ಸಾರಾಂಶ
ಮಧ್ಯಸ್ಥಿಗಾರಿಕೆ ಒಂದು ಕೌಶಲ್ಯ. ಕಾನೂನು ಚೌಕಟ್ಟಿನಲ್ಲಿ ಪ್ರಕರಣಗಳನ್ನು ಸುಗಮವಾಗಿ ಪರಿಹರಿಸಬೇಕು. ಜನರ ಮಧ್ಯದಲ್ಲಿರುವ ವಿವಾದಗಳನ್ನು ಸೌರ್ಹಾದಯುತವಾಗಿ ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಮಧ್ಯಸ್ಥ ನ್ಯಾಯವಾದಿಗಳ ಪಾತ್ರ ಮಹತ್ವದ್ದಾಗಿದೆ.
ಧಾರವಾಡ:
ನ್ಯಾಯದಾನದ ವಿಳಂಬತೆ ತಪ್ಪಿಸಲು ಮತ್ತು ನ್ಯಾಯಾಲಯಗಳ ಕಾರ್ಯ ಒತ್ತಡ ಕಡಿಮೆ ಮಾಡುವಲ್ಲಿ ಮಧ್ಯಸ್ಥಿಕೆ ಕೇಂದ್ರಗಳು ಪರಿಣಾಮಕಾರಿ ಪಾತ್ರ ನಿರ್ವಹಿಸುತ್ತವೆ. ನ್ಯಾಯಾಧೀಶರು, ವಕೀಲರು ಕಕ್ಷಿದಾರರಿಗೆ ತ್ವರಿತ ನ್ಯಾಯಾಲಯ, ಲೋಕ ಅದಾಲತ್ ಮತ್ತು ಮಧ್ಯಸ್ಥಿಕೆ ಕೇಂದ್ರಗಳ ಬಗ್ಗೆ ಅರಿವು ಮೂಡಿಸಬೇಕೆಂದು ಧಾರವಾಡ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶೆ ಬಿ.ಜಿ. ರಮಾ ಹೇಳಿದರು.ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ಕಾನೂನು ಸೇವೆಗಳ ಪ್ರಾಧಿಕಾರ, ಹೈಕೋರ್ಟ್ ಕಾನೂನು ಸೇವಾ ಸಮಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ಗದಗ ಮತ್ತು ಧಾರವಾಡ ಜಿಲ್ಲೆಗಳ ವಕೀಲರಿಗೆ ಮಧ್ಯಸ್ಥಿಗಾರಿಕೆ ಕುರಿತು ಪುನರ್ ಮನನದ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಮಧ್ಯಸ್ಥಿಗಾರಿಕೆ ಒಂದು ಕೌಶಲ್ಯ. ಕಾನೂನು ಚೌಕಟ್ಟಿನಲ್ಲಿ ಪ್ರಕರಣಗಳನ್ನು ಸುಗಮವಾಗಿ ಪರಿಹರಿಸಬೇಕು. ಜನರ ಮಧ್ಯದಲ್ಲಿರುವ ವಿವಾದಗಳನ್ನು ಸೌರ್ಹಾದಯುತವಾಗಿ ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಮಧ್ಯಸ್ಥ ನ್ಯಾಯವಾದಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ನ್ಯಾಯದಾನದಲ್ಲಿ ವಿಳಂಬವಾಗದಂತೆ ಗಮನಹರಿಸಲು ಜನತಾ ನ್ಯಾಯಾಲಯ, ತ್ವರಿತ ನ್ಯಾಯಾಲಯ ಮತ್ತು ಮಧ್ಯಸ್ಥಿಗಾರಿಕೆ ಕೇಂದ್ರಗಳನ್ನು ಕಾನೂನು ಚೌಕಟ್ಟಿನಲ್ಲಿ ನ್ಯಾಯದಾನ ವ್ಯವಸ್ಥೆ ಮಾಡಿದೆ ಎಂದರು.ಕರ್ನಾಟಕ ಬಾರ್ ಕೌನ್ಸಿಲ್ ಸದಸ್ಯ ವಿ.ಡಿ. ಕಾಮರಡ್ಡಿ ಹಾಗೂ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ ಮಾತನಾಡಿದರು. ರಾಜ್ಯ ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷ ಆನಂದಕುಮಾರ ಮಗದುಮ್ ಕಾರ್ಯಾಗಾರ ಉದ್ಘಾಟನೆ ನೆರವೇರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರು ಮಧ್ಯಸ್ಥಿಕೆಗಾರ ಕೇಂದ್ರದ ಲಕ್ಷ್ಮೀಶರಾವ್ ಮತ್ತು ಬಿನಾ ದೇವರಾಜ್ ವೇದಿಕೆಯಲ್ಲಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಸ್ವಾಗತಿಸಿದರು. ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದ ದೀಪಕ ವಾಳದ ನಿರೂಪಿಸಿದರು. ಹಿರಿಯ ನ್ಯಾಯವಾದಿ ವೈ.ಪಿ. ಮದ್ನೂರ ವಂದಿಸಿದರು.