ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮತದಾನ ಪ್ರಮಾಣವನ್ನು ಹೆಚ್ಚುಸುವಲ್ಲಿ ಮಾಧ್ಯಮ ಪಾತ್ರ ಪ್ರಮುಖವಾಗಿದ್ದು, ಚುನಾವಣೆ ಸಂದರ್ಭದಲ್ಲಿ ಮಾಧ್ಯಮಗಳು ಒಂದು ಪಕ್ಷ ಅಥವಾ ಒಬ್ಬ ಅಭ್ಯರ್ಥಿಗೆ ಹೆಚ್ಚು ಒತ್ತು ನೀಡದೆ ಎಲ್ಲ ಅಭ್ಯರ್ಥಿಗಳಿಗೆ ಸಮಾನ ಆದ್ಯತೆ ನೀಡುವ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.ಇಲ್ಲಿನ ಪತ್ರಿಕಾಭವನದಲ್ಲಿ ಬುಧವಾರ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಲೋಕಸಭೆ ಚುನಾವಣೆ ಹಿನ್ನೆಲೆ ಜಿಲ್ಲೆಯ ಎಲ್ಲ ಸ್ಥಳಗಳಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಸ್ವೀಪ್ ವತಿಯಿಂದ ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿರುವ ಪ್ರದೇಶ ಗುರುತಿಸಿ, ಅಲ್ಲಿ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಜನ ಆಮಿಷಕ್ಕೆ ಒಳಗಾಗುವಂತೆ ಅಥವಾ ಧರ್ಮ ಆಧಾರವಾಗಿಟ್ಟುಕೊಂಡು ಸುದ್ದಿ ಬಿತ್ತರಿಸದೇ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಮಾಧ್ಯಮದಲ್ಲಿ ಪೇಯ್ಡ್ ನ್ಯೂಸ್, ಜಾಹಿರಾತುಗಳ ಮೇಲೆ ನಿಗಾವಹಿಸಲಾಗಿದೆ ಎಂದು ತಿಳಿಸಿದರು.ಯುವ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲಾ ಐಕಾನ್‍ಗಳನ್ನು ಮುಂದಿಟ್ಟುಕೊಂಡು ಮತದಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಜಿಲ್ಲೆ ಕೆಲ ಹಳ್ಳಿಗಳಲ್ಲಿ ಮತದಾನ ಬಹಿಷ್ಕಾರ ಮಾತುಗಳು ಕೇಳಿಬರುತ್ತಿವೆ. ಬಹಿಷ್ಕಾರಕ್ಕೆ ಕರೆಕೊಟ್ಟಿರುವ ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರ ಗ್ರಾಮಸ್ಥರ ಜೊತೆ ಮಾತುಕತೆ ಮಾಡಿ ಮತದಾನಕ್ಕೆ ಮನವೊಲಿಸಲಾಗಿದೆ. ಹೊಸನಗರದ ಬಳಿಯೂ ಇಂಥ ಬಹಿಷ್ಕಾರದ ಮಾತು ತಿಳಿದು ಬಂದಿದೆ. ತೀರಾ ಮೂಲಭೂತ ಸಮಸ್ಯೆಗಳು ಇದ್ದೇ ಇವೆ. ಜನರ ಜೊತೆ ಮಾತನಾಡಿ ಅದನ್ನು ಬಗೆಹರಿಸಲಾಗುವುದು ಎಂದು ಹೇಳಿದರು.
ಈಗಾಗಲೇ 60ಕ್ಕಿಂತ ಹೆಚ್ಚಿನ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಧರ್ಮ ಆಧಾರಿತ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿವೆ. ಆಂಬುಲೆನ್ಸ್‌ಗಳಲ್ಲಿ ಚುನಾವಣಾ ಹಣ ಸಾಗಾಟ ಮಾಡದಂತೆ ಸೂಕ್ತ ಎಚ್ಚರಿಕೆಯನ್ನು ಸಿಬ್ಬಂದಿಗೆ ನೀಡಲಾಗಿದೆ. ಇಲ್ಲಿಯವರೆಗೆ ₹17 ಕೋಟಿಯಷ್ಟು ಹಣ, ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದು. ಸಿಬ್ಬಂದಿ ನಿಗಾ ವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಪ್ರಮುಖ ಸವಾಲಿನ ಸಮಸ್ಯೆ ಚುನಾವಣೆಗೆ ಸಂಬಂಧಿಸಿ ಯಾವುದೂ ಇಲ್ಲ. ಎಲ್ಲ ಹಂತದಲ್ಲೂ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಬರದ ಮಧ್ಯೆ ಚುನಾವಣೆ ಎದುರಾಗಿರುವುದೇ ದೊಡ್ಡ ಸವಾಲಾಗಿದೆ. ಬರ ನಿರ್ವಹಣೆಗೆ 380 ಹಳ್ಳಿಗಳಲ್ಲಿ ಯೋಜನೆ ರೂಪಿಸಲಾಗಿದೆ. ಸುಮಾರು 14 ಹಳ್ಳಿಗಳಲ್ಲಿ ತೀವ್ರ ಬರ ಇದೆ. ಇಲ್ಲಿ ನೀರಿನ ಟ್ಯಾಂಕ್ ಮೂಲಕ ಕುಡಿಯವ ನೀರಿನ ಸಮಸ್ಯೆ ಬಗಹರಿಸಲಾಗುತ್ತಿದೆ. ಇನ್ನೂ ಹೊಸ ಬೋರ್‌ವೆಲ್‌ಗೆ ಬೇಡಿಕೆ ಹೆಚ್ಚಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಗುರುದತ್ತ ಹೆಗಡೆ ಒಳ್ಳೆಯ ಹೆಸರು ಮಾಡಿರುವ ಜಿಲ್ಲಾಧಿಕಾರಿ ಶಿವಮೊಗ್ಗದಲ್ಲೂ ಜನಮಾನಸದಲ್ಲಿ ಉಳಿಯಬಲ್ಲ ವ್ಯಕ್ತಿತ್ವ ಅವರದು. ಅವರಿಗೆ ಪತ್ರಿಕಾ ಬಳಗದ ಸಹಕಾರ ಸದಾ ಇರುತ್ತದೆ ಎಂದರು.ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಪ್ರೆಸ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಈ ಬಾರಿ 17.5 ಲಕ್ಷ ಮತದಾರರಿದ್ದಾರೆ. ಇದರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದ್ದು, 40 ಸಾವಿರ ಮಂದಿ ಹೊಸ ಮತದಾರರಿದ್ದಾರೆ. ಹೆಚ್ಚು ಮಹಿಳಾ ಮತದಾರರಿರುವ ಕಡೆ ಸಖಿ ಮತಕೇಂದ್ರಗಳು ತೆರೆಯಲಾಗುವುದು. ಲೋಕಸಭಾ ಚುನಾವಣೆ ಕ್ಷೇತ್ರದ ವ್ಯಾಪ್ತಿಗೆ ಬರುವ 8 ತಾಲೂಕಿನಲ್ಲಿ ತಲಾ ಒಂದರಂತೆ ಸಖಿ ಮತಕೇಂದ್ರಗಳನ್ನು ತೆರಲಾಗುತ್ತಿದೆ. ಇನ್ನು ಮತದಾನ ಪ್ರಕ್ರಿಯೆ ಸುವ್ಯವಸ್ಥೆವಾಗಿ ನಡೆಸುವ ದೃಷ್ಟಿಯಿಂದ ಹೆಚ್ಚು ಅಪರಾಧ ಕೃತ್ಯದಲ್ಲಿ ಭಾಗಿರುವ 15 ಮಂದಿ ಗಡಿಪಾರು ಮಾಡುವ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಇರಬಹುದಾದರೂ ಚುನಾವಣೆಗೆ ಇದರ ಪರಿಣಾಮ ಬಿದ್ದಿಲ್ಲ.ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ, ಶಿವಮೊಗ್ಗ.