ಮೆಗ್ಗಾನ್ ಖಾಲಿ ಹುದ್ದೆಗಳ ಭರ್ತಿಗೆ ಕಡತ ಸಿದ್ಧಪಡಿಸಬೇಕು

| Published : Nov 12 2023, 01:00 AM IST

ಮೆಗ್ಗಾನ್ ಖಾಲಿ ಹುದ್ದೆಗಳ ಭರ್ತಿಗೆ ಕಡತ ಸಿದ್ಧಪಡಿಸಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಶರಣಪ್ರಕಾಶ ಪಾಟೀಲ್‌ ಸೂಚನೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮೆಗ್ಗಾನ್ ಆಸ್ಪತ್ರೆಯ ಖಾಲಿ ಹುದ್ದೆಗಳ ಭರ್ತಿ ಸಂಬಂಧ ಕಡತ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ತಾಕೀತು ಮಾಡಿದರು.

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯ ಹಲವು ಪಿಎಚ್‌ಸಿಗಳಲ್ಲಿ ವೈದ್ಯರಿಲ್ಲರಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಆರೋಗ್ಯ ಇಲಾಖೆಯ ಖಾಲಿ ಹುದ್ದೆಗೆ ಕೂಡಲೇ ಅರ್ಜಿ ಆಹ್ವಾನಿಸಿ ತುಂಬಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗೆ ಸೂಚನೆ ನೀಡಿದರು.

ತುಮರಿ, ಬ್ಯಾಕೋಡು ಸೇರಿದಂತೆ ಸಾಗರದ ಮೂರು ಪಿಎಚ್‍ಸಿಯಲ್ಲಿ ವೈದ್ಯರಿಲ್ಲದೇ ತುಂಬಾ ತೊಂದರೆ ಆಗುತ್ತಿದೆ. ವೈದ್ಯರ ಕೊರತೆಯಿಂದ ಜನರಿಗೆ ಸಮಸ್ಯೆಯಾಗಿದೆ. ಅದೇ ರೀತಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ವೈದ್ಯ ಬರಲ್ಲ ಎಂಬ ದೂರಿದೆ. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಅಗತ್ಯವಾದ ಮೂಲಸೌಕರ್ಯ, ಹುದ್ದೆ ಭರ್ತಿ, ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಸಂಸ್ಥೆ ಅಭಿವೃದ್ಧಿಗೆ ಪೂರಕವಾಗಿ ಅಧಿಕಾರಿ, ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ರೇಡಿಯಾಲಜಿಸ್ಟ್ ಹುದ್ದೆಗೆ ಕೂಡಲೇ ಅರ್ಜಿ ಕರೆದು ನೇಮಕ ಮಾಡಬೇಕು. ಪಿಜಿ ನರ್ಸಿಂಗ್ ವಿದ್ಯಾರ್ಥಿ ನಿಲಯಕ್ಕೆ ಪ್ರಸ್ತಾವನೆ ಕಳುಹಿಸಿ, ಆಸ್ಪತ್ರೆಯಲ್ಲಿ ಆಂಕೋಸರ್ಜನ್, ನ್ಯೂರೋಸರ್ಜನ್, ನ್ಯೂರಾಲಜಿಸ್ಟ್‌ಗಳಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೇಮಕ ಮಾಡಿಕೊಂಡು ಸೇವೆ ಒದಗಿಸಬೇಕು ಎಂದು ಸೂಚಿಸಿದರು.

ಸಂಸ್ಥೆಯಲ್ಲಿ ಡಿ ಗ್ರೂಪ್ ಮತ್ತು ಸ್ಕ್ಯಾವೆಂಜರ್ ನಡುವಿನ ವೇತನ ವ್ಯತ್ಯಾಸಕ್ಕೆ ಸಂಬಂಧಿಸಿ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ಡಿಸಿಗೆ ಸೂಚನೆ ನೀಡಿದರು. ಕಾರ್ಮಿಕರ ಹಿತಾಸಕ್ತಿ ಕಾಪಾಡಬೇಕು. ಅವರಿಗೆ ನಿಗದಿಯಾದ ವೇತನ ಭತ್ಯೆಗಳನ್ನು ಸರಿಯಾಗಿ ಪಾವತಿ ಆಗುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಂಜೂರಾದ ತಜ್ಞ ವೈದ್ಯರು ಸೇರಿದಂತೆ ಇತರೆ ಹುದ್ದೆಗಳನ್ನು ತುಂಬಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಯೂಸರ್ ಚಾರ್ಜಸ್, ಎಬಿಎಆರ್‌ಕೆ ಮೊತ್ತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಗುರಿ ನಿಗದಿಪಡಿಸಿಕೊಂಡು ಗುರಿ ಸಾಧಸಬೇಕು. ಡಿಎಂಇ ಅವರು ನಿಯಮಿತವಾಗಿ ಖರ್ಚು-ವೆಚ್ಚದ ಕುರಿತು ಪರಿಶೀಲಿಸಬೇಕು. ಓಬಿಜಿ, ಮಕ್ಕಳ ವಿಭಾಗ, ಔಷಧಿ ಖರೀದಿ ಸೇರಿದಂತೆ ಸಂಸ್ಥೆಯಲ್ಲಿ ನಡೆಯುತ್ತಿರುವ ವಿವಿಧ ಕಟ್ಟಡ ಮತ್ತಿತರೆ ಕಾಮಗಾರಿಗಳನ್ನು ಸೂಕ್ತವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಇಡೀ ಆಸ್ಪತ್ರೆ ಲೆಕ್ಕಪತ್ರ ಉತ್ತಮವಾಗಿ ನಿರ್ವಹಿಸಬೇಕು. ಜೊತೆಗೆ ವಾರ್ಷಿಕ ಆದಾಯದ ಕುರಿತು ಗುರಿ ನಿಗದಿಪಡಿಸಿ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ಡಿಎಂಇ ಸುಜಾತಾ ರಾಥೋಡ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್, ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ ಮತ್ತಿತರರು ಹಾಜರಿದ್ದರು.

- - -

ಬಾಕ್ಸ್‌ 100 ಶುಶ್ರೂಷಕರ ಅವಶ್ಯಕತೆ ಸಿಮ್ಸ್ ಮುಖ್ಯ ಆಡಳಿತಾಧಿಕಾರಿ ಶಿವಕುಮಾರ್ ಮಾತನಾಡಿ, ಮುಖ್ಯ ಆಸ್ಪತ್ರೆಯಲ್ಲಿ 791, ಓಬಿಜಿ 304, ಪಿಡೀಯಾಟ್ರಿಕ್ 120 ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 299 ಹಾಸಿಗೆ ಸೇರಿದಂತೆ ಒಟ್ಟು 1514 ಹಾಸಿಗೆ ಸಾಮರ್ಥ್ಯವನ್ನು ಆಸ್ಪತ್ರೆ ಹೊಂದಿದೆ. ಇದರಲ್ಲಿ 1302 ಆಕ್ಸಿಜನ್ ಬೆಡ್, 128 ಐಸಿಯು ಮತ್ತು 110 ಎಚ್‌ಡಿಯು ಇದೆ. ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಒಟ್ಟು 333 ಶುಶ್ರೂಷಕರು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 100 ಶುಶ್ರೂಷಕರ ಅವಶ್ಯಕತೆ ಇದೆ. ಗ್ರೂಪ್ ಎ, ಬಿ, ಸಿ, ಡಿಯಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಗ್ರೂಪ್ ಸಿ ಮತ್ತು ಡಿ ನೌಕರರ ವಸತಿ ನಿಲಯಗಳ ಕೊರತೆ ಇದೆ. ಹಾಗೂ ಹೆಚ್ಚುವರಿ ಇಟಿಪಿ ಅವಶ್ಯಕತೆ ಇದೆ ಎಂದರು.

- - - -11ಎಸ್‌ಎಂಜಿಕೆಪಿ04:

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಮಾತನಾಡಿದರು.