ಸಾರಾಂಶ
ಮೆಡಿಕಲ್ ಕಾಲೇಜು ಆಸ್ಪತ್ರೆ ನಿರ್ಮಾಣವಾಗಿ ಹಲವು ತಿಂಗಳು ಕಳೆದಿದ್ದರೂ ಈ ವರೆಗೂ ಉದ್ಘಾಟಿಸಿಲ್ಲ. ಈಗಿರುವ ಮೆಡಿಕಲ್ ಕಾಲೇಜ್ 700 ಬೆಡ್ ಹೊಂದಿದ್ದು ನಿರ್ಮಾಣ ಕಾರ್ಯ ಆರಂಭವಾಗಿ ಹಲವು ದಿನಗಳೇ ಕಳೆದಿದ್ದರೂ ಕಾಮಗಾರಿ ಪೂರ್ಣಗೊಳಿಸಿ ಮುಗಿಸಿ, ಜನರಿಗೆ ಅನುಕೂಲ ಕಲ್ಪಿಸಿಲ್ಲ.
ಕೊಪ್ಪಳ:
ನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಸ್ವಾಗತಾರ್ಹ. ಇದರ ಜತೆಗೆ ಕೊಪ್ಪಳ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟಿಸಿ, ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಒತ್ತಾಯಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಮೆಡಿಕಲ್ ಕಾಲೇಜು ಆಸ್ಪತ್ರೆ ನಿರ್ಮಾಣವಾಗಿ ಹಲವು ತಿಂಗಳು ಕಳೆದಿದ್ದರೂ ಈ ವರೆಗೂ ಉದ್ಘಾಟಿಸಿಲ್ಲ. ಈಗಿರುವ ಮೆಡಿಕಲ್ ಕಾಲೇಜ್ 700 ಬೆಡ್ ಹೊಂದಿದ್ದು ನಿರ್ಮಾಣ ಕಾರ್ಯ ಆರಂಭವಾಗಿ ಹಲವು ದಿನಗಳೇ ಕಳೆದಿದ್ದರೂ ಕಾಮಗಾರಿ ಪೂರ್ಣಗೊಳಿಸಿ ಮುಗಿಸಿ, ಜನರಿಗೆ ಅನುಕೂಲ ಕಲ್ಪಿಸದಿರುವುದು ಸರಿಯಾದ ಕ್ರಮವಲ್ಲ ಎಂದರು.
ಕೊಪ್ಪಳ ವೈದ್ಯಕೀಯ ಕಾಲೇಜು ಆರಂಭವಾಗಿ ದಶಕಗಳೆ ಕಳೆದಿದ್ದರೂ ಇದಕ್ಕೆ ಬೇಕಾದ ಆಸ್ಪತ್ರೆ ಈ ವರೆಗೆ ಉದ್ಘಾಟನೆಯಾಗದಿರುವುದು ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಕೊಪ್ಪಳ ಮೆಡಿಕಲ್ ಕಾಲೇಜು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸುಪರ್ದಿಯಲ್ಲಿದ್ದ ಜಿಲ್ಲಾಸ್ಪತ್ರೆಯ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಮೊದಲು ಕೊಪ್ಪಳ ಮೆಡಿಕಲ್ ಕಾಲೇಜಿನ ಆಸ್ಪತ್ರೆ ತ್ವರಿತವಾಗಿ ಉದ್ಘಾಟಿಸಿ, ಜನತೆಗೆ ಅನುಕೂಲ ಕಲ್ಪಿಸಿ ಎಂದು ಒತ್ತಾಯಿಸಿದ್ದಾರೆ.ಇನ್ನೂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಬಳಿ ಅವಶ್ಯಕವಾಗಿರುವ ಮೇಲ್ಸೆತುವೆ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದ್ದರೂ ರಾಜ್ಯ ಸರ್ಕಾರ ಆರಂಭಿಸದೇ ಇರುವುದು ಸರಿಯಾದ ಕ್ರಮವಲ್ಲ. ಇದರಿಂದ ರೋಗಿಗಳಿಗೆ ಸಮಸ್ಯೆಯಾಗಲಿದೆ. ಈ ನಿಟ್ಟಿನಲ್ಲಿಯೂ ಸರ್ಕಾರ ತುರ್ತಾಗಿ ಕ್ರಮವಹಿಸಲಿ ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.ಇಎಸ್‌ಐ ಆಸ್ಪತ್ರೆಗೆ ಬಲ ತುಂಬಿ:
ಕೇಂದ್ರ ಸರ್ಕಾರ ಜಿಲ್ಲೆಗೆ ಇಎಸ್‌ಐ ಆಸ್ಪತ್ರೆ ಆರಂಭಿಸಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಟ್ಟಿದ್ದರೂ ಅದಕ್ಕೊಂದು ಶಾಶ್ವತ ನೆಲೆ ಹಾಗೂ ಬಲವರ್ಧನೆ ಮಾಡುವ ಕೆಲಸ ಸಂಸದ ರಾಜಶೇಖರ ಹಿಟ್ನಾಳ್ ಅವರಿಂದ ಈ ವರೆಗೆ ಜರುಗದೇ ಇರುವುದು ದುರದೃಷ್ಟಕರದ ಸಂಗತಿಯಾಗಿದೆ ಎಂದು ಡಾ. ಬಸವರಾಜ ಕ್ಯಾವಟರ್ ಹೇಳಿದ್ದಾರೆ. ಈ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ ಆರಂಭಿಸಲಾಗಿತ್ತು. ಆದರೆ, ಇಎಸ್‌ಐ ಆಸ್ಪತ್ರೆಯ ಅಭಿವೃದ್ಧಿಯ ಕಡೆಗೆ ಲಕ್ಷ್ಯ ವಹಿಸದೇ ಇದ್ದುದ್ದರಿಂದ ವೈದ್ಯರಿಲ್ಲದ ಪರಿಸ್ಥಿತಿಗೆ ಬಂದು ನಿಂತಿದೆ. ಬಸಾಪೂರದ ಬಳಿ ಜಾಗ ಮೀಸಲಿಟ್ಟರೂ ಆಸ್ಪತ್ರೆ ಆರಂಭಿಸುವ ಕಾರ್ಯ ಆರಂಭವಾಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೇ ಇಎಸ್‌ಐ ಆಸ್ಪತ್ರೆ ಮುಚ್ಚುವ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ. ಇದರಿಂದ ಜಿಲ್ಲೆಯ ಲಕ್ಷಾಂತರ ಕಾರ್ಮಿಕರಿಗೆ ಅನಾನುಕೂಲವಾಗಲಿದೆ. ಹೀಗಾಗಿ ಇಎಸ್‌ಐ ಆಸ್ಪತ್ರೆ ಬಲವರ್ಧನಗೆ ಸಂಸದರು ತುರ್ತು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.