ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ
ಶಿಕ್ಷಣ-ರಂಜನೆ-ಮಾಹಿತಿ ಜೊತೆಗೆ ಪತ್ರಿಕೆಗಳಲ್ಲಿ ಜನಪರ ಆಶಯವೂ ಮುಖ್ಯವಾಗಬೇಕು. ಮಾಧ್ಯಮಗಳು ಎಂದಿಗೂ ಜನಪರ ಆಶಯವನ್ನು ಕಡೆಗಣಿಸಬಾರದು. ಇಂದು ಜನರಲ್ಲಿ ವಿವೇಕ ಮತ್ತು ವಿಶ್ವಾಸ ಮೂಡಿಸುವ ಪತ್ರಿಕೋದ್ಯಮ ಅಗತ್ಯವಿದೆ ಎಂದು ಹೊನ್ನಾವರ ನಾಗರಿಕ ಪತ್ರಿಕೆ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಹೇಳಿದರು.ನಗರದ ಭೂಮಿಕಾ ವೇದಿಕೆ ವತಿಯಿಂದ ತರೀಕೆರೆ ರಸ್ತೆ, ನಯನ ಆಸ್ಪತ್ರೆ, ಅನಸೂಯಮ್ಮ ರಾಮಚಂದ್ರ ಐತಾಳ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಕವಲುದಾರಿಯಲ್ಲಿ ಪತ್ರಿಕೋದ್ಯಮ’ಎಂಬ ವಿಷಯ ಕುರಿತು ಮಾತನಾಡಿದರು.
ಇಂದು ವ್ಯವಹಾರಿಕ ಜಗತ್ತಿನಲ್ಲಿ ಪತ್ರಕರ್ತ ಕಳೆದು ಹೋಗುತ್ತಿದ್ದಾನೆ. ಪತ್ರಕರ್ತರು ಬೆಳಕಿನ ಬೀಜ ಬಿತ್ತುವವರಾಗಬೇಕು, ವಿಷ ಬೀಜ ಬಿತ್ತುವವರಾಗಬಾರದು. ಸಮಾಜದಲ್ಲಿ ತನ್ನ ಜವಾಬ್ದಾರಿಗಳನ್ನು ಅರಿತು ಮುನ್ನಡೆಯಬೇಕು ಎಂದರು.ನಗರದ ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷರಾದ ಹಿರಿಯ ಪತ್ರಕರ್ತ ಕಣ್ಣಪ್ಪ ಮಾತನಾಡಿ, ದೃಶ್ಯ ಮಾಧ್ಯಮಗಳ ಆಗಮನ ಸಂದರ್ಭದಲ್ಲಿ ಮುದ್ರಣ ಮಾಧ್ಯಮಗಳು ಆತಂಕದ ಪರಿಸ್ಥಿತಿ ಎದುರಿಸಿದ್ದವು. ಆ ಪರಿಸ್ಥಿತಿ ಈಗಲೂ ಇದೆ. ಆದರೂ ಸಮಸ್ಯೆ ಸವಾಲುಗಳ ನಡುವೆಯೂ ಮುನ್ನಡೆಯುತ್ತಿರುವ ಪತ್ರಿಕೋದ್ಯಮಕ್ಕೆ ಜನರ ಬೆಂಬಲ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್.ಭಟ್ ಮಾತನಾಡಿ, ಪತ್ರಿಕೆಗಳು ಕೇವಲ ಸುದ್ದಿಯ ಸಾಧನವಲ್ಲ, ಜ್ಞಾನದ ಪುಸ್ತಕ ಗಳಿದ್ದಂತೆ. ಮಾಧ್ಯಮ ಕ್ಷೇತ್ರ ೧೮೦ ವರ್ಷ ಇತಿಹಾಸವಿರುವ ಸೃಜನಶೀಲ ಮತ್ತು ಕ್ರಿಯಾಶೀಲವಾದ ಕ್ಷೇತ್ರ. ಮಾಧ್ಯಮದ ಮಹತ್ವ ಜನರಿಗೂ ಮನದಟ್ಟಾಗುವ ಅಗತ್ಯವಿದೆ ಎಂದರು.ವೇದಿಕೆ ವತಿಯಿಂದ ಹಿರಿಯ ಪತ್ರಕರ್ತ ಕಣ್ಣಪ್ಪ ಅವರು ಪತ್ರಿಕಾ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆ ಅಧ್ಯಕ್ಷ ಡಾ.ಕೃಷ್ಣ ಎಸ್.ಭಟ್ ಅವರು ನಗರದ ಪತ್ರಿಕಾ ಭವನ ಟ್ರಸ್ಟ್ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ನೆರವು ನೀಡಿದ ಹಿನ್ನಲೆಯಲ್ಲಿ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು.
ವೇದಿಕೆ ಕಾರ್ಯದರ್ಶಿ ಡಾ.ವೀಣಾಭಟ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್ ಮತ್ತು ಕೆ.ಆನಂದ್ ಗಣ್ಯರನ್ನು ಪರಿಚಯಿಸಿದರು. ಶಾರದಾ ಶ್ರೀನಿವಾಸ್ ನಿರೂಪಿಸಿ, ಕೋಶಾಧ್ಯಕ್ಷ ಮುನಿರಾಜ್ ವಂದಿಸಿದರು.