ಹಲವು ನೌಕರರು ನಿವೃತ್ತಿ ಅಂಚಿನಲ್ಲಿ ಇದ್ದು ಅವರು ಮುಂಬಡ್ತಿಯಿಂದ ವಂಚರಾಗುತ್ತಿರುವುದು ಗಮನಕ್ಕೆ ಬಂದಿದೆ. ಬೆಂಗಳೂರಿನ ಆಯುಕ್ತಾಲಯದಲ್ಲಿ ಬಡ್ತಿ ನೀಡದ ಹಾಗೆ ಬೆಳಗಾವಿ ವಿಭಾಗದಲ್ಲಿಯೂ ಸಹ ಸಕಾಲದಲ್ಲಿ ಬಡ್ತಿ ನೀಡುವುದಾಗಿ ಧಾರವಾಡ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಈಶ್ವರ ಉಳ್ಳಾಗಡ್ಡಿ ಭರವಸೆ ನೀಡಿದ್ದಾರೆ.
ಧಾರವಾಡ:
ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ವೃಂದದ ವರ್ಗಗಳಿಗೆ ಮುಂಬಡ್ತಿಯನ್ನು ಖಾಲಿ ಹುದ್ದೆಗಳ ಅನುಸಾರ ಒಂದು ವರ್ಷದಲ್ಲಿ ಎರಡು ಬಾರಿಗೆ ನೀಡಿ ಬೋಧಕೇತರ ನೌಕರರ ಕಾರ್ಯಕ್ಷಮತೆ ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು ಎಂದು ಧಾರವಾಡ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ, ವಾಹನ ಚಾಲಕರ ಹಾಗೂ ಗ್ರೂಪ್ `ಡಿ’ ನೌಕರರ ಸಂಘದ ರಾಜ್ಯಮಟ್ಟದ ಪದಾಧಿಕಾರಿಗಳು ಬೋಧಕೇತರ ನೌಕರರ ಸಮಸ್ಯೆಗಳ ಬಗ್ಗೆ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದರು.
ಹಲವು ನೌಕರರು ನಿವೃತ್ತಿ ಅಂಚಿನಲ್ಲಿ ಇದ್ದು ಅವರು ಮುಂಬಡ್ತಿಯಿಂದ ವಂಚರಾಗುತ್ತಿರುವುದು ಗಮನಕ್ಕೆ ಬಂದಿದೆ. ಬೆಂಗಳೂರಿನ ಆಯುಕ್ತಾಲಯದಲ್ಲಿ ಬಡ್ತಿ ನೀಡದ ಹಾಗೆ ಬೆಳಗಾವಿ ವಿಭಾಗದಲ್ಲಿಯೂ ಸಹ ಸಕಾಲದಲ್ಲಿ ಬಡ್ತಿ ನೀಡುವುದಾಗಿ ಭರವಸೆ ನೀಡಿದರು.ಇಲಾಖೆಯಲ್ಲಿ ಅನೇಕ ಯೋಜನೆ ರೂಪಿಸಿದ್ದು ಅವುಗಳನ್ನು ಅನುಷ್ಠಾನಗೊಳಿಸಿ ಸಾಕಾರಗೊಳಿಸಲು ಬೋಧಕೇತರ ನೌಕರರು ಮುಂದಾಗಬೇಕು. ಅಂದಾಗಲೇ ಉತ್ತಮ ಸೇವೆ ಹಾಗೂ ತ್ವರಿತ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದ ಅವರು, ಸಂಘಟನೆಯು ನೌಕರರ ಕೆಲಸಗಳಿಗೆ ಮಾತ್ರ ಸೀಮಿತವಾಗಿರಬೇಕು, ವೈಯಕ್ತಿಕವಾಗಿ ಕೂಡಿರಬಾರದು ಎಂದು ಕಿವಿಮಾತು ಹೇಳಿದರು.
ಅಪರ ಆಯುಕ್ತರನ್ನು ಸನ್ಮಾನಿಸಿದ ಸಂಘದ ರಾಜ್ಯಾಧ್ಯಕ್ಷ ನವೀನ ಎಸ್.ಆರ್., ಪ್ರತಿ ವರ್ಷ ಕನಿಷ್ಠ ೨ ಬಾರಿ ಖಾಲಿ ಇರುವ ಎಲ್ಲ ವೃಂದಗಳ ಹುದ್ದೆಯನ್ನು ಬಡ್ತಿ ಮೂಲಕ ಭರ್ತಿ ಮಾಡುವಂತೆ ವಿನಂತಿಸಿದರು.ಈ ವೇಳೆ ವಿವಿಧ ಬೇಡಿಕೆ ಈಡೇರಿಸುವಂತೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಸಂಘದ ರಾಜ್ಯ ಗೌರವಾಧ್ಯಕ್ಷ ದೇವರಾಜು ಜಿ, ಕಾರ್ಯಾಧ್ಯಕ್ಷ ಪೃಥ್ವಿಕುಮಾರ, ಬಾಗಲಕೋಟೆ ಜಿಲ್ಲಾಧ್ಯಕ್ಷ, ರಾಜ್ಯ ಹಿರಿಯ ಉಪಾಧ್ಯಕ್ಷ ವೆಂಕಟೇಶ ಇನಾಮದಾರ, ಖಜಾಂಚಿ ರವೀಶ ಕೆ.ಸಿ, ಸಹ ಕಾರ್ಯದರ್ಶಿ ಸುಬ್ರಹ್ಮಣ್ಯ ಜಾಧವ್, ಸಂಘಟನಾ ಕಾರ್ಯದರ್ಶಿ ವಿನಯಪ್ರಸಾದ, ಕಾನೂನು ಸಲಹೆಗಾರ ವೆಂಕಟೇಶ ಮೂರ್ತಿ, ಧಾರವಾಡ ಜಿಲ್ಲಾಧ್ಯಕ್ಷ ಜಯಪ್ರಕಾಶ ಕಂಬಾರ, ಕಾರ್ಯದರ್ಶಿ ವೀರೇಶ ಕಲಬುರ್ಗಿ, ವಿಭಾಗದ ಜಿಲ್ಲಾಧ್ಯಕ್ಷ ವಾರದ, ದಶರಥ ಸಲಗರಕರ, ವಸಂತ ಚವಡಣ್ಣವರ, ರಾಘವೇಂದ್ರ ಬೊಂಗಾಳೆ, ಮಹ್ಮದ್ ಯುಸೂಪ್ ನರಗುಂದ, ಮಂಜುನಾಥ ನಾಯ್ಕ, ಸುರೇಶ ಮೇಕಲಿ, ಗಂಗಾಧರ ತೇರದಾಳ, ಪ್ರಭು ಅಗಡಿ ಉಪಸ್ಥಿತರಿದ್ದರು.