ಕನ್ನಡಪ್ರಭ ವಾರ್ತೆ ಮಂಡ್ಯ
ನ್ಯಾಯಾಲಯಗಳಲ್ಲಿ ದೀರ್ಘಕಾಲದಿಂದ ಬಾಕಿ ಉಳಿಯುವ ವ್ಯಾಜ್ಯಗಳಿಗೆ ಪರ್ಯಾಯವಾಗಿ ಮಧ್ಯಸ್ಥಿಕೆ ವ್ಯವಸ್ಥೆ ಪರಿಣಾಮಕಾರಿ ಹಾಗೂ ಜನಸ್ನೇಹಿ ಪರಿಹಾರ ಮಾರ್ಗ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜೆ.ಎನ್.ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಎಡಿಆರ್ ಕಟ್ಟಡದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ ವತಿಯಿಂದ ಮಂಡ್ಯ, ರಾಮನಗರ ಮತ್ತು ಹಾಸನ ಜಿಲ್ಲೆಗಳ ನೂತನ ಮಧ್ಯಸ್ಥಿಕೆದಾರರ 40 ಗಂಟೆಗಳ ಮಧ್ಯಸ್ಥಿಕೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಸೌಹಾರ್ದಯುತ ವಿವಾದ ಪರಿಹಾರದ ಸಂಸ್ಕೃತಿಯನ್ನು ಬೆಳೆಸಲು ಮಧ್ಯಸ್ಥಿಕೆ ತರಬೇತಿಗಳು ಮಹತ್ವದ ಪಾತ್ರ ವಹಿಸುತ್ತಿವೆ. ಮಧ್ಯಸ್ಥಿಕೆ ಪ್ರಕ್ರಿಯೆಯು ನ್ಯಾಯಾಲಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಜೊತೆಗೆ, ವಿವಾದದಲ್ಲಿರುವ ಎರಡೂ ಕಡೆಯವರ ನಡುವೆ ಪರಸ್ಪರ ವಿಶ್ವಾಸ, ಸಹಕಾರ ಮತ್ತು ಬಾಂಧವ್ಯ ಉಳಿಸಿಕೊಂಡೇ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನೆರವಾಗುತ್ತದೆ ಎಂದು ತಿಳಿಸಿದರು.ಕಾರ್ಯಾಗಾರದಲ್ಲಿ ಮಧ್ಯಸ್ಥಿಕೆಯ ತತ್ವಗಳು, ಪರಿಣಾಮಕಾರಿ ಸಂವಹನ ಕೌಶಲ್ಯ, ಸಮಾಲೋಚನಾ ವಿಧಾನಗಳು, ವಿವಾದ ನಿರ್ವಹಣಾ ತಂತ್ರಗಳು, ನೈತಿಕ ಮೌಲ್ಯಗಳು ಹಾಗೂ ಪ್ರಾಯೋಗಿಕ ಮಾದರಿ ಪ್ರಕರಣಗಳ ಮೂಲಕ ಸಮಗ್ರ ತರಬೇತಿ ನೀಡಲಾಗುತ್ತಿದೆ. ನ್ಯಾಯಾಧೀಶರು, ವಕೀಲರು, ಕಾನೂನು ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ವೃತ್ತಿಪರರು ಭಾಗವಹಿಸಿ ಮಧ್ಯಸ್ಥಿಕೆ ಪ್ರಕ್ರಿಯೆಯ ಸೂಕ್ಷ್ಮ ಅಂಶಗಳನ್ನು ಅರಿತುಕೊಳ್ಳಲಿದ್ದಾರೆ ಎಂದರು.
ಮಧ್ಯಸ್ಥಿಕೆ ಮೂಲಕ ಪ್ರಕರಣಗಳನ್ನು ತ್ವರಿತವಾಗಿ, ಕಡಿಮೆ ವೆಚ್ಚದಲ್ಲಿ ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ ಇತ್ಯರ್ಥಗೊಳಿಸಲು ಸಾಧ್ಯವಾಗುತ್ತದೆ. ಇದರಿಂದ ನ್ಯಾಯಾಂಗ ವ್ಯವಸ್ಥೆ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ ಮಾತನಾಡಿ, ಐದು ದಿನಗಳ ತರಬೇತಿ ಕಾರ್ಯಾಗಾರವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ತರಬೇತಿ ಮೂಲಕ ಪರಿಣಾಮಕಾರಿ ಮಧ್ಯಸ್ಥಿಕೆದಾರರಾಗಿ ರೂಪುಗೊಂಡು ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಆನಂದ.ಎಂ, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸರ್ಕಾರಿ ಅಭಿಯೋಜಕರಾದ ವೆಂಕಟಲಕ್ಷ್ಮಮ್ಮ ಜಿ., ಹಿರಿಯ ಮಧ್ಯಸ್ಥಿಕ ತರಬೇತುದಾರರಾದ ಬೀನಾ ದೇವರಾಜ್ ಮತ್ತು ಗೀತಾದೇವಿ ಎಂ. ಪಾಪಣ್ಣ, ಅನುರಾಧ ಎಸ್., ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಬಿ. ಉಪಸ್ಥಿತರಿದ್ದರು.