ಮಾಧ್ಯಮಗಳ ಆದ್ಯತೆ ಆಕ್ರೋಶವಲ್ಲ, ಜಾಗೃತಿ

| Published : Nov 04 2025, 01:15 AM IST

ಸಾರಾಂಶ

ಆಕ್ರೋಶ ವ್ಯಕ್ತಪಡಿಸುವುದು ಮಾಧ್ಯಮಗಳ ಆದ್ಯತೆಯಾಗಬಾರದು. ಅನ್ಯಾಯಗಳ ವಿರುದ್ಧ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಅವುಗಳ ಆದ್ಯತೆಯಾಗಬೇಕು.

ಕನ್ನಡಪ್ರಭ ವಾರ್ತೆ, ತುಮಕೂರು ಆಕ್ರೋಶ ವ್ಯಕ್ತಪಡಿಸುವುದು ಮಾಧ್ಯಮಗಳ ಆದ್ಯತೆಯಾಗಬಾರದು. ಅನ್ಯಾಯಗಳ ವಿರುದ್ಧ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಅವುಗಳ ಆದ್ಯತೆಯಾಗಬೇಕು. ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣ ಈ ಚಿಂತನೆಯಲ್ಲಿ ನಂಬಿಕೆಯಿಟ್ಟಿದ್ದರು ಎಂದು ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಸದಸ್ಯ, ಅಸ್ಸಾಂ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿಶ್ರಾಂತ ಸಹಕುಲಪತಿ ಪ್ರೊ. ಕೆ. ವಿ. ನಾಗರಾಜ್‌ ಅಭಿಪ್ರಾಯಪಟ್ಟರು.ತುಮಕೂರು ವಿವಿ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ವಿವಿ ಕಲಾ ಕಾಲೇಜು ಪತ್ರಿಕೋದ್ಯಮ ವಿಭಾಗ ಹಾಗೂ ಮೇಲುಕೋಟೆಯ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಖಾದ್ರಿ ಶಾಮಣ್ಣನವರ ಜನ್ಮಶತಮಾನೋತ್ಸವ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.ಮಾಧ್ಯಮಗಳು ತಮ್ಮ ಸಾಮಾಜಿಕ ಜವಾಬ್ದಾರಿ ಮರೆಯುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಚರ್ಚೆಯಾಗುತ್ತಿದೆ. ಶೇ.70 ರಿಂದ 80 ರಷ್ಟು ಮಾಧ್ಯಮಗಳು ಇಂದು ಕಾರ್ಪೋರೇಟ್‌ ಜಗತ್ತಿನ ಒಡೆತನದಲ್ಲಿವೆ. ಸತ್ಯ ಮರೆಯಾಗಿ ವಾಣಿಜ್ಯ ಹಾಗೂ ರಾಜಕೀಯ ಶಕ್ತಿಗಳೇ ಮೇಲುಗೈ ಸಾಧಿಸುತ್ತಿವೆ. ಇಂದು ನಡೆಯುತ್ತಿರುವುದು ನಿಂದನೆಯ ಪತ್ರಿಕೋದ್ಯಮ ಎಂದು ವಿಷಾದಿಸಿದರು. ಮಾಧ್ಯಮಗಳಿಗೆ ಸೆನ್ಸಾರ್‌ಶಿಪ್ ಬೇಕೇ ಎಂಬ ಚರ್ಚೆಗಳೂ ಇತ್ತೀಚೆಗೆ ನಡೆಯುತ್ತಿವೆ. ಇಂತಹ ಪ್ರಶ್ನೆಗಳು ಏಳುವುದಕ್ಕೆ ಏನು ಕಾರಣ ಎಂದು ಮಾಧ್ಯಮಗಳೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಾಧ್ಯಮಗಳು ಬೇರೆ ಉದ್ದೇಶಕ್ಕೆ ಬಳಕೆಯಾದದ್ದನ್ನು ಇತಿಹಾಸದುದ್ದಕ್ಕೂ ಕಾಣುತ್ತೇವೆ. ಯುದ್ಧದ ಸಂದರ್ಭದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದ್ದ ಯೋಜಿತ ಪ್ರಚಾರ ಇಂದು ಸಾರ್ವತ್ರಿಕರಣಗೊಂಡಿದೆ ಎಂದರು.ಭವಿಷ್ಯದ ಚುನಾವಣೆಗಳನ್ನು ಮುಖ್ಯವಾಹಿನಿಯ ಮಾಧ್ಯಮಗಳು ನಿರ್ಧರಿಸುವ ಕಾಲ ಹೊರಟುಹೋಗಿದೆ. ಮುಂದೆ ನಡೆಯುವುದು ಯೂಟ್ಯೂಬ್ ಚುನಾವಣೆಗಳು. ಉತ್ತರದಾಯಿತ್ವ ಮತ್ತು ವಿಶ್ವಾಸಾರ್ಹತೆಯಿಲ್ಲದ ನಾಗರಿಕ ಪತ್ರಿಕೋದ್ಯಮ ಇಂದು ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಸುದರ್ಶನ್‌ ಚನ್ನಂಗಿಹಳ್ಳಿ, ಪತ್ರಿಕೋದ್ಯಮ ಇಂದು ಹೈಟೆಕ್‌ ಆಗುವುದರೊಂದಿಗೆ ಸಾಕಷ್ಟು ಬದಲಾವಣೆಗೂ ಕಾರಣವಾಗಿದೆ. ಪತ್ರಕರ್ತರು ಕೊರೋನ ಸಮಯದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯವನ್ನು ಮಾಡಿದ್ದಾರೆ. ಕರ್ನಾಟಕದಲ್ಲಿ ಅನೇಕ ಹೊಸ ಹೊಸ ಪತ್ರಿಕೆಗಳು ಬರುತ್ತಿರುವುದು ಸಂತೋಷದ ವಿಷಯ. ಪತ್ರಕರ್ತರು ಕಾಲಕ್ಕೆ ತಕ್ಕಂತೆ ಬದಲಾಗುವುದರೊಂದಿಗೆ ವಸ್ತುನಿಷ್ಠತೆಯನ್ನು ಎತ್ತಿ ಹಿಡಿಯಬೇಕು ಎಂದರು. ಖಾದ್ರಿ ಎಸ್. ಅಚ್ಯುತನ್‌ ಅವರ ಹದ್ದಿನ ಕಣ್ಣು ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಬೆಂಗಳೂರು ಉತ್ತರ ವಿವಿಯ ಕುಲಪತಿ ಪ್ರೊ. ನಿರಂಜನ ವಾನಳ್ಳಿ, ಭಾಷೆಯ ಪರಿಣಾಮಕಾರಿ ಬಳಕೆ, ನಿಷ್ಠುರತೆ ಮತ್ತು ನಿರ್ಭೀತ ಪತ್ರಿಕೋದ್ಯಮಕ್ಕೆ ಖಾದ್ರಿ ಶಾಮಣ್ಣ ಅತ್ಯುತ್ತಮ ನಿದರ್ಶನ. ಪತ್ರಕರ್ತರು ಸಾಮಾಜಿಕ ಹಿತ ಚಿಂತನೆ ಜೊತೆಗೆ ತಮ್ಮ ವೈಯಕ್ತಿಕ ಆರೋಗ್ಯದ ಬಗೆಗೂ ಕಾಳಜಿ ಹೊಂದುವುದು ಅಗತ್ಯ ಎಂದರು. ಪತ್ರಕರ್ತ ಡಾ.ಎಸ್.ನಾಗಣ್ಣ ಮಾತನಾಡಿ, ಪತ್ರಕರ್ತರಾದವರಿಗೆ ಪರಿಣಿತಿ ಮತ್ತು ವಿಸ್ತಾರ ಅಧ್ಯಯನ ಅತ್ಯಗತ್ಯ. ಈ ಹಿಂದೆ ಪ್ರಭಾವಿ ಮಾಧ್ಯಮವಾಗಿ ಮುದ್ರಣ ಮಾಧ್ಯಮ ಇತ್ತು. ಈಗ ಎಲ್ಲಾ ಮಾಧ್ಯಮಗಳು ಅವಲಂಬಿ ಮಾಧ್ಯಮಗಳಾಗಿ ರೂಪುಗೊಂಡಿವೆ. ಅಗತ್ಯಕ್ಕಿಂತ ಹೆಚ್ಚುಗಳಿಕೆ ಮಾಡುವುದನ್ನು ನಿರೀಕ್ಷಿಸಬೇಡಿ, ಮಾಧ್ಯಮ ವೃತ್ತಿಯನ್ನು ಉಳಿಸಿ ಪೋಷಿಸುವುದು ಮುಖ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು, ಕಾಲಕಾಲಕ್ಕೆ ಬದಲಾಗುತ್ತಿರುವ ಭಾಷೆಯ ಅಭ್ಯಾಸ, ಇತಿಹಾಸದ ಸತತ ಅಧ್ಯಯನ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಿರಂತರ ಗಮನ ಇಟ್ಟುಕೊಳ್ಳುವುದರಿಂದ ಮಾಧ್ಯಮ ವಿದ್ಯಾರ್ಥಿಗಳು ಯಶಸ್ಸು ಪಡೆಯಬಹುದು. ಖಾದ್ರಿ ಶಾಮಣ್ಣನವರಂಥ ಪತ್ರಕರ್ತರು ಹೊಸಪೀಳಿಗೆಗೆ ಮಾದರಿಯಾಗಬೇಕು ಎಂದರು. ಖಾದ್ರಿ ಶ್ಯಾಮಣ್ಣ ಟ್ರಸ್ಟ್ ಅಧ್ಯಕ್ಷ ಎಚ್.ಆರ್.ಶ್ರೀಶ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂವಾದ ಗೋಷ್ಠಿಯಲ್ಲಿ ಪತ್ರಕರ್ತರಾದ ಚೇತನ್ ನಾಡಿಗೇರ್, ಕಟ್ಟೆ ಗುರುರಾಜ್, ವಿಜಯಕುಮಾರ ಚಂದರಗಿ ವಿಚಾರ ಮಾಧ್ಯಮಗಳ ವರ್ತಮಾನ ಮತ್ತು ಭವಿಷ್ಯ ಕುರಿತು ವಿಚಾರ ಮಂಡಿಸಿದರು.ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ದಾಕ್ಷಾಯಣಿ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಭ ಕೆ.ವಿ. ಸ್ವಾಗತಿಸಿದರು. ಖಾದ್ರಿ ಶಾಮಣ್ಣ ಟ್ರಸ್ಟ್ ಕಾರ್ಯದರ್ಶಿ ಸ್ಮಿತಾ ವೆಂಕಟೇಶ್ ವಂದಿಸಿದರು.ಡಾ. ಪೃಥ್ವಿರಾಜ ಟಿ. ನಿರೂಪಿಸಿದರು.