ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಧ್ಯಮಗಳು ಸಾಮಾಜಿಕ ಕಳಕಳಿ ಹೊಂದಿ ಸಮಾಜವನ್ನು ಸರಿ ದಾರಿಗೆ ಕೊಂಡೊಯ್ಯಲು ನೈಜ ವರದಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು.ಶುಕ್ರವಾರ ಕಬ್ಬನ್ ಉದ್ಯಾನದಲ್ಲಿರುವ ಪ್ರೆಸ್‌ಕ್ಲಬ್ ಆವರಣದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ವಿವಿಧ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಸಂಪಾದಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಇಂದು ಮಾಧ್ಯಮ ಕ್ಷೇತ್ರ ನಾಗಾಲೋಟದಲ್ಲಿ ಬೆಳೆಯುತ್ತಿದ್ದು, ತಂತ್ರಜ್ಞಾನಕ್ಕೆ ಹೊರಳಿಕೊಳ್ಳುತ್ತಿದೆ. ಆದರೆ, ಇದರ ನಡುವೆ ಮಾನವೀಯ ಕಳಕಳಿಯುಳ್ಳ ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಸುದ್ದಿಗಳ ಕಡೆಗೆ ಗಮನ ಹರಿಸಬೇಕಿದೆ. ಸಮಾಜದ ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಗಮನ ಹರಿಸಬೇಕು. ಮಾಧ್ಯಮಗಳು ಇಲ್ಲದಿದ್ದರೆ ಸರ್ಕಾರಗಳು, ಜನಪ್ರತಿನಿಧಿಗಳು ಮಾಡುವ ಯಾವುದೇ ಕೆಲಸ ಜನರನ್ನು ತಲುಪುವುದಿಲ್ಲ. ಮಾಧ್ಯಮಗಳಲ್ಲಿ ಪತ್ರಕರ್ತರ ಕೆಲಸ ಶ್ಲಾಘನೀಯವಾದದ್ದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮದಲ್ಲಿ ಹತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿ ಪತ್ರಿಕೆಗಳು, ಚಾನಲ್‌ಗಳ ಜವಾಬ್ದಾರಿ ನಿರ್ವಹಿಸಿ ಸನ್ಮಾನ ಪಡೆದ ಎಲ್ಲ ಸಂಪಾದಕರಿಗೆ ಅಭಿನಂದನೆಗಳನ್ನು ತಿಳಿಸಿದರು.ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಬಿಜೆಪಿ ಬೆಂಗಳೂರು ಕೇಂದ್ರ ವಿಭಾಗದ ಅಧ್ಯಕ್ಷ ಸಪ್ತಗಿರಿಗೌಡ, ಡಿಎಸ್ ಮ್ಯಾಕ್ಸ್ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ.ದಯಾನಂದ್, ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಉಪಸ್ಥಿತರಿದ್ದರು.
ಸನ್ಮಾನಗೊಂಡ ಸಂಪಾದಕರು:ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಕೆಲವು ಪತ್ರಿಕೆಗಳ ಸಂಪಾದಕರು, ಸುದ್ದಿವಾಹಿನಿಗಳ ಸಂಪಾದಕರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಸಂಪಾದಕರಾದ ರವಿಶಂಕರ್ ಕೆ. ಭಟ್ (ಉದಯವಾಣಿ), ಕೆ.ಎನ್.ಚನ್ನೇಗೌಡ(ವಿಜಯವಾಣಿ), ಮಹಾಬಲೇಶ್ವರ್ ವಿ.ಭಟ್( ಸಂಯುಕ್ತ ಕರ್ನಾಟಕ), ಸುದರ್ಶನ್ ಚನ್ನಂಗಿಹಳ್ಳಿ (ವಿಜಯ ಕರ್ನಾಟಕ), ರವೀಂದ್ರ ಭಟ್ (ಪ್ರಜಾವಾಣಿ), ವಿನಾಯಕ್ ಭಟ್ (ಹೊಸ ದಿಗಂತ), ಕೆ.ವಿ.ಸುಬ್ರಹ್ಮಣ್ಯ (ಡೆಕ್ಕನ್ ಹೆರಾಲ್ಡ್), ಪ್ರಕಾಶ್ ರಾಮಜೋಗಿಹಳ್ಳಿ (ವಾರ್ತಾಭಾರತಿ), ಎಸ್.ಭಾಗೇಶ್ರೀ (ದಿ ಹಿಂದೂ), ಅಜಿತ್ ಹನುಮಕ್ಕನವರ್ (ಏಷ್ಯಾನೆಟ್ ಸುವರ್ಣ ನ್ಯೂಸ್), ಎಸ್.ರವಿಕುಮಾರ್ (ನ್ಯೂಸ್ ಫಸ್ಟ್ ಕನ್ನಡ), ರಾಕೇಶ್ ಶೆಟ್ಟಿ(ಪವರ್ ಟಿವಿ), ಎ.ಎಸ್. ರಮಾಕಾಂತ್ (ಟಿವಿ 5ಕನ್ನಡ), ಎ.ಹರಿಪ್ರಸಾದ್ (ನ್ಯೂಸ್ 18 ಕನ್ನಡ), ಡಿ.ಎಸ್.ಶಿವರುದ್ರಪ್ಪ (ರಾಜ್ ನ್ಯೂಸ್) ಅವರನ್ನು ಸನ್ಮಾನಿಸಲಾಯಿತು.