ಜಿಲ್ಲೆಯ ಗಣೇಕಲ್ ಸಮತೋಲನ ಜಲಾಶಯವನ್ನು ತುಂಬಿಸಲು ಅ.25ರ ಬೆಳಗ್ಗೆ 8ರಿಂದ ನ.4ರ ಬೆಳಗ್ಗೆ 8ರವರೆಗೆ ಸರತಿ ಪ್ರಕಾರ 3 ದಿನಗಳಿಗೆ ದೊಡ್ಡ ವಿತರಣಾ ಕಾಲುವೆಗಳನ್ನು ಅರ್ಧದಷ್ಟು ಬಂದ್ ಮಾಡಿ ಉಳಿದ ವಿತರಣಾ ಕಾಲುವೆಗಳನ್ನು ಸಂಪೂರ್ಣ ಬಂದ್ ಮಾಡಿ ಕೆರೆ ತುಂಬಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆಯ ಗಣೇಕಲ್ ಸಮತೋಲನ ಜಲಾಶಯವನ್ನು ತುಂಬಿಸಲು ಅ.25ರ ಬೆಳಗ್ಗೆ 8ರಿಂದ ನ.4ರ ಬೆಳಗ್ಗೆ 8ರವರೆಗೆ ಸರತಿ ಪ್ರಕಾರ 3 ದಿನಗಳಿಗೆ ದೊಡ್ಡ ವಿತರಣಾ ಕಾಲುವೆಗಳನ್ನು ಅರ್ಧದಷ್ಟು ಬಂದ್ ಮಾಡಿ ಉಳಿದ ವಿತರಣಾ ಕಾಲುವೆಗಳನ್ನು ಸಂಪೂರ್ಣ ಬಂದ್ ಮಾಡಿ ಕೆರೆ ತುಂಬಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ತಿಳಿಸಿದರು.ಸ್ಥಳೀಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದಲ್ಲಿರುವ ಪ್ರಸ್ತುತ ನೀರಿನ ಲಭ್ಯತೆಗೆ ಅನುಗುಣವಾಗಿ ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಯ ಮೈಲ್ 108ರಲ್ಲಿ ಇರುವ ಕೆರೆಗಳನ್ನು ತುಂಬಿಸಲು ಪ್ರತಿ ವಿಭಾಗದಲ್ಲಿ ಸುಮಾರು 200 ಕ್ಯೂಸೆಕ್ಸ್ ನೀರನ್ನು ಹೆಚ್ಚಿಸಿ ಗಣೇಕಲ್ ಕೆರೆಗೆ ನೀರು ತುಂಬಿಸಲಾಗುತ್ತದೆ. ಗಣೇಕಲ್ಲು ಭಾಗದಲ್ಲಿ ರೈತರಿಗೆ ನೀರಾವರಿಗೆ ಒಂದು ರೊಟೇಶನ್ ನೀರು ಕೊಡಲಾಗುತ್ತದೆ. ಕುಡಿಯುವ ನೀರಿನ ಎಲ್ಲಾ ಕೆರೆಗಳನ್ನು ತುಂಬಿಸಿದರೆ ಕೊನೆಗೆ ಸುಮಾರು 15 ರಿಂದ 16 ಅಡಿ ನೀರು ಉಳಿಯಲಿದ್ದು, ಅದನ್ನು ಮುಂದಿನ ಡಿಸೆಂಬರ್ನಲ್ಲಿ ಕುಡಿಯುವ ನೀರು ನೀಡಲು ಸಾಲುತ್ತದೆ ಎಂದರು.
ಜಿಲ್ಲೆಯ ಗಣೇಕಲ್ ಕೆರೆ ತುಂಬಿದ ಮೇಲೆ ಸಿಂಧನೂರು, ಮಸ್ಕಿ, ಮಾನ್ವಿ ಹಾಗೂ ಅರಕೆರೆ ಭಾಗದ ಕುಡಿಯುವ ನೀರಿನ ಕೆರೆಗಳನ್ನು ಗರಿಷ್ಠ 13 ರಿಂದ 14 ಅಡಿಯೊಳಗೆ ತುಂಬಿಸಿಕೊಳ್ಳಬೇಕಾಗುತ್ತದೆ. ಕಡೆ 5-6 ದಿನಗಳು ಇರಿಗೆಷನ್ಗೆ ಬರುವ ನೀರನ್ನು ಮಧ್ಯದಲ್ಲೂ ನೀರು ತೆಗೆದುಕೊಳ್ಳುತ್ತಿರುವವರ ಕ್ಯೂಸೆಕ್ಸ್ ಕಡಿಮೆ ಮಾಡಿ ಸಮರ್ಪಕವಾಗಿ ಹಂಚಲಾಗುತ್ತದೆ ಎಂದರು.ಮುಂಚೆ 4,200-100 ಕ್ಯೂಸೆಕ್ಸ್ ಮೇಲಿಂದ ಓಪನ್ ಮಾಡುತ್ತಿದ್ದು, ಈಗ 3,800 ಕ್ಯೂಸೆಕ್ಸ್ಗೆ ಇಳಿಸಲಾಗಿದೆ. ಕುಡಿಯುವ ನೀರಿಗೂ ಸಮಾನಾಂತರವಾಗಿ ತುಂಬುತ್ತಿರುವುದರಿಂದ ಇರಿಗೆಷನ್ಗೆ ಸ್ವಲ್ಪ ನೀರು ಕಡಿಮೆಯಾಗುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಅಪ್ಪರ್ ಮತ್ತು ಇಂಟರ್ನಲ್ ಡಿಸ್ಟ್ರಿಬ್ಯೂಟರಿಸ್ ಹಾಗೂ ಲೋಯರ್ ರೊಟೇಶನ್ಗೂ ನೀರು ನೀಡುವ ಕುರಿತು ಎಲ್ಲಾ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಲಾಗಿದೆ. ಕ್ಯಾನಲ್ ಪೂರ್ತಿ ನಿಷೇಧ ಜಾರಿ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಇದ್ದರು.ರೈತರಲ್ಲಿ ಮನವಿ: ಜಿಲ್ಲೆಯ ಎಲ್ಲಾ ರೈತರು, ಮುಖಂಡರು ಹಾಗೂ ಜನಪ್ರತಿನಿಧಿಗಳು ಐಸಿಸಿಯಲ್ಲಿ ಭಾಗವಹಿಸಿದ್ದು, ಎಲ್ಲರೂ ಸಹಕಾರ ನೀಡಬೇಕು. ಕುಡಿಯುವ ನೀರಿನ ಜೊತೆಗೆ ಮುಂದೆ ತೀವ್ರ ಸಮಸ್ಯೆಯಾಗುವ ಸಾಧ್ಯತೆಯಿರುವುದರಿಂದ ರಸ್ತೆ ತಡೆ ಅಥವಾ ಇತರೆ ಪ್ರತಿಭಟನೆಗಳನ್ನು ಮಾಡದೆ ಅಧಿಕಾರಿಗಳೊಂದಿಗೆ ರೈತರು ಸಹಕರಿಸುವಂತೆ ಜಿಲ್ಲಾಧಿಕಾರಿಗಳ ಮನವಿ ಮಾಡಿದರು.