ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿಯಂತೂ ಜೋರಾಗಿಯೇ ಇದೆ. ಹಿಂಡು ಹಿಂಡಾಗಿ ಅಲೆಯುತ್ತಿದ್ದು, ಬೈಕ್ ಸವಾರರನ್ನು ಬೆನ್ನತ್ತಿ ಕಚ್ಚುತ್ತವೆ
ಚಂದ್ರು ಕೊಂಚಿಗೇರಿ ಹೂವಿನಹಡಗಲಿ
ಹೂವಿನಹಡಗಲಿ ನಗರದ ತುಂಬೆಲ್ಲ ಮಲ್ಲಿಗೆ ಹೂವಿನ ಸುವಾಸನೆಯ ಬದಲು, ಮೂಳೆ -ಮಾಂಸ, ಎಗ್ರೈಸ್ ಸೆಂಟರ್ಗಳ ದುರ್ನಾತ. ಖಾರ, ಮಸಾಲೆ ವಾಸನೆಯೇ ಹೆಚ್ಚಾಗಿದೆ. ಮಾಂಸದ ತ್ಯಾಜ್ಯಕ್ಕಾಗಿ ಪೈಪೋಟಿ ನಡೆಸುವ ಬೀದಿ ನಾಯಿಗಳು ಜನರ ಮೇಲೂ ದಾಳಿ ಮಾಡುತ್ತವೆ.ಹೌದು, ಪಟ್ಟಣದ ಹಲವು ಬಡಾವಣೆ, ಸರ್ಕಲ್ಗಳು ಸೇರಿದಂತೆ ಬೀದಿ ಬದಿಯ ಎಗ್ರೈಸ್ ಸೆಂಟರ್, ಮೂಳೆ ಮಾಂಸದ ಅಂಗಡಿಗಳ ಬಳಿ ನಿತ್ಯ ನೂರಾರು ನಾಯಿಗಳಿವೆ. ಕೆಲ ಬಡಾವಣೆಗಳಲ್ಲಿ ಚಿಕ್ಕ ಮಕ್ಕಳು ಮನೆಯಿಂದ ಹೊರಗೆ ಬಾರದಂತಹ ಪರಿಸ್ಥಿತಿ ಇದೆ. ಪಾಲಕರಿಗೆ ತಮ್ಮ ಮಕ್ಕಳನ್ನು ನಾಯಿಗಳಿಂದ ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ.
ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿಯಂತೂ ಜೋರಾಗಿಯೇ ಇದೆ. ಹಿಂಡು ಹಿಂಡಾಗಿ ಅಲೆಯುತ್ತಿದ್ದು, ಬೈಕ್ ಸವಾರರನ್ನು ಬೆನ್ನತ್ತಿ ಕಚ್ಚುತ್ತವೆ. ಜೀವದ ಭಯದಲ್ಲೇ ಬೈಕ್ ಸವಾರರು ಓಡಾಡುತ್ತಿದ್ದಾರೆ. ವಾಹನಗಳಿಗೆ ಅಡ್ಡ ಬಂದು ಸವಾರರಿಗೆ ಪ್ರಾಣಾಪಾಯ ಉಂಟು ಮಾಡುವ ಘಟನೆಗಳು ಹೆಚ್ಚಾಗಿವೆ.ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಲ್, ಸೋಗಿ ಸರ್ಕಲ್ ಹತ್ತಿರದ ಬಡಾವಣೆ, ಸೊಪ್ಪಿನ ಕಾಳಮ್ಮ ಬಡಾವಣೆ, ಬಸವೇಶ್ವರ ನಗರ ಇತರೆ ಬಡಾವಣೆ, ಮುಖ್ಯ ರಸ್ತೆಗಳಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದೆ. ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು ಒಂಟಿಯಾಗಿ ಓಡಾಡಲು ಭಯಪಡುತ್ತಾರೆ. ರಾತ್ರಿಯಂತೂ ಮುಖ್ಯ ಸರ್ಕಲ್ ಗಳಲ್ಲೇ ಜನರ ಓಡಾಟ ಕಷ್ಟವಾಗಿದೆ. ಬೈಕ್ ಬೆನ್ನಟ್ಟಿ ಅಪಾಯ ಉಂಟು ಮಾಡುತ್ತಿವೆ. ಓಣಿಗಳಲ್ಲಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಎಪಿಎಂಸಿ ಸರ್ಕಲ್, ಮದಲಗಟ್ಟಿ ಸರ್ಕಲ್, ಮಸೀದಿ ಬಳಿ ತೆರೆದ ಮಾಂಸದ ಅಂಗಡಿಗಳಿವೆ. ಶಾಸ್ತ್ರಿ ಸರ್ಕಲ್ ನ ಮುಖ್ಯ ರಸ್ತೆಯಲ್ಲಿ ಎಗ್ರೈಸ್ ಸೆಂಟರ್, ಕಬಾಬ್ ಸೆಂಟರ್ಗಳಿವೆ, ಅಂಗಡಿಯವರು ಮಾಂಸದ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇ ಮಾಡದೇ ಎಲ್ಲೆಂದರಲ್ಲಿ ಬಿಸಾಡುತ್ತಾರೆ. ತ್ಯಾಜ್ಯ ಸುರಿಯುವ ಸ್ಥಳ, ಅಂಗಡಿಗಳ ಮುಂದೆ, ರಸ್ತೆಯಲ್ಲೇ ನಾಯಿಗಳು ಬೀಡು ಬಿಟ್ಟಿರುತ್ತವೆ.ಮೂಳೆ ಮಾಂಸದ ರುಚಿ ಕಂಡ ನಾಯಿಗಳು ಆಕ್ರಮಣಕಾರಿಯಾಗಿ ವರ್ತಿಸುತ್ತಿವೆ. ಪುರಸಭೆಯವರು ಬೀದಿ ಬದಿಯ ಎಗ್ರೈಸ್, ಕಬಾಬ್ ಸೆಂಟರ್ಗಳಿಗೆ ಕಡಿವಾಣ ಹಾಕುತ್ತಿಲ್ಲ. ಬೀದಿ ನಾಯಿ ನಿಯಂತ್ರಿಸುತ್ತಿಲ್ಲ ಎಂದು ಜನ ದೂರುತ್ತಾರೆ.
ಸೋಗಿ ಸರ್ಕಲ್ ಬಳಿ ಈಚೆಗೆ ನಾಯಿಗಳು ಕಚ್ಚಾಡುತ್ತ ದಿಢೀರನೇ ಬೈಕ್ಗೆ ಅಡ್ಡ ಬಂದಿದ್ದರಿಂದ ನಿಯಂತ್ರಣ ತಪ್ಪಿ ಬಿದ್ದು, ಕೋಮಾ ಸ್ಥಿತಿಗೆ ಹೋಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಕಳೆದ ತಿಂಗಳು ಕಾಗನೂರು ಬಳಿ ಇಂಥದ್ದೇ ಘಟನೆ ಸಂಭವಿಸಿ ಲೈನ್ ಮ್ಯಾನ್ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಬೈಕ್ಗಳಿಗೆ ನಾಯಿಗಳು ಅಡ್ಡ ಬರುವ ಕಾರಣದಿಂದಲೇ ಸವಾರರು ಬಿದ್ದು, ಗಾಯಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಪುರಸಭೆಯವರು ಬೀದಿನಾಯಿಗಳ ಹಾವಳಿ ತಡೆಗಟ್ಟಲು ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ನಾಗರಿಕರ ಒತ್ತಾಯ.ಬೀದಿ ನಾಯಿಗಳನ್ನು ಮಾರ್ಗಸೂಚಿ ಪ್ರಕಾರ ನಿಯಂತ್ರಿಸಬೇಕಿದ್ದು, ಇತ್ತೀಚೆಗೆ ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ ಹತ್ತಿರ ಬೀಡು ಬಿಟ್ಟಿದ್ದ 72 ನಾಯಿಗಳನ್ನು ಸೆರೆ ಹಿಡಿದು ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಬೀದಿನಾಯಿಗಳನ್ನು ಸೆರೆ ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ ಹಾಗೂ ಆರೈಕೆಗೆ ಟೆಂಡರ್ ಕರೆಯಲಾಗಿದೆ ಎಂದು ಹೂವಿನಹಡಗಲಿ ಪುರಸಭೆ ಆರೋಗ್ಯ ನಿರೀಕ್ಷಕ ಎಂ.ಸೋಮಶೇಖರ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಬೀದಿನಾಯಿಗಳು ಹೆಚ್ಚಾಗಿವೆ. ರಾತ್ರಿ ಹೊತ್ತು ಊರಿನಿಂದ ಬಂದು ಮನೆಗೆ ಹೋಗುವುದು ಕಷ್ಟವಾಗಿದೆ. ನೆಮ್ಮದಿಯಿಂದ ನಿದ್ರೆ ಮಾಡಲು ಬಿಡುತ್ತಿಲ್ಲ, ಪುರಸಭೆಯವರು ಬೀದಿನಾಯಿಗಳನ್ನು ನಿಯಂತ್ರಿಸಬೇಕಿದೆ ಎಂದು ಪಟ್ಟಣದ ನಿವಾಸಿ ಸೊಪ್ಪಿನ ರಾಕೇಶ ತಿಳಿಸಿದ್ದಾರೆ.