ಸಾರಾಂಶ
ಮೆಕಾನಿಕ್ ವೃತ್ತಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಯಿತು. ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಮೆಕಾನಿಕ್ ವೃತ್ತಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗಿದೆ ಎಂದು ಆರೋಪಿಸಿ ಕುಶಾಲನಗರ ಬೈಕ್ ಮೆಕಾನಿಕ್ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಯಿತು.ಕುಶಾಲನಗರ ಬೈಕ್ ಮೆಕಾನಿಕ್ ಸಂಘದ ಅಧ್ಯಕ್ಷ ಭರತ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಈ
ರಿಯಾಲಿಟಿ ಶೋ ಜಡ್ಜ್ ಗಳು ಹಾಗೂ ಸ್ಪರ್ಧಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ರಿಯಾಲಿಟಿ ಶೋ ಟಾಸ್ಕ್ ಸಂದರ್ಭ ಮಹಿಳಾ ಸ್ಪರ್ಧಿ ಮೆಕಾನಿಕ್ ವೃತ್ತಿ ನಿರ್ವಹಿಸುವ ಶ್ರಮಿಕ ವರ್ಗದ ಬಗ್ಗೆ ಕೀಳಾಗಿ ನಿಂದಿಸಿ ಅವಮಾನಿಸಿದ್ದು ಇದಕ್ಕೆ ಜಡ್ಜ್ ಗಳು ಆಕ್ಷೇಪ ವ್ಯಕ್ತಪಡಿಸದೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿರುವುದು ಖಂಡನೀಯ. ಎಲ್ಲಾ ವೃತ್ತಿಗಳಿಗೂ ಅದರದೇ ಆದ ಘನತೆಯಿದೆ. ಮೆಕ್ಯಾನಿಕ್ ವೃತ್ತಿ ಕೂಡ ಇದರಿಂದ ಹೊರತಾಗಿಲ್ಲ. ಒಂದು ಶ್ರಮಿಕ ವರ್ಗವನ್ನು ಕೊಚ್ಚೆ, ಗ್ರೀಸ್ ತಿಂದು ಬದುಕುವವರು ಎಂದು ನಿಂದಿಸಿರುವ ಈ ವಾಹಿನಿಯ ಮುಖ್ಯಸ್ಥರು, ಜಡ್ಜ್ ಗಳು, ಆಂಕರ್ ಹಾಗೂ ಸ್ಪರ್ಧಿಯು ನಮ್ಮ ಆತ್ಮಗೌರವಕ್ಕೆ ಧಕ್ಕೆ ತಂದಿರುವ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂಘದ ಉಪಾಧ್ಯಕ್ಷ ಚಂದ್ರ, ಖಜಾಂಚಿ ದರ್ಶನ್, ಕಾರ್ಯದರ್ಶಿ ವೆಂಕಟೇಶ್ ಮತ್ತಿತರರು ಇದ್ದರು.