ಅವಳಿ ನಗರದಲ್ಲಿ ಸೋಮವಾರ ಮಾಂಸಾಹಾರ ನಿಷೇಧ: ಬೆಂಬಲ

| Published : Nov 02 2024, 01:29 AM IST

ಸಾರಾಂಶ

ದೈವದ ಹಿತದೃಷ್ಟಿಗೆ ಬದ್ಧರಾಗಿದ್ದು, ಎಲ್ಲರ ಸಹಮತದೊಂದಿಗೆ ಪ್ರತಿ ಸೋಮವಾರ ಸಂಪೂರ್ಣ ಮಾಂಸಾಹಾರ ನಿಷೇಧಿಸುವಲ್ಲಿ ಒಪ್ಪಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬನಹಟ್ಟಿಯಲ್ಲಿ ಈಗಾಗಲೇ ಪ್ರತಿ ಸೋಮವಾರದಂದು ನಗರದ ಆರಾಧ್ಯದೈವ ಶ್ರೀ ಕಾಡಸಿದ್ದೇಶ್ವರ ಹಾಗೂ ರಬಕವಿ ಆರಾಧ್ಯದೈವ ಶ್ರೀಮಲ್ಲಿಕಾರ್ಜುನ ದೇವರ ಶುಭವಾರವಾಗಿರುವ ಕಾರಣ ಅವಳಿ ನಗರಾದ್ಯಂತ ಮಾಂಸಾಹಾರ ಅಂಗಡಿ ಬಂದ್ ಮಾಡುವಂತೆ ವಿನಂತಿಸದರನ್ವಯ ಕಳೆದ ಸೋಮವಾರದಿಂದ ಉತ್ತಮ ಪ್ರತಿಕ್ರಿಯೆಯೊಂದಿಗೆ ಬಹುತೇಕ ವ್ಯಾಪಾರಸ್ಥರು ಸ್ವಯಂಪ್ರೇರಿತ ಬಂದ್ ಮಾಡುವ ಮೂಲಕ ಸಂಪ್ರದಾಯ ಮೆರೆದಿದ್ದಾರೆ.

ಈ ಕುರಿತು ಗುರುವಾರ ಬನಹಟ್ಟಿ ಮಂಗಳವಾರ ಪೇಟೆ ದೈವ ಮಂಡಳಿ ಕಚೇರಿಯಲ್ಲಿ ವಿವಿಧ ನಾಗರಿಕ ಸಂಘಟನೆಗಳ ಮುಖಂಡರು ಭಾಗಿಯಾಗಿ ಇನ್ನುಳಿದ ಪಟ್ಟಣದ ಹೊರವಲಯದಲ್ಲಿರುವ ದಾಭಾ ಹಾಗೂ ಅಂಗಡಿಕಾರರಿಗೂ ಮನವಿ ಮೂಲಕ ಬಂದ್‌ಗೆ ತಿಳಿಸಲಾಗುವುದೆಂದು ಸ್ಪಷ್ಟಪಡಿಸಿದರು.

ಈ ಸಂದರ್ಭ ಮಾಂಸಾಹಾರ ಮಾರಾಟಗಾರರು ಹಾಗೂ ಅಂಗಡಿಕಾರರ ಮುಖಂಡರು ಸಭೆಯಲ್ಲಿ ಭಾಗಿಯಾಗಿ ನಗರದ ಹಾಗೂ ದೈವದ ಹಿತದೃಷ್ಟಿಗೆ ಬದ್ಧರಾಗಿದ್ದು, ಎಲ್ಲರ ಸಹಮತದೊಂದಿಗೆ ಪ್ರತಿ ಸೋಮವಾರ ಸಂಪೂರ್ಣ ಮಾಂಸಾಹಾರ ನಿಷೇಧಿಸುವಲ್ಲಿ ಒಪ್ಪಿಗೆ ಸೂಚಿಸಿದರು.

ಇದೇ ಸಂದರ್ಭ ಶ್ರೀಶೈಲಪ್ಪ ದಭಾಡಿ, ಮಲ್ಲಿಕಾರ್ಜುನ ತುಂಗಳ, ಸಿದ್ಧನಗೌಡ ಪಾಟೀಲ, ಶಂಕರ ಸೊರಗಾಂವಿ, ದಾನಪ್ಪ ಹುಲಜತ್ತಿ, ಬುಡಾನ ಜಮಾದಾರ, ಶಶಿಕಾಂತ ಹುನ್ನೂರ, ಅಶೋಕ ಬಾಣಕಾರ, ಫಿರೋಜ ಜಕಾತಿ, ಅಜೀಜ ಶೇಖ್, ಮುನ್ನಾ ಮುಲ್ಲಾ, ಮುಸ್ತಾಕ ಹಲಗಲಿ ಸೇರಿದಂತೆ ಅನೇಕರಿದ್ದರು.