ಸಾರಾಂಶ
ಮೈಕ್ರೋ ಫೈನಾನ್ಸ್‌ನ ನಿಯಂತ್ರಣಕ್ಕೆ ಮುಖ್ಯಮಂತ್ರಿ 10 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ ಸುಗ್ರೀವಾಜ್ಞೆ ಹೊರಡಿಸಲಿದ್ದಾರೆ. ಮೈಕ್ರೋ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಹಾವೇರಿ : ಮೈಕ್ರೋ ಫೈನಾನ್ಸ್‌ನ ನಿಯಂತ್ರಣಕ್ಕೆ ಮುಖ್ಯಮಂತ್ರಿ 10 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ ಸುಗ್ರೀವಾಜ್ಞೆ ಹೊರಡಿಸಲಿದ್ದಾರೆ. ಮೈಕ್ರೋ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮೈಕ್ರೋ ಫೈನಾನ್ಸ್ ಹಾವಳಿ ತಡೆಗೆ ಮುಖ್ಯಮಂತ್ರಿ ಚಿಂತನೆ ಮಾಡಿದ್ದು, ಮಾರ್ಗಸೂಚಿ ಅನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಆರ್‌ಬಿಐನಿಂದಲೇ ಮೈಕ್ರೋ ಫೈನಾನ್ಸ್‌ಗಳ ನಿರ್ವಹಣೆಯಾಗಬೇಕು. ಆದರೆ ಸಿಬ್ಬಂದಿ ಕೊರತೆ ಕಾರಣ ಇಂತಹ ಪ್ರಕರಣಗಳು ಕಂಡು ಬರುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಜಿಲ್ಲೆಯಲ್ಲೂ ಮೈಕ್ರೋ ಫೈನಾನ್ಸ್‌ಗಳಿಂದ ಒತ್ತಾಯಪೂರ್ವಕವಾಗಿ ಸಾಲ ವಸೂಲಾತಿ ನಡೆದಿರುವುದು ಗಮನಕ್ಕೆ ಬಂದಿದೆ. ಇಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಇತ್ತೀಚೆಗೆ ಯಲ್ಲಾಪುರ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸವಣೂರು ತರಕಾರಿ ವ್ಯಾಪಾರಸ್ಥರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ₹3 ಲಕ್ಷ ಹಾಗೂ ಕೇಂದ್ರದಿಂದ ₹2 ಲಕ್ಷ ಸೇರಿ ₹5 ಲಕ್ಷ ಪರಿಹಾರ ನೀಡಲಾಗಿದೆ. ಮೃತರ ಮನೆಗೆ ಭೇಟಿ ನೀಡಲಾಗಿದ್ದು, ಕುಟುಂಬ ಪರಿಸ್ಥಿತಿ ಗಂಭೀರವಾಗಿದೆ. ನಾನು ಹಾಗೂ ಶಾಸಕರು ಸೇರಿ ₹1 ಲಕ್ಷ ವೈಯಕ್ತಿವಾಗಿ ಸಹಾಯಧನ ನೀಡಲಾಗುವುದು. ಹುಬ್ಬಳ್ಳಿ ಕಿಮ್ಸ್‌ಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ 13 ಜನರ ಆರೋಗ್ಯ ವಿಚಾರಿಸಲಾಗಿದ್ದು, ಯಾರಿಗೂ ಅಂಗವಿಕಲತೆ ಉಂಟಾಗಿಲ್ಲ. ಆದರೆ ಇನ್ನೊಂದುವರೆ ತಿಂಗಳು ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ತಿಳಿಸಿದರು.
ಪಡಿತರ ವಿತರಣೆಗೆ ಬಳಸುವ ಜೋಳ ಕಳಪೆಯಾಗಿದೆ ಎಂದು ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಕುರಿತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ಮಾಡಲಾಗಿದೆ. 2019ರಿಂದ ಹಿಂಗಾರು ಜೋಳ ಖರೀದಿಸಲಾಗುತ್ತಿದೆ. ಈ ಕುರಿತು ಮೊದಲು ಧ್ವನಿ ಎತ್ತಿದ್ದೇ ನಾನು. ಮುಂದಿನ ದಿನಗಳಲ್ಲಿ ಉತ್ತಮ ಜೋಳದ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಎಪಿಎಂಸಿಗಳ ಅಭಿವೃದ್ಧಿ: ಮೊದಲು ಎಪಿಎಂಸಿಗಳ ಅಭಿವೃದ್ಧಿಗೆ ಅನುದಾನದ ಕೊರತೆ ಇತ್ತು. ಈಗ ಹಾಗಿಲ್ಲ, ₹450 ಕೋಟಿ ಆದಾಯದ ನಿರೀಕ್ಷೆ ಇತ್ತು, ಈ ವರೆಗೆ ₹360 ಕೋಟಿ ಸಾಧನೆ ಮಾಡಲಾಗಿದೆ. ಈ ಹಣದಲ್ಲಿ ಮೂಲಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ನಾಯಿ ಕಡಿತ ಹಾವಳಿ, ನದಿಗೆ ಕಲುಷಿತ ನೀರು, ಅಂಗನವಾಡಿ ಅನುದಾನ ಅವ್ಯವಹಾರ ಕುರಿತು ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಉಪಸ್ಥಿತರಿದ್ದರು.