ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಸಾಮಾನ್ಯ ವಿಷಯವೇ ಸರಿ, ಆದರೆ ಕೆಲವೊಮ್ಮೆ ಕೆಲವು ಅಧಿಕಾರಿಗಳ ಕರ್ತವ್ಯದಲ್ಲಿನ ಪ್ರಾಮಾಣಿಕತೆ, ಶ್ರದ್ಧೆ ಹಾಗೂ ಕಾರ್ಯವೈಖರಿಯನ್ನು ಗಮನಿಸಿ ಅಂಥವರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ ವರ್ಗಾವಣೆಯಲ್ಲಿ ಸಡಿಲಿಕೆ ನೀಡಬಾರದೇಕೆ ಎಂದು ಸ್ಥಳೀಯರು, ತುಂಬು ಗರ್ಭಿಣಿಯರು ಸೇರಿ ಕೂಲಿ ಕಾರ್ಮಿಕರು ಮಾಧ್ಯಮದ ಮೂಲಕ ಮನವಿ ಮಾಡಿದ ಸನ್ನಿವೇಶ ಅರೇಹಳ್ಳಿ ಭಾಗದಲ್ಲಿ ವರದಿಯಾಗಿದೆ.ತಾಲೂಕಿನ ಅರೇಹಳ್ಳಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾ ಜಿ. ಅವರ ವೈದ್ಯಕೀಯ ಕ್ಷೇತ್ರದಲ್ಲಿನ ಅಭೂತಪೂರ್ವ ಸೇವೆಯನ್ನು ಪರಿಗಣಿಸಿ ಇತ್ತೀಚೆಗೆ ರಾಜ್ಯ ರಾಜಧಾನಿಯ ಅರಮನೆ ಮೈದಾನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 516ನೇ ಜನ್ಮದಿನ ಕಾರ್ಯಕ್ರಮದಲ್ಲಿ ಕರುನಾಡ ಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು, ಆದರ ಬೆನ್ನಲ್ಲೇ ಅವರ ವರ್ಗಾವಣೆ ಪ್ರಕ್ರಿಯೆ ಇದೀಗ ದಿಢೀರ್ ಆರಂಭವಾಗಿದ್ದು, ಸುತ್ತಮುತ್ತಲಿನ ಮಹಿಳೆಯರು, ಕೂಲಿ ಕಾರ್ಮಿಕರು ಹಾಗೂ ಮುಖ್ಯವಾಗಿ ತುಂಬು ಗರ್ಭಿಣಿಯರಲ್ಲಿ ಆತಂಕ ಎದುರಾಗಿದೆ. ಅವರ ಸೇವೆ ಇಲ್ಲಿಯೇ ಇನ್ನಷ್ಟು ಜನರಿಗೆ ಲಭಿಸಬೇಕು ಎಂದು ಮಾಧ್ಯಮದ ಮೂಲಕ ವಿನಂತಿಸಿಕೊಂಡಿದ್ದಾರೆ.
ಅನೇಕ ಭಾಗಗಳಲ್ಲಿ ವೈದ್ಯರನ್ನು ವರ್ಗಾವಣೆ ಮಾಡಿ ಎಂದು ಪ್ರತಿಭಟನೆಗಳು ನಡೆಯುವುದು ಸಾಮಾನ್ಯ. ಆದರೆ ಇವರನ್ನು ಉಳಿಸಿಕೊಳ್ಳಲು ಅನೇಕ ಪ್ರಯಗಳಾಗುತ್ತಿವೆ. ವೈದ್ಯಾಧಿಕಾರಿಯಾಗಿ ಡಾ. ಮಮತಾ ಜಿ. ಆಸ್ಪತ್ರೆಗೆ ಕಾಲಿಡುತ್ತಿದ್ದಂತೆ ಆಸ್ಪತ್ರೆಯಲ್ಲಿ ಮಾರ್ಪಾಡುಗಳನ್ನು ಮಾಡುತ್ತ, ಎಲ್ಲಾ ಸಿಬ್ಬಂದಿ ವರ್ಗದವರನ್ನು ನಿತ್ಯ ಅತ್ಯಂತ ಉತ್ಸಾದಿಂದ ಕಾರ್ಯನಿರ್ವಹಿಸಲು ಪ್ರೇರಣೆ ನೀಡುತ್ತ, ಆಸ್ಪತ್ರೆಯ ಸುತ್ತಲೂ ಶುಚಿತ್ವಕ್ಕೆ ಮಹತ್ವ ಕೊಟ್ಟಿದ್ದರು, ಎಲ್ಲದಕ್ಕೂ ಮುಖ್ಯವಾಗಿ ಆಸ್ಪತ್ರೆಗೆ ಬರುವ ಎಲ್ಲರ ಅದರಲ್ಲೂ ಗರ್ಭಿಣಿಯರ ಸುಂದರ ಬದುಕಿಗೆ ಆಶಾಕಿರಣವಾಗಿದ್ದರು.ಕಳೆದ 9 ವರ್ಷಗಳಲ್ಲಿ ಸರಿ ಸುಮಾರು 3500ಕ್ಕೂ ಹೆಚ್ಚಿನ ಆರೋಗ್ಯಪೂರ್ಣ ಹೆರಿಗೆ ಮಾಡಿರುವುದಲ್ಲದೆ, ಹಲವು ಸ್ತ್ರೀಯರ ಬಂಜೆತನ ನಿವಾರಣೆ ಮಾಡುವ ಮೂಲಕ ಹೊಸ ಬದುಕಿಗೆ ಅಧ್ಯಾಯ ರೂಪಿಸಿದ್ದಾರೆ. ಅಲ್ಲದೆ ಕೆಲ ತಿಂಗಳ ಹಿಂದೆ ದಿನದ 24 ಗಂಟೆಯಲ್ಲಿ 8 ಹೆರಿಗೆ ಮಾಡುವ ಮೂಲಕ ಖ್ಯಾತರಾಗಿದ್ದರು.
ತಂದೆಯ ಹುಟ್ಟುಹಬ್ಬದ ಪ್ರಯುಕ್ತ ಹೆಲ್ತ್ ಕ್ಯಾಂಪ್, ಕಡು ಬಡತನದಲ್ಲಿ ಇರುವ ಕೆಲ ಕುಟುಂಬಗಳಿಗೆ ಅಗತ್ಯ ವಸ್ತುಗಳ ಪೂರೈಕೆ, ಮಗಳ ಹುಟ್ಟುಹಬ್ಬದ ದಿನದಂದು ವಿವಿಧ ಶಾಲೆಗಳಿಗೆ ಸಾಮಗ್ರಿಗಳ ವಿತರಣೆ, ಹಬ್ಬ ಹರಿದಿನಗಳಲ್ಲಿ ಸಿಬ್ಬಂದಿ ವರ್ಗದವರಿಗೆ ಸೀರೆ ಉಡುಗೊರೆ, ಸುತ್ತಮುತ್ತಲಿನ ಶಾಲೆಗಳಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಮಳೆಗಾಲದಲ್ಲಿ ಆಶಾ ಕಾರ್ಯಕರ್ತೆಯರಿಗೆ ರೇನ್ ಕೋಟ್‌ಗಳ ವಿತರಣೆ ಮುಂತಾದ ಕಾರ್ಯಗಳನ್ನು ಮಾಡಿದ್ದಾರೆ. ಹೀಗಾಗಿ ಇವರ ವರ್ಗಾವಣೆ ಈ ಭಾಗದ ಜನರಿಗೆ ಬೇಸರ ಮೂಡಿಸಿದೆ.