಲಿ ಪ್ರವಾಸಿ ಗರಿಗೆ ಬುಕ್ಕಿಂಗ್ ಅವಕಾಶ ಇರುವುದಿಲ್ಲ. ಜಾತ್ರೆ ಸಂದರ್ಭದಲ್ಲಿ ಉಚಿತವಾಗಿ ಭಕ್ತರು ಹಾಗೂ ಸ್ಥಳೀಯರಿಗೆ ತೆರಳಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು. ಕಳೆದ ಆರು ತಿಂಗಳಿನಿಂದ ಎರಡೂವರೆ ಲಕ್ಷದಷ್ಟು ವಾಹನಗಳ ಸಂಚಾರ ಗಿರಿ ಮಾರ್ಗದಲ್ಲಿ ಕಂಡು ಬಂದಿದೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಸಮಯವಾದ್ದರಿಂದ ವಾಹನಗಳ ಸಂಖ್ಯೆ ಕಡಿಮೆಯಿತ್ತು. ಸುದೀರ್ಘ ವಾರಾಂತ್ಯದ ಸಮಯದಲ್ಲಿ ಟಿಟಿ ವಾಹನಗಳು, ಮಿನಿ ಬಸ್‌ಗಳ ದಟ್ಟಣೆ ಹೆಚ್ಚುತ್ತಿದೆ. ಗಿರಿ ರಸ್ತೆ ಅತ್ಯಂತ ಕಿರು ಮಾರ್ಗವಾಗಿರುವುದರಿಂದ ಸಮಸ್ಯೆಯಾಗುತ್ತಿದೆ. ಭೂಗರ್ಭ ಶಾಸ್ತ್ರಜ್ಞರು ಇತ್ತೀಚೆಗೆ ಆಗಮಿಸಿ ಗಿರಿಭಾಗ ವೀಕ್ಷಿಸಿದ ವೇಳೆ ಭೂಕುಸಿತದ ಬಗ್ಗೆ ಮಾಹಿತಿ ನೀಡಲಾಗಿತ್ತು. ಈ ಮಾರ್ಗದಲ್ಲಿ ಹೆಚ್ಚು ವಾಹನಗಳ ಸಂಚಾರ ಸೂಕ್ತವಲ್ಲ. ಇದು ಭೂಕುಸಿತ ಹೆಚ್ಚಾಗಬಹುದು ಎಂದು ವರದಿ ನೀಡಿದ್ದರು ಎಂದು ಹೇಳಿದರು. ಮಾರ್ಚ್‌ನಲ್ಲಿ ಮಳೆ ಪ್ರಾರಂಭವಾದಾಗ ಅಲ್ಲಲ್ಲಿ ಸಣ್ಣ ಮಟ್ಟದ ಭೂಕುಸಿತ ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಮೂರು ಭಾಗವಾಗಿ ವಾಹನಗಳ ದಟ್ಟಣೆ ನಿಯಂತ್ರಿಸಬೇಕು ಎಂದು ಜಿಲ್ಲಾಮಟ್ಟದ ಸಮಿತಿಯಲ್ಲಿ ಸದಸ್ಯರ ತೀರ್ಮಾನದಂತೆ ಕ್ರಮ ಕೈಗೊಳ್ಳ ಲಾಗುವುದು. ಕೈಮರ ಚೆಕ್‌ಪೋಸ್ಟ್ ಅನ್ನು ಎನ್‌ಎಂಡಿಸಿ ಸರ್ಕಲ್‌ಗೆ ಬದಲಾವಣೆ ಮಾಡಲಾಗುತ್ತಿದೆ. ಈ ಹಿಂದೆ ಇದ್ದ ಕೈಮರ ಚೆಕ್‌ಪೋಸ್ಟ್ ಅನ್ನು ಪೊಲೀಸ್ ಚೌಕಿಯನ್ನಾಗಿ ಮಾಡಲಾಗುವುದು. ಒಂದು ವೇಳೆ ಹೆಚ್ಚಿನ ಪ್ರವಾಸಿಗರು ಬಂದಲ್ಲಿ ತರೀಕೆರೆ ರಸ್ತೆಯ ಮೂಲಕ ಇತರೆ ಪ್ರವಾಸಿ ತಾಣಗಳಿಗೆ ತೆರಳಲು ಅನುವು ಮಾಡಿಕೊಡಲಾಗುವುದು. ಎನ್‌ಎಂಡಿಸಿ ಸರ್ಕಲ್ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಸರ್ಕಲ್ ಆಗಲಿದೆ ಎಂದರು. ಈಗಾಗಲೇ ಗಿರಿ ರಸ್ತೆ ಅಗಲೀಕರಣ ಮಾಡಲಾಗಿದ್ದರೂ ಮಳೆ ಹಿನ್ನೆಲೆಯಲ್ಲಿ ಡಾಂಬರೀಕರಣ ಸಾಧ್ಯವಾಗಿಲ್ಲ. ಹೀಗಿದ್ದರೂ ಲೋಕೋಪಯೋಗಿ ಇಲಾಖೆಯಿಂದ ಅಂದಾಜು ಪಟ್ಟಿ ಪಡೆದು ಒಂದು ವೇಳೆ 15-20 ದಿನಗಳ ಕಾಲ ವಾತಾವರಣ ತಿಳಿ ಯಾದಲ್ಲಿ ಡಾಂಬರು ಹಾಕಲಾಗುವುದು ಎಂದು ತಿಳಿಸಿದರು. ಸೀತಾಳಯ್ಯನ ಗಿರಿಯಲ್ಲಿ ಶೌಚಾಲಯವನ್ನು ಸಂಪೂರ್ಣ ನವೀಕರಣ ಮಾಡಲಾಗುವುದು. ಸೀತಾಳಯ್ಯನಗಿರಿ ಹಾಗೂ ಮುಳ್ಳಯ್ಯನಗಿರಿ ಭಾಗದಲ್ಲಿ ಹಿಂದೆ ಗ್ರಾಪಂನಿಂದ 35 ಅಂಗಡಿಗಳಿಗೆ ಲೈಸೆನ್ಸ್ ನೀಡಲಾಗಿತ್ತು. ಅವುಗಳನ್ನು ಗಮನ ದಲ್ಲಿಟ್ಟುಕೊಂಡು ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಗೆ ಬಂದಿರುವ ಅನುದಾನ ಆಧರಿಸಿ ಸ್ಥಳದಲ್ಲಿ ಫುಡ್‌ಕೋರ್ಟ್ ಮಾದರಿ ಯಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು. ಸ್ಥಳೀಯರಿಗೆ ಅನುಕೂಲವಾಗುವಂತೆ ನಿಗದಿಪಡಿಸಿದ ದಾಖಲಾತಿಗಳನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಿ ಪಾಸ್ ಪಡೆಯುವುದು ಅಗತ್ಯ. ಹಾಗಿದ್ದಾಗ ಈ ಮಾರ್ಗದಲ್ಲಿ ಸಂಚರಿಸಲು ಸ್ಥಳೀಯರಿಗೆ ಸಮಸ್ಯೆಯಾಗದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಆರ್.ಲೋಹಿತ್ ಉಪಸ್ಥಿತರಿದ್ದರು.16 ಕೆಸಿಕೆಎಂ 4ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಡಿಸಿ ಮೀನಾ ನಾಗರಾಜ್ ಅವರು ಮಾತನಾಡಿದರು. ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಓ ಕೀರ್ತನಾ ಇದ್ದರು.