ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪ್ರಸ್ತುತ ಕಾಲಘಟ್ಟದಲ್ಲಿ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಅತ್ಯಂತ ಅಗತ್ಯವಾಗಿ ಬೇಕಾಗಿದೆ. ಇಂತಹ ಸೂಕ್ತವಾದ ಸಂದರ್ಭದಲ್ಲಿ ಸ್ವಾಮೀಜಿಯವರು ತಮ್ಮ ದೂರದೃಷ್ಟಿಯಿಂದ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜು ಆರಂಭಿಸಿರುವುದು ಶ್ಲಾಘನೀಯವಾದುದು ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದರು.ತಾಲೂಕಿನ ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನ ಮಠದ ಗೊಮ್ಮಟನಗರದಲ್ಲಿರುವ ಬಾಹುಬಲಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನೂತನವಾಗಿ ಪ್ರಾರಂಭವಾದ ಬಾಹುಬಲಿ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜು ಉದ್ಘಾಟಿಸಿ ಮಾತನಾಡಿದ ಅವರು, ಪ್ಯಾರಾ ಮೆಡಿಕಲ್ ಸೈನ್ಸ್ ಹಾಗೂ ನರ್ಸಿಂಗ್ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎಂದು ತಿಳಿಸಿದರು.
ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಮ್ಮ ಆಹಾರ ಪದ್ಧತಿ ಬದಲಾಗಿರುವುದರಿಂದ ರೋಗಪೀಡಿತ ಸಮಾಜ ನಿರ್ಮಾಣವಾಗಿದೆ. ಕೃಷಿಯಲ್ಲಿ ಅತಿಯಾದ ರಸಗೊಬ್ಬರ, ಕ್ರಿಮಿ ನಾಶಕಗಳನ್ನು ಬಳಸುತ್ತಿರುವುದರಿಂದ ನಾವು ತಿನ್ನುವ ಆಹಾರ ವಿಷಪೂರಿತಗೊಂಡಿದೆ. ನಮ್ಮ ರಾಜ್ಯದಲ್ಲಿ ಕ್ಯಾನ್ಸರ್ ಕಾಯಿಲೆ ಬಹುಬೇಗ ಹರಡುತ್ತಿರುವ ರೋಗವಾಗಿದ್ದು, ಇದಕ್ಕೆ ನಮ್ಮ ಆಹಾರ ಪದ್ಧತಿಯೇ ಬಹುಮುಖ್ಯ ಕಾರಣವಾಗಿದೆ. ಇದು ಹೀಗೆ ಮುಂದುವರಿದರೆ ತಾಲೂಕಿಗೆ ಒಂದು ಕ್ಯಾನ್ಸರ್ ಆಸ್ಪತ್ರೆ ತೆರೆಯಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಶ್ರವಣಬೆಳಗೊಳ ಮಠದ ಪರಂಪರೆ ಪುರಾತನವಾದುದು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀಕ್ಷೇತ್ರದ ಅಭಿವೃದ್ಧಿಗೆ ಹಿಂದಿನ ಚಾರುಕೀರ್ತಿ ಶ್ರೀಗಳು ಅವಿರತ ಶ್ರಮಿಸಿದ್ದರು. ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಶ್ರವಣಬೆಳಗೊಳದ ಕೀರ್ತಿಯನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನೆಲೆಗೆ ತಂದವರು. ಅದೇ ಪರಂಪರೆಯನ್ನು ಇಂದಿನ ಪೀಠಾಧ್ಯಕ್ಷರಾದ ಅಭಿನವ ಚಾರುಶ್ರೀಗಳವರು ಮುಂದುವರಿಸುವಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಕಾರ್ಯೋನ್ಮುಖರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮಠಾಧೀಶರ ಸಾಧನೆ ಅನನ್ಯವಾಗಿದೆ. ಮಠ, ಮಾನ್ಯಗಳು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡದಿದ್ದರೆ ಸರ್ಕಾರ ಸಂಪೂರ್ಣವಾಗಿ ಸಾಕ್ಷರತೆ ನೀಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಉತ್ತರ ಕರ್ನಾಟಕದಲ್ಲಿ ಸಿದ್ದು ನ್ಯಾಮಗೌಡ ರವರ ನೇತೃತ್ವದಲ್ಲಿ ರೈತರಿಂದಲೇ ನಿರ್ಮಾಣಗೊಂಡ ಬ್ಯಾರೇಜ್ ಇಡೀ ದೇಶದಲ್ಲೇ ಮನ್ನಣೆ ಪಡೆದ ಮಾದರಿ ಬ್ಯಾರೇಜನ್ನು ಕರ್ಮಯೋಗಿ ಚಾರುಕೀರ್ತಿ ಶ್ರೀಗಳವರು ಅಡಿಗಲ್ಲು ಹಾಕಿ ಚಾಲನೆ ನೀಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಇಡೀ ದೇಶದಲ್ಲಿ ಸ್ವಾರ್ಥರಹಿತ ಧಾರ್ಮಿಕ ಕ್ಷೇತ್ರ ಇದ್ದರೆ ಅದು ತ್ಯಾಗ, ಅಹಿಂಸೆಯನ್ನು ಪ್ರಪಂಚಕ್ಕೆ ಸಾರಿದ ಭಗವಾನ್ ಬಾಹುಬಲಿ ಸ್ವಾಮಿಯ ಪುಣ್ಯಕ್ಷೇತ್ರ ಶ್ರವಣಬೆಳಗೊಳ. ಅಳಿವಿನ ಅಂಚಿನಲ್ಲಿದ್ದ ಪ್ರಾಕೃತ ಭಾಷೆಯನ್ನು ಪುನರುಜ್ಜೀವನಗೊಳಿಸಲು ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಐದು ದಶಕಗಳ ಕಾಲ ಶ್ರಮಿಸಿದರು. ಮಕ್ಕಳ ಆಸ್ಪತ್ರೆಯನ್ನು ತೆರೆದು ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಆಶಾಕಿರಣವಾದವರು. ಒಂದನೇ ತರಗತಿಯಿಂದ ಇಂಜಿನಿಯರಿಂಗ್ ಪದವಿವರೆಗೆ ಶಿಕ್ಷಣ ಸಂಸ್ಥೆಗಳನ್ನು ತೆಗೆದು ಗ್ರಾಮೀಣ ಭಾಗದಲ್ಲೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಎಂದರು.
ಹಿರಿಯ ಶ್ರೀಗಳು ಕ್ಷೇತ್ರದ ಅಭಿವೃದ್ಧಿಗೆ ಅಡಿಗಲ್ಲು ಹಾಕಿದ್ದರೆ, ಇಂದಿನ ಅಭಿನವ ಚಾರುಶ್ರೀಗಳು ಹೈಟೆಕ್ ಸ್ಪರ್ಶ ನೀಡಿ ಉನ್ನತೀಕರಣಗೊಳಿಸುತ್ತಿದ್ದಾರೆ. ಶ್ರವಣಬೆಳಗೊಳ ಕ್ಷೇತ್ರಕ್ಕೆ ಹಿಂದೆ ಸಚಿವರಾಗಿದ್ದ ಎಚ್.ಸಿ.ಶ್ರೀಕಂಠಯ್ಯ ನವರು, ಎಚ್.ಡಿ.ದೇವೇಗೌಡರು, ಎಚ್.ಡಿ.ರೇವಣ್ಣರವರು ತಮ್ಮದೇ ಆದ ಕೊಡುಗೆ ನೀಡಿದ್ದು, ಯುಜಿಡಿ, ನದಿಯಿಂದ ಕುಡಿಯುವ ನೀರಿನ ಸಂಪರ್ಕ, ವಸತಿ ಗೃಹ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. ಅದೇ ದಾರಿಯಲ್ಲಿ ನಾವು ಕೂಡ ಶ್ರೀಗಳ ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದೇವೆ ಎಂದರು.ಲಕ್ಷ್ಮಣ ಸವದಿಯವರು ಮುಂದಿನ ದಿನದಲ್ಲಿ ಸಚಿವರಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಬೇಕು ಹಾಗೂ ಸರ್ಕಾರದ ಗಮನಕ್ಕೆ ತಂದು ಶ್ರೀ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ಶ್ರೀ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಪಾವನ ಸಾನ್ನಿಧ್ಯ ವಹಿಸಿದ್ದರು.ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಫ್ತಾಬ್ ಪಾಷಾ, ಪ್ಯಾರಾ ಮೆಡಿಕಲ್ ಬೋರ್ಡ್ ವಿಶೇಷ ಅಧಿಕಾರಿ ಡಾ. ಕೆ.ಆರ್. ವಿಜಯಕುಮಾರ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ನರ್ಸಿಂಗ್ ವಿಭಾಗದ ಸಹಾಯಕ ನಿರ್ದೇಶಕ ಶ್ರೀಕಾಂತ್ ಫುಲಾರೆ, ಕರ್ನಾಟಕ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಮೇಲ್ವಿಚಾರಕ ಎಂಎಸ್ ಶರತ್ ಬಾಬು, ಬಾಹುಬಲಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಎ.ಸಿ.ಪಾಟೀಲ್, ಕಾರ್ಯದರ್ಶಿ ಬಬನ್ ಪಿ. ದತವಾಡೆ, ಆಡಳಿತ ವೈದ್ಯಾಧಿಕಾರಿಗಳಾದ ಡಾ. ಬಿ.ಆರ್.ಯುವರಾಜ್, ಡಾ. ಅರುಣ್ ಕುಮಾರ್, ಪ್ರಾಂಶುಪಾಲರಾದ ಡಾ. ಪೂರ್ಣಿಮಾ, ಪವಿತ್ರ ಮುಂತಾದವರಿದ್ದರು.