ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗ ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಧಿಗಳ ಗಮನಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ನಗರದ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಾದಾಮಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ತಿದ್ದುವ ಪತ್ರಕರ್ತರಿಗೆ ಯಾವುದೇ ಸೌಲಭ್ಯಗಳಿಲ್ಲ. ಗೌರವಧನ ಇಲ್ಲ. ಸಮಾಜ ಸೇವೆಯ ಕೆಲಸ ಮಾಡುವ ಪತ್ರಕರ್ತರು ಹಗಲಿರುಳು ಹೊಸ ಹೊಸ ಸುದ್ದಿಗಳನ್ನು ಮಾಡುವ ಮೂಲಕ ಸಮಸ್ಯೆಗಳನ್ನು ಕಾರ್ಯಾಂಗದ ಗಮನಕ್ಕೆ ತರುವ ಮೂಲಕ ಸಮಸ್ಯೆಗಳ ಇತ್ಯರ್ಥಕ್ಕೆ ಶ್ರಮಿಸುತ್ತಾರೆ. ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಮಾನ ತಿಳಿಯಲು ಪ್ರತಿದಿನ ದಿನಪತ್ರಿಕೆ ಓದಬೇಕು. ಮುಂದಿನ ಓದಿಗೆ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಪ್ರಚಲಿತ ವಿದ್ಯಮಾನಗಳ ಮಾಹಿತಿ ಅತ್ಯವಶ್ಯಕವಾಗಿದೆ ಎಂದು ಹೇಳಿದರು.ಜಿಲ್ಲಾ ಕಾನಿಪ ಅಧ್ಯಕ್ಷ ಆನಂದ ದಲಬಂಜನ ಮಾತನಾಡಿ, ಪತ್ರಕರ್ತರು ಈ ಹಿಂದೆ ಸುದ್ದಿ ಮಾಡುವಾಗ ಬಹಳ ತೊಂದರೆ ಇತ್ತು. ಈಗ ಆಧುನಿಕ ವಿಜ್ಞಾನ ತಂತ್ರಜ್ಞಾನದ ಪ್ರಭಾವದಿಂದ ಗಣಕಯಂತ್ರ, ಮೊಬೈಲ್ ಮೂಲಕ ಸುದ್ದಿ ಕಳುಹಿಸಬಹುದಾಗಿದೆ ಎಂದು ಹೇಳಿದರು.
ತಾಲೂಕು ಕಾನಿಪ ಅಧ್ಯಕ್ಷ ಅಡಿವೇಂದ್ರ ಜಿ.ಇನಾಮದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಹಸೀಲ್ದಾರ ಕಾವ್ಯಶ್ರೀ ಎಚ್. ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಮಹೇಶ ಅಂಗಡಿ, ಜಿಲ್ಲಾ ಕಾನಿಪ ಸದಸ್ಯ ಎಸ್.ಎಂ. ಹಿರೇಮಠ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ಸ್ಥಳೀಯ ಸರಕಾರಿ ಪ್ರ.ದ.ಕಾಲೇಜಿನ ಪ್ರಾಚಾರ್ಯ ಡಾ.ಎಂ.ಎನ್.ಸಿದ್ದಲಿಂಗಪ್ಪನವರ, ಸ.ಪ್ರ.ಕಾ.ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹನಮಂತ ಅಪ್ಪಣ್ಣವರ, ಕಾನಿಪ ಗೌರವಾಧ್ಯಕ್ಷ ಉಮೇಶ ಭಿಕ್ಷಾವತಿಮಠ, ತಾಲೂಕು ಕಾನಿಪ ಕಾರ್ಯದರ್ಶಿ ಲಿಂಗರಾಜ ಚಿನಿವಾಲರ, ಹಳೆಯ ವಿದ್ಯಾರ್ಥಿಗಳ ಸಂಘದ ಸಂಯೋಜಕಿ ಕವಿತಾ ಜಂಗವಾಡ ಹಾಜರಿದ್ದರು. ಶಾಸಕ ಭೀಮಸೇನ ಚಿಮ್ಮನಕಟ್ಟಿ, ತಹಸೀಲ್ದಾರ ಕಾವ್ಯಶ್ರೀ ಎಚ್, ಜಿಲ್ಲಾ ಕಾನಿಪ ಅಧ್ಯಕ್ಷ ಆನಂದ ದಲಬಂಜನ, ಮಹೇಶ ಅಂಗಡಿ ಸೇರಿದಂತೆ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.ಇದೇ ವೇಳೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಪದವಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪತ್ರಕರ್ತರನ್ನು ಸನ್ಮಾನಿಸಲಾಯಿತು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಎನ್. ಸಿದ್ದಲಿಂಗಪ್ಪನ್ನವರ ಸ್ವಾಗತಿಸಿದರು. ಎಸ್.ಎಂ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಫಿರೋಜ್ ಬಾಗವಾನ ಕಾರ್ಯಕ್ರಮ ನಿರೂಪಿಸಿದರು. ಹನುಮಂತ ಅಪ್ಪನ್ನವರ ವಂದಿಸಿದರು.