ಬೀದಿ ನಾಯಿಗಳಿಗೆ ಮಾಂಸ ಮಾರಾಟದ ಅಂಗಡಿಗಳೇ ವಾಸ ಸ್ಥಳ

| Published : Dec 11 2024, 12:47 AM IST

ಸಾರಾಂಶ

ಚಿಕನ್, ಮಟನ್ ಹಾಗೂ ಮೀನು ಮಾರಾಟ ಮಾಡುವ ಪ್ರದೇಶದಲ್ಲಿ ಯಾವುದೇ ಮಕ್ಕಳು ಅಥವಾ ಸಾರ್ವಜನಿಕರು ಕೈಯಲ್ಲಿ ಕ್ಯಾರಿಬ್ಯಾಗ್ ಅಥವಾ ಚೀಲ ಹಿಡಿದುಕೊಂಡು ಹೋಗುವಂತಿಲ್ಲ

ಶರಣು ಸೊಲಗಿ ಮುಂಡರಗಿ

ಮುಂಡರಗಿಯಲ್ಲಿರುವ ಬೀದಿ ನಾಯಿಗಳಿಂದ ಸಾರ್ವಜನಿಕರು ಕಂಗಾಲಾಗಿದ್ದು. ಭಾನುವಾರ ಮಗುವಿನ ಮೇಲೆ ನಾಯಿ ದಾಳಿ ಮಾಡಿದ ಮೇಲೆ ಎಲ್ಲರೂ ತಮ್ಮ ಮಕ್ಕಳನ್ನು ಹೊರಗೆ ಕಳಿಸಲು ಯೋಚಿಸುವಂತಾಗಿದೆ. ಬಹುತೇಕ ಪಟ್ಟಣದಲ್ಲಿರುವ ಮಾಂಸ ಮಾರಾಟದ ಅಂಗಡಿಗಳೇ ಆ ಬೀದಿ ನಾಯಿಗಳಿಗೆ ವಾಸಸ್ಥಳಗಳಾಗಿವೆ.

ಪಟ್ಟಣದಲ್ಲಿ ಜಾಗೃತ ವೃತ್ತ, ಬಸ್ ನಿಲ್ದಾಣದ ಸಮೀಪ, ಭಜಂತ್ರಿ ಓಣಿ, ಮುಂಡರಗಿ-ಶಿರಹಟ್ಟಿ ರಸ್ತೆಯೂ ಸೇರಿದಂತೆ ಅನೇಕ ಕಡೆಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಚಿಕನ್ ಮಾರಾಟದ ಅಂಗಡಿಗಳು ಹಾಗೂ 5 ಮಟನ್ ಮಾರಾಟ ಮಾಡುವ ಅಂಗಡಿಗಳು, 4 ಮೀನು ಮಾರಾಟದ ಅಂಗಡಿಗಳಿದ್ದು, ನಿತ್ಯವೂ ಈ ಎಲ್ಲ ಅಂಗಡಿಗಳಿಂದ ಬರುವ ಕಸ ತಿನ್ನುವುದಕ್ಕಾಗಿ ಬೀದಿ ನಾಯಿಗಳು ಅಲ್ಲಿಯೇ ಕಾದು ಕುಳಿತಿರುತ್ತವೆ.

ಬ್ಯಾಗ್ ಹಿಡಿದು ಹೋಗುವಂತಿಲ್ಲ: ಚಿಕನ್, ಮಟನ್ ಹಾಗೂ ಮೀನು ಮಾರಾಟ ಮಾಡುವ ಪ್ರದೇಶದಲ್ಲಿ ಯಾವುದೇ ಮಕ್ಕಳು ಅಥವಾ ಸಾರ್ವಜನಿಕರು ಕೈಯಲ್ಲಿ ಕ್ಯಾರಿಬ್ಯಾಗ್ ಅಥವಾ ಚೀಲ ಹಿಡಿದುಕೊಂಡು ಹೋಗುವಂತಿಲ್ಲ. ಬೀದಿ ನಾಯಿಗಳು ತಕ್ಷಣವೇ ಆ ಚೀಲಗಳಿಗೆ ಬಾಯಿ ಹಾಕುತ್ತವೆ. ಒಂದು ವೇಳೆ ಯಾರಾದರೂ ನಾಯಿಗಳನ್ನು ಬೆದರಿಸಲು ಪ್ರಯತ್ನಿಸಿದರೆ ತಕ್ಷಣವೇ ಅವರ ಮೇಲೆ ದಾಳಿ ಮಾಡಿದ ಉದಾಹರಣೆಗಳು ಸಾಕಷ್ಟಿವೆ.

ರಸ್ತೆ ಅಕ್ಕಪಕ್ಕ ಕಸ: ಪಟ್ಟಣದಲ್ಲಿನ ಕೆಲವು ಮಾಂಸ ಮಾರಾಟದ ಅಂಗಡಿಯವರು ರಾತ್ರಿ ವೇಳೆಯಲ್ಲಿ ಅವುಗಳಿಂದ ಬಂದಿರುವ ಕಸ ಮುಂಡರಗಿ-ಶಿರಹಟ್ಟಿ ರಸ್ತೆಯಲ್ಲಿರುವ ಹಿರೇಹಳ್ಳಕ್ಕೆ, ಹೆಸರೂರು ರಸ್ತೆ ಪಕ್ಕದಲ್ಲಿ ಹಾಕಿ ಹೋಗುತ್ತಾರೆ. ಅಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುತ್ತದೆ. ರಾತ್ರಿ ಸಮಯದಲ್ಲಿ ಆ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಹಾಗೂ ಮೋಟರ್ ಸೈಕಲ್ ಗಳ ಮೇಲೆ ದಾಳಿ ಮಾಡುತ್ತವೆ.

ಪಟ್ಟಣದಲ್ಲಿರುವ ಎಲ್ಲ ರೀತಿಯ ಮಾಂಸ ಹಾಗೂ ಮೀನು ಮಾರಾಟದ ಅಂಗಡಿಗಳನ್ನು ಹೊರ ವಲಯದಲ್ಲಿ ಸ್ಥಳಾಂತರಿಸಿ ಮೂಲಭೂತ ಸೌಲಭ್ಯ ಒದಗಿಸಬೇಕು. ಆದರಿಂದ ಬೀದಿ ನಾಯಿಗಳ ಹಾವಳಿ ಕಡಿಮೆಯಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿಗೆ ಈ ಹಿಂದೆ ಕನ್ನಡಕ್ರಾಂತಿ ಸೇನೆಯ ಮನವಿ ಸಲ್ಲಿಸಿತ್ತು. ಆದರೆ ಪುರಸಭೆ ಮಾತ್ರ ಇದುವರೆಗೂ ಆ ಕಾರ್ಯ ಮಾಡಿಲ್ಲ. ಹೀಗಾಗಿ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ. ಈಗಲಾದರೂ ಆ ಕಾರ್ಯಕ್ಕೆ ಪುರಸಭೆ ಅಧಿಕಾರಿಗಳು ಮುಂದಾಗಬೇಕು ಎಂದು ಕನ್ನಡಕ್ರಾಂತಿ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಮುಧೋಳ ಒತ್ತಾಯಿಸಿದ್ದಾರೆ.

ಕಳೆದ ಭಾನುವಾರದಿಂದಲೇ ಪಟ್ಟಣದಲ್ಲಿನ ಬೀದಿ ನಾಯಿಗಳನ್ನು ಸ್ಥಳಾಂತರಿಸುವ ಕಾರ್ಯ ಮಾಡುತ್ತಿದ್ದು, ಈಗಾಗಲೇ ಅನೇಕ ಬೀದಿ ನಾಯಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಇನ್ನು ಚಿಕನ್, ಮಾಂಸ ಹಾಗೂ ಮೀನು ಮಾರಾಟ ಅಂಗಡಿಗಳ ಸ್ಥಳಾಂತರದ ಕುರಿತು ಸಾಮಾನ್ಯ ಸಭೆಯಲ್ಲಿ ಆಡಳಿತ ಕಮೀಟಿಯವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಂಡರಗಿ ಮುಖ್ಯಾಧಿಕಾರಿ ಪುರಸಭೆ ಶಂಕರ ಹುಲ್ಲಮ್ಮನವರ ತಿಳಿಸಿದ್ದಾರೆ.