ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಅತ್ಯಧಿಕವಾಗಿ ಕಂಡುಬರುತ್ತಿದ್ದು ಅದನ್ನು ಬಗೆಹರಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಅತ್ಯಧಿಕವಾಗಿ ಕಂಡುಬರುತ್ತಿದ್ದು ಅದನ್ನು ಬಗೆಹರಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು. ತಾಲೂಕಿನ ಚೇಳೂರಿನಲ್ಲಿ ನಡೆದ ಪ್ರಜಾ ಸೇವೆ ಅಭಿಯಾನದಲ್ಲಿ ಮಾತನಾಡಿದ ಅವರು, ಕಳೆದ ಅಭಿಯಾನದಲ್ಲಿ ಸುಮಾರು 800ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಅದರಲ್ಲಿ ಬಹುತೇಕ ವಸತಿ ಮನೆ, ಕಂದಾಯ ಇಲಾಖೆ ಕೃಷಿ ತೋಟಗಾರಿಕೆ ಇಲಾಖೆಗೆ ಸಂಬಂಧ ಪಟ್ಟಿದ್ದಾಗಿದೆ ಎಂದು ಹೇಳಿದರು.ತಾಲೂಕಿನಲ್ಲಿ ಹಂದಿಜೋಗರಿಗೆ ಶೀಘ್ರದಲ್ಲಿ ಹಕ್ಕುಪತ್ರಗಳನ್ನು ನೀಡುತ್ತೇವೆ. ನಿತ್ಯ ಜನರ ಮಧ್ಯೆ ಇರುವುದರಿಂದ ಪ್ರತಿದಿನ ನೂರಾರು ಸಮಸ್ಯೆಗಳು ತಮ್ಮ ಗಮನಕ್ಕೆ ಬರುತ್ತವೆ. ಸಾರ್ವಜನಿಕರ ಕೆಲಸ ಮಾಡುವ ಅಧಿಕಾರಿಗಳು ಆತ್ಮಸಾಕ್ಷಿಗೆ ಹೆದರಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅವರಿಗೂ ನೆಮ್ಮದಿ ಸಿಗಲಿದೆ. ನಾಲ್ಕೈದು ದಶಕಗಳಿಂದ ಪೌತಿ ಖಾತೆ ಮಾಡಿಸಿಕೊಳ್ಳಲು ಸಾಧ್ಯವಾಗದವರಿಗೆ ಇದೀಗ ಪರಿಹಾರ ದೊರೆತಿದೆ ಎಂದರು. ಪ್ರಜಾಸೇವಾ ಅಭಿಯಾನ ಅರ್ಜಿ ಸ್ವೀಕರಿಸುವ ಸ್ಥಳವು ಕಲ್ಯಾಣ ಮಂಟಪವಾಗಿದ್ದರಿಂದ ತುಂಬಾ ಮೆಟ್ಟಿಲು ಇರುವುದರಿಂದ ವಿಕಲಚೇತನರು ಅರ್ಜಿ ಕೊಡಲು ಕಾದುಕುಳಿತು ಮೆಟ್ಟಿಲು ಹತ್ತಲು ಆಗದೆ ವಾಪಸ್ಸಾದ ಘಟನೆ ನಡೆಯಿತು. ಹಿರಿಯ ನಾಗರಿಕರು ಸಾಹಸಪಟ್ಟು ಊರುಗೋಲು ಸಹಾಯದಿಂದ ಮೆಟ್ಟಿಲು ಹತ್ತಿ ಅರ್ಜಿ ಕೊಟ್ಟು ಬಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಆರತಿ.ಬಿ, ಇಒ ರಂಗನಾಥ್, ವೃತ್ತ ನಿರೀಕ್ಷಕ ರಾಘವೇಂದ್ರ, ತಾಲೂಕು ಮಟ್ಟದ ಅಧಿಕಾರಿಗಳಾದ ಟಿಎಚ್ಒ ಡಾ.ಸವಿತ, ಸಿಡಿಪಿಒ ಕೃಷ್ಣಮೂರ್ತಿ, ವೀಣಾ, ಜಗನ್ನಾಥ್ ಗೌಡ, ಉಪತಹಸೀಲ್ದಾರ್ ನಾಗಭೂಷಣ್, ಬಿಇಒ ಎಂ.ಎಸ್.ನಟರಾಜು, ಜಯದೇಶ್, ನಾಗೇಂದ್ರಪ್ಪ, ಡಾ.ವಿಜಯ್ ಕುಮಾರ್, ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಇದ್ದರು.