ಮಾಧ್ಯಮಗಳು ವಾಸ್ತವ ವಿಚಾರ ವಿಸ್ತರಿಸಬೇಕು: ಪಿ.ಎಂ.ನರೇಂದ್ರಸ್ವಾಮಿ

| Published : Jul 30 2024, 12:37 AM IST

ಮಾಧ್ಯಮಗಳು ವಾಸ್ತವ ವಿಚಾರ ವಿಸ್ತರಿಸಬೇಕು: ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಾಂಗ, ನ್ಯಾಯಾಂಗ ಶಾಸಕಾಂಗ ನಂತರ 4ನೇ ಆಧಾರ ಸ್ಥಂಬ ಪತ್ರಿಕಾರಂಗವು ವಿದ್ಯುನ್ಮಾನ ಬಂದ ಮೇಲೆ ಪೈಪೋಟಿಗಿಳಿದು ಟಿಆರ್ ಪಿಗಾಗಿ ವಾಸ್ತವ ವಿಚಾರಗಳು ಮರೆಯಾಗುತ್ತಿವೆ. ಪತ್ರಕರ್ತರು ಸಂಕುಚಿತ ಮನಸ್ಥಿತಿ ಬಿಟ್ಟು, ಸಮಾಜದ ಪರವಾಗಿ ನಿಲ್ಲಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ- ಪತ್ರಿಕಾರಂಗ ಸಮಾಜದಲ್ಲಿನ ಸಮಸ್ಯೆಗಳು, ಮಾನವನ ಬದುಕಿಗೆ ಬೇಕಿರುವ ವಿಷಯಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಲಹೆ ನೀಡಿದರು.

ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಾಧ್ಯಮಗಳಲ್ಲಿ ಅಗತ್ಯವಲ್ಲದ ವಿಚಾರಗಳು ಹೆಚ್ಚು ಚರ್ಚೆಯಾಗುತ್ತಿವೆ. ಈ ಬಗ್ಗೆ ವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ ಎಂದರು.

ಕಾರ್ಯಾಂಗ, ನ್ಯಾಯಾಂಗ ಶಾಸಕಾಂಗ ನಂತರ 4ನೇ ಆಧಾರ ಸ್ಥಂಬ ಪತ್ರಿಕಾರಂಗವು ವಿದ್ಯುನ್ಮಾನ ಬಂದ ಮೇಲೆ ಪೈಪೋಟಿಗಿಳಿದು ಟಿಆರ್ ಪಿಗಾಗಿ ವಾಸ್ತವ ವಿಚಾರಗಳು ಮರೆಯಾಗುತ್ತಿವೆ. ಪತ್ರಕರ್ತರು ಸಂಕುಚಿತ ಮನಸ್ಥಿತಿ ಬಿಟ್ಟು, ಸಮಾಜದ ಪರವಾಗಿ ನಿಲ್ಲಬೇಕು ಎಂದರು.

ಆಧುನಿಕ ಯುಗದಲ್ಲಿ ಮನುಷ್ಯನ ಆಸೆ ಎಲ್ಲೆ ಮೀರಿದೆ. ಸ್ವಾರ್ಥ, ದುರಾಸೆ, ದರ್ಪ, ದೌರ್ಜನ್ಯ ಹೆಚ್ಚಾಗಿ ಮಾನವೀಯತೆ ಮರೆಯುತ್ತಿದ್ದಾರೆ. ಪ್ರತಿಯೊಂದನ್ನು ಅನುಮಾನಿಸಿ ನೋಡುವಂತಹ ಪ್ರವೃತ್ತಿ ಕಾಣುತ್ತಿದ್ದೇವೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಸಮಾಜದಲ್ಲಿ ವಿವಿಧತೆಯಲ್ಲಿ ಏಕತೆ ಮಾಯವಾಗುತ್ತಿವೆ. ಮಹನೀಯರ ತತ್ವ, ಸಿದ್ಧಾಂತಗಳ ಬಗ್ಗೆ ಬರೀ ಮಾತನಾಡುತ್ತಿದ್ದೇವೆ ಹೊರತು ಪಾಲನೆ ಮಾಡುತ್ತಿಲ್ಲ ಎಂದು ವಿಷಾದಿಸಿದರು.

ಮಂಡ್ಯ ಜಿಲ್ಲೆಯಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಯುವಕರು ತಂದೆ, ತಾಯಿ ಬಿಟ್ಟು ತಮ್ಮ ಬದುಕುಕಟ್ಟಿಕೊಳ್ಳಲು ಪಟ್ಟಣ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಹಳ್ಳಿಗಳಲ್ಲಿ ಸಂಬಂಧಗಳು ದೂರವಾಗುತ್ತಿವೆ. ಪ್ರೀತಿ, ವಿಶ್ವಾಸ, ನಂಬಿಕೆಗಳು ಕಡಿಮೆಯಾಗುತ್ತಿವೆ. ಈ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ವಾಸ್ತವ ಜಗತ್ತಿನ ಆಚೆಗೆ ಬಂದು ನಾವು ಯಾರು ಶಾಶ್ವತವಲ್ಲ ಎನ್ನುವುದನ್ನು ಅರಿತು ಮಾಧ್ಯಮಗಳು, ಪತ್ರಿಕೆಗಳು ತಪ್ಪುಗಳನ್ನು ತಿದ್ದುವ ಕೆಲಸ ಮಾಡಬೇಕು. ಸಮಸ್ಯೆಗಳಿಗೆ ಬೆಳಕು ಚೆಲ್ಲಿ ಸಾರ್ವಜನಿಕರು, ಸರ್ಕಾರ ಹಾಗೂ ಜನಪ್ರತಿನಿಧಿಗಳ ಸಂರ್ಪಕ ಸೇತುವೆಯಾಗಿ ಕೆಲಸ ನಿರ್ವಹಿಸಬೇಕೆಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತಿಕೆರೆ ಜಯರಾಮು ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಸುದ್ದಿ ಮಾಡುವ ಪತ್ರಕರ್ತರು ಆರೋಗ್ಯದ ಕಡೆಗೆ ಗಮನ ನೀಡಬೇಕು. ಮಳವಳ್ಳಿ ತಾಲೂಕಿನಲ್ಲಿ ಸಂಘಕ್ಕೆ ಸ್ವಂತ ನಿವೇಶನವಿದೆ. ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳ ಸಹಕಾರದಲ್ಲಿ ತಾಲೂಕು ಪದಾಧಿಕಾರಿಗಳು ಕಟ್ಟಡ ಕಟ್ಟಲು ಮುಂದಾಗಬೇಕು. ಇದಕ್ಕೆ ಜಿಲ್ಲಾ ಮತ್ತು ರಾಜ್ಯ ಸಂಘ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರೆಗೋಡು ಮಾತನಾಡಿ, ಇತ್ತೀಚೆಗೆ ಜಿಲ್ಲೆಯ ಇಬ್ಬರು ಪತ್ರಕರ್ತರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಸರ್ಕಾರ ಪತ್ರಕರ್ತರ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡಬೇಕು, ಶಾಸಕರು ಪರಿಹಾರ ನೀಡುವಂತೆ ಶಿಫಾರಸ್ಸು ನೀಡಬೇಕೆಂದು ಮನವಿ ಮಾಡಿದರು.

ಸಮಾರಂಭದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಪಘಾತದಲ್ಲಿ ನಿಧನರಾದ ಇಬ್ಬರು ಪತ್ರಕರ್ತರಿಗೆ ಸಂತಾಪ ಸೂಚಿಸಲಾಯಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಸಿದ್ದರಾಜು ಮಾದಹಳ್ಳಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ್, ರಾಜ್ಯ ಸಮಿತಿ ಸದಸ್ಯರಾದ ಸಿ.ಎನ್.ಮಂಜುನಾಥ್, ಜೆ.ಎಂ.ಬಾಲಕೃಷ್ಣ, ಖಜಾಂಚಿ ನಂಜುಂಡಸ್ವಾಮಿ, ಕಾರ್ಯದರ್ಶಿ ಬಿ.ಎಸ್ ಜಯರಾಮು, ಚಿನಕುರುಳಿ ಲೊಕೇಶ್, ಮಾಜಿ ಜಿಲ್ಲಾಧ್ಯಕ್ಷ ಕೆ.ಸಿ ಮಂಜುನಾಥ್, ಜಿಲ್ಲಾ ನಿರ್ದೇಶಕ ಎಚ್ ಉಮೇಶ್ ಬೆಳಕವಾಡಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಬಿ.ಪುಟ್ಟಬಸವಯ್ಯ, ಮುಖಂಡ ವೇದಮೂರ್ತಿ, ರೋಹಿತ್‌ಗೌಡ, ಶ್ರೀನಿವಾಸ್, ಟಿ.ಎಂ.ಪ್ರಕಾಶ್, ಚಿಕ್ಕಲಿಂಗಯ್ಯ ಸೇರಿದಂತೆ ಹಲವರು ಇದ್ದರು.